ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಫಎಂಗಲ್ ಚಂಡಮಾರುತದ ಅಬ್ಬರ ಪರಿಣಾಮ, ರಾಜ್ಯದ ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ, ಚಳಿಗಾಳಿ ಆರಂಭಗೊಂಡಿದೆ.
ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಕೋಲಾರ, ತುಮಕೂರು ಸೇರಿ ಇತರೆ ಜಿಲ್ಲೆಗಳಲ್ಲಿ ಮೋಡ ಕವಿತ ವಾತಾವರಣದ ಜೊತೆಗೆ ಸಾಮಾನ್ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರಿನಲ್ಲಿ ಇಂದು ಆರೇಂಜ್ ಅಲರ್ಟ್ ಅನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಯಾವುದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಮೀನುಗಾರಿಕೆಗೆ ತೆರಳಿದ್ದರೇ, ಕೂಡಲೇ ವಾಪಾಸಾಗುವಂತೆ ಮುನ್ಸೂಚನೆ ನೀಡಿದ್ದಾರೆ. ಮಂಗಳೂರಿನ ಹಲವೆಡೆ ಸತತ ಒಂದು ಗಂಟೆಯಿಂದ ಭಾರೀ ಮಳೆಯ ಜೊತೆಗೆ ಸುಳಿಗಾಳಿ ಬೀಸುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಕತ್ತಲು ಕವಿದಂತೆ ಆಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.
ಇಂದು ರಾತ್ರಿ ಅರಬ್ಬಿ ಸಮುದ್ರ ತೀರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಸಮುದ್ರ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅರಬ್ಬೀ ಸಮುದ್ರದಲ್ಲಿ ಮೀನುಗಾರರು ಕಟ್ಟೆಚ್ಚರ ವಹಿಸಲು ತಿಳಿಸಿದೆ.