ಬೆಂಗಳೂರು : ಮುಂಗಾರು ಕರ್ನಾಟಕ ಪ್ರವೇಶಿಸಿದ ಒಂದೇ ದಿನದಲ್ಲಿ ರಾಜ್ಯದ ವಿವಿಧೆಡೆ ಮಳೆ ಆರ್ಭಟ ತೀವ್ರಗೊಂಡಿದೆ. ಕರಾವಳಿ, ಮಲೆನಾಡು ಹಾಗೂ ಕೊಡಗಿನ ವ್ಯಾಪ್ತಿಯಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲೆಯ ಶಾಲೆ, ಕಾಲೇಜಿಗೆ 2 ದಿನ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ವಿವಿ ವ್ಯಾಪ್ತಿಯ ಎಲ್ಲ ಘಟಕ, ಸರ್ಕಾರಿ, ಸಂಯೋಜಿತ ಮಹಾ ವಿದ್ಯಾಲಯಗಳಿಗೂ ಮೇ 26 – 27 ರಜೆ ಘೋಷಣೆ ಮಾಡಲಾಗಿದೆ.
ಇಂದಿನಿಂದ ಮುಂದಿನ ಮೂರು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್, ಮೈಸೂರು, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಮುಂಗಾರು ಮಳೆ ಪದಾರ್ಪಣೆಯಾಗಿ ಒಂದೇ ದಿನಕ್ಕೆ ಕರಾವಳಿ, ಮಲೆನಾಡು ಸೇರಿ ಒಳನಾಡಿನ ವಿವಿಧ ಜಿಲ್ಲೆಗಳನ್ನು ಪ್ರವೇಶಿಸಿದ್ದು, ಉತ್ತಮ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಸೇರಿ ಮೊದಲಾದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಮುಂಗಾರು ಮಾರುತಗಳು ಪ್ರಬಲವಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.