ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಇತಿಹಾಸವನ್ನು ನೀವು ಮರೆಯಬೇಡಿ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ ಎಂಬುದಾಗಿ ಸವಾಲ್ ಹಾಕಿದ್ದಾರೆ.
ಇಂದು ರಾಹುಲ್ ಗಾಂಧಿಗೆ ಪತ್ರ ಬರೆದಿರುವಂತ ಅವರು, ಮಾನ್ಯ ರಾಹುಲ್ ಗಾಂಧಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಕಪಟ ನಾಟಕದ “ಸೂತ್ರದಾರ”ರಿದ್ದಾರೆ, ಅವರಿಂದ ಪ್ರೇರೇಪಿತರಾದ ನೀವು “ಪಾತ್ರದಾರಿ”ಯಾಗಿ ಕರ್ನಾಟಕಕ್ಕೆ ಬರುತ್ತಿದ್ದೀರಿ. ಇಲ್ಲಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ ಕೋರುತ್ತೇನೆ.
ದಯವಿಟ್ಟು ನನ್ನ ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ನೈತಿಕತೆ ಬೋಧಿಸುವ ಔದಾರ್ಯ ತೋರಿಸಿ. ನೀವು ಈ ಪ್ರಶ್ನೆಗಳಿಗೆ ಉತ್ತರ ನೀಡದೇ ಪ್ರತಿಭಟನೆ ನಡೆಸಿದರೆ, ನೀವು ಕಾಂಗ್ರೆಸ್ ಪಕ್ಷದ ನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುವ ಯೋಗ್ಯತೆ ನಿಮ್ಮಲ್ಲಿಲ್ಲ ಎಂಬ ಸಂದೇಶವೇ ಪ್ರಧಾನವಾಗುತ್ತದೆ.
ಇತಿಹಾಸವನ್ನು ನೀವು ಮರೆಯಬೇಡಿ!!
1. ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಹಲವು ಚುನಾವಣೆಗಳಲ್ಲಿ ಸೋಲಿಸಲು ಕಾಂಗ್ರೆಸ್ ಪಕ್ಷ ಮತಗಳ್ಳತನ ಮಾಡಲಿಲ್ಲವೇ?
2. ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಸೋಲಿಸಲು ಕಾಂಗ್ರೆಸ್ ತೆಗೆದುಕೊಂಡ ನೈತಿಕ ಕಾರಣಗಳೇನು?
3. ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಪಕ್ಷವು ನೀಡಿದ ನಿರಂತರ ಅವಮಾನಗಳ ಹಿಂದಿರುವ ನಿಮ್ಮ ನಿಜವಾದ ನಿಲುವೇನು?
4. 1975ರಲ್ಲಿ ನಿಮ್ಮ ಅಜ್ಜಿ ಶ್ರೀಮತಿ ಇಂದಿರಾ ಗಾಂಧಿಯವರು ನ್ಯಾಯಾಲಯದ ತೀರ್ಪಿನ ಪ್ರಕಾರ ಅನರ್ಹರಾಗಲು ಕಾರಣಗಳೇನು? ಅನರ್ಹರಾಗದಂತೆ ನಡೆಸಿದ ಕಾನೂನು ಬದಲಾವಣೆಗಳು ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ ಹಿಂದಿನ ಕಾರಣಗಳೇನು?
5. 1946ರ ತಾತ್ಕಾಲಿಕ ಸರ್ಕಾರದ ಪ್ರಧಾನ ಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಮಾನ್ಯ ನೆಹರೂ ಅವರಿಗೆ ಬೆಂಬಲ ಇರದಿದ್ದರೂ, ಅವರಿಗೆ ಅಧಿಕಾರ ಹೇಗೆ ಸಿಕ್ಕಿತು? ನೇಹರೂ ಅವರು ಶೂನ್ಯ ಮತಗಳನ್ನು ಪಡೆದಾಗಲೂ ಪ್ರಧಾನಿಯಾಗಲು ಆಗುವುದನ್ನು ಮತಗಳ್ಳತನವೆಂದರೆ ತಪ್ಪೆನಿಸುತ್ತದೆಯೇ?
6. ನೀವು ಹೇಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮತಗಳ್ಳತನ ಮಾಡಿದ್ದರೆ, ನೀವು ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಕುಳಿತುಕೊಳ್ಳುವ ಅವಕಾಶ ಸಿಗುತ್ತಿತ್ತೇ?
7. ಕರ್ನಾಟಕದಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಮೀಸಲಾಗಿದ್ದ SCSP-TSP ಯೋಜನೆಯ ₹39,000 ಕೋಟಿ ಹಣವನ್ನು ರಾಜ್ಯ ಸರ್ಕಾರ ಕಳ್ಳತನ ಮಾಡಿದೆ, ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ? ಕರ್ನಾಟಕದಲ್ಲಿ ಆಗಿರುವುದು ಮತಗಳ್ಳತನ ಅಲ್ಲ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಕಳ್ಳತನ ಆಗಿದೆ. ನಿಮ್ಮ ಹೋರಾಟ ದಲಿತರಿಗೆ ನ್ಯಾಯ ಕೊಡಿಸಲಿಕ್ಕೆ ಇರಬೇಕೇ ಹೊರತು, ಅನ್ಯಾಯದ ಪರವಾಗಿ ಅಲ್ಲ.
8. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ₹187 ಕೋಟಿ ಹಗರಣದ ಬಗ್ಗೆ ನೀವು ಯಾವಾಗ ಪ್ರತಿಭಟನೆ ಮಾಡುತ್ತೀರಿ?
9. ಮೈಸೂರು MUDA ದಲ್ಲಿ 14 ನಿವೇಶನ ಕಳ್ಳತನವಾಗಿತ್ತು, ನಂತರ “ಕಳ್ಳನಲ್ಲ” ಎಂದು ವಾಪಸ್ ನೀಡಿದ ಪ್ರಕರಣದ ವಿರುದ್ಧ ನಿಮ್ಮ ಪ್ರತಿಕ್ರಿಯೆ ಏನು?
10. ಎಕರೆಗಟ್ಟಲೆ ಸಿಎ ಸೈಟ್ ಹಗರಣ, ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಅಧಿಕಾರಿಗಳ ಆತ್ಮಹತ್ಯೆ — ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ವಿಫಲತೆಗಳನ್ನು ತೋರಿಸುತ್ತಿಲ್ಲವೆ? ಇವುಗಳ ವಿರುದ್ಧದ ನಿಮ್ಮ ಹೋರಾಟ ಯಾವಾಗ?
11. RCB ವಿಜಯೋತ್ಸವದಲ್ಲಿ ಅಮಾಯಕರು ಮೃತಪಟ್ಟಿದ್ದು, ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯ ಕಾರಣದಿಂದಾಗಿಯೇ ಅಲ್ಲವೆ?
12. ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ, ಸೀಮಿತ ಸಮುದಾಯಕ್ಕೆ ಒಲವು ತೋರುತ್ತಿರುವ ಓಲೈಕೆ ರಾಜಕಾರಣ, ರಾಜ್ಯದ ಆರ್ಥಿಕ ಸ್ಥಿತಿ ಕುಸಿತ – ಇದರ ವಿರುದ್ಧ ನೀವು ಯಾವಾಗ ಹೋರಾಟ ಮಾಡುತ್ತೀರಿ?
13. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ, ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ?
ಈ ಎಲ್ಲಾ ಪ್ರಶ್ನೆಗಳಿಗೆ ನೈತಿಕ, ಸಾಂವಿಧಾನಿಕ ಉತ್ತರಗಳಿಲ್ಲದೆ ನೀವು ಪ್ರತಿಭಟನೆ ಮಾಡಿದರೆ, ಅದು ನಿಮ್ಮ ರಾಜಕೀಯದ ಕಪಟ ನಾಟಕವೇ ಹೊರತು, ಹೋರಾಟವಲ್ಲ.
ಮಾನ್ಯ ರಾಹುಲ್ ಗಾಂಧಿಯವರೇ, ನನ್ನ ಈ ಪ್ರಶ್ನೆಗಳಿಗೆ ನೀವು ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು. ಇಲ್ಲವಾದರೆ, ನೀವು ನಡೆಸುತ್ತಿರುವ ಕಪಟ ನಾಟಕದ ಪ್ರತಿಭಟನೆಗೆ ನೀತಿಭಾರವಿಲ್ಲ. ನೀವು ನಿಜವಾಗಿಯೂ ಹೋರಾಟದ ಮನೋಭಾವ ಹೊಂದಿದ್ದರೆ, ಮೊದಲಿಗೆ ಮೋಸ, ವಂಚನೆ & ಅನ್ಯಾಯವನ್ನೇ ಸಿದ್ಧಾಂತವನ್ನಾಗಿ ಮಾಡಿಕೊಂಡಿರುವ ನಿಮ್ಮ ಕಾಂಗ್ರೆಸ್ ನ ಒಳಗಣದ ದ್ವಂದ್ವ, ದ್ವಿಮುಖ ನೀತಿ ಮತ್ತು ಇತಿಹಾಸದ ದೋಷಗಳನ್ನು ಎದುರಿಸಿ, ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ. ನಂತರ ಹೋರಾಟ ನಡೆಸಿ. ನಿಮ್ಮ ಈ ಕಪಟ ಹೋರಾಟದಲ್ಲಿ ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನ ಎದ್ದು ಕಾಣಿಸುತ್ತಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ, ದಲಿತರ ಹಣ ಕಳ್ಳತನ ಮಾಡಿರುವುದರ ವಿರುದ್ಧ, ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ವಿರುದ್ಧ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ, ಇನ್ನೂ ಅನೇಕ ವಿಷಯಗಳ ವಿರುದ್ಧ ನಾವು ಜನಾಂದೋಲನ ರೂಪಿಸಿ, ನಾವೆಲ್ಲರೂ ಒಟ್ಟಾಗಿ ಹೋರಾಡೋಣ ಬನ್ನಿ. ಆದರೆ ಅದಕ್ಕೆ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ನೀಡುವ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದಿದ್ದಾರೆ.
BREAKING: ಆಂಧ್ರಪ್ರದೇಶದಲ್ಲಿ ಗ್ರಾನೈಟ್ ಕ್ವಾರಿಯಲ್ಲಿ ಕಲ್ಲು ಕುಸಿದುಬಿದ್ದು 6 ಕಾರ್ಮಿಕರು ದುರ್ಮರಣ