ಬೆಂಗಳೂರು: ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬಹುಶಃ ಒಬ್ಬ ಹುಡುಗಾಟದ ಹುಡುಗ. ಹೀಗೆ ಹುಡುಗಾಟ ಆಡುತ್ತಿದ್ದರೆ ಜನರು ನಿಮ್ಮನ್ನು ಪ್ರಬುದ್ಧ ನಾಯಕ ಎಂದು ತಿಳಿದುಕೊಳ್ಳುವುದಿಲ್ಲ ಎಂಬುದಾಗಿ ನೋವಿನಿಂದ ತಿಳಿಸಲು ಬಯಸುವುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ವಿಪಕ್ಷ ನಾಯಕ ಆರ್.ಅಶೋಕ್ ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಮೊದಲೇ, ಮತ ಎಣಿಕೆ ನಡೆಯುತ್ತಿದ್ದಾಗ ಪತ್ರಕರ್ತರು ಪ್ರಶ್ನಿಸಿದಾಗ ಡಿ.ಕೆ.ಶಿವಕುಮಾರ್ ಅವರು, ನಮಗೆ 136 ಸೀಟ್ ಬಂದೇ ಬರಲಿದೆ ಎಂದಿದ್ದರು. ಇದು ಶಾಸ್ತ್ರದಲ್ಲಿ ಬರುತ್ತದೆಯೇ ಎಂದು ಕೇಳಿದರು. ಅಷ್ಟೇ ಸೀಟು ಬಂತಲ್ಲವೇ? ಚುನಾವಣಾ ಅಕ್ರಮ ಮಾಡಿ, 136 ಸೀಟ್ ಎಂಬುದಾಗಿ ಖಾತ್ರಿ ಪಡಿಸಿಕೊಂಡಿದ್ದೀರಾ ಎಂದು ವ್ಯಂಗ್ಯವಾಡಿದರು. ಹಾಗಿದ್ದರೆ ಈ ಮತದಾರರ ಪಟ್ಟಿಗೆ ನೀವೇ ಹೆಸರು ಸೇರಿಸಿದ್ದೀರಿ ಎಂದು ಈಗ ಗೊತ್ತಾಗುತ್ತದೆ ಎಂದು ತಿಳಿಸಿದರು.
ಇದು ಮುಕ್ತ ಮತದಾನವೇ ಅಥವಾ ಗೌಪ್ಯ ಮತದಾನವೇ? ಸೇರಿಸಿದ ಹೆಸರಿದ್ದರೆ ಅವರು ಯಾವ ಪಕ್ಷಕ್ಕೆ ಮತದಾನ ಮಾಡಿದ್ದಾರೆಂದು ಹೇಗೆ ಗೊತ್ತಾಗಲು ಸಾಧ್ಯ ಎಂದು ಕೇಳಿದರು. ಒಂದೇ ವ್ಯಕ್ತಿಯ ಭಾವಚಿತ್ರವುಳ್ಳ ಹೆಸರು ಬೇರೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ಇದ್ದರೆ ಅಂಥ ವ್ಯಕ್ತಿಯ ವಾಸ ಪ್ರದೇಶ ಹೊರತುಪಡಿಸಿ ಎರಡನೇ ಅಥವಾ ಮೂರನೇ ಪ್ರದೇಶದ ಹೆಸರು ರದ್ದು ಮಾಡಲು ನಾವೇ ಹೋರಾಟ ಮಾಡಿದ್ದೆವು. ಇದೆಲ್ಲ ಕಾಂಗ್ರೆಸ್ ತಂತ್ರಗಳು ಎಂದು ಟೀಕಿಸಿದರು. ಈ ಹೋರಾಟವನ್ನು ಕಾಂಗ್ರೆಸ್ಸಿನವರು ವಿರೋಧಿಸಿದ್ದರು ಎಂದು ಆರೋಪಿಸಿದರು.
ದೆಹಲಿಯಿಂದ ಬಂದ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಮತಗಳ್ಳತನದ ಆರೋಪ ಮಾಡಿದ್ದಾರೆ. ಹಾಗಿದ್ದರೆ ಇಲ್ಲಿನ ಕಾಂಗ್ರೆಸ್ಸಿಗರು ಕತ್ತೆ ಕಾಯುತ್ತಿದ್ದರೇ ಎಂದು ಕೇಳಿದರು. ನಿಮಗೆ ನಾಚಿಕೆ ಆಗಬೇಕು ಎಂದು ತಿಳಿಸಿದರು. ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಲೋಪದೋಷವನ್ನು ನೀವು ಹುಡುಕಿ ರಾಹುಲ್ ಗಾಂಧಿಯವರಿಗೆ ಕೊಟ್ಟಿರಾ ಅಥವಾ ಅವರು ಹುಡುಕಿ ಬಂದು ನಿಮಗೆ ಹೇಳಿದರೇ ಎಂದು ಪ್ರಶ್ನೆ ಹಾಕಿದರು.
ಮಹಾರಾಷ್ಟ್ರದಲ್ಲಿ ಮತ ಇರುವವನು ಇನ್ನೊಂದು ಹಂತದಲ್ಲಿ ಕರ್ನಾಟಕದಲ್ಲಿ ಮತ ಹಾಕುತ್ತಾನಾ? ಮತದಾನ ಪ್ರಮಾಣ ಹೆಚ್ಚಳಕ್ಕೆ ಮನೆಯಲ್ಲಿ ಕುಳಿತಿರದೆ ಮತದಾನ ಮಾಡಿ ಎಂದು ಟಿ.ವಿ.ಗಳಲ್ಲಿ ಬರುತ್ತಿರುತ್ತದೆ. ಹಲವೆಡೆ ಮತದಾನದ ಸಮಸ್ಯೆ ತಪ್ಪಿಸಲು ಒಂದೇ ವ್ಯಕ್ತಿಯ ಫೋಟೊ ಎಂಬುದನ್ನು ಆಧಾರ ಇಟ್ಟುಕೊಂಡು ಯಾಕೆ ರದ್ದು ಮಾಡಲು ನೀವು ಒಪ್ಪುವುದಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಜಾತಿಗÀಣತಿಗೆ ಮತದಾರರ ಪಟ್ಟಿಯನ್ನು ಆಧಾರವಾಗಿ ಇಟ್ಟುಕೊಂಡಿದ್ದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಮಾತಿಗೂ ಮುಖ್ಯಮಂತ್ರಿಗಳ ಮಾತಿಗೂ ವಿರೋಧಾಭಾಸ ಇದೆ ಎಂದು ಟೀಕಿಸಿದರು.