ಬಳ್ಳಾರಿ: ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಐವಿ ದ್ರಾವಣ ಕಳಪೆ ಎಂದು ಆರು ತಿಂಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾದರೂ, ಅದನ್ನೇ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಇದರ ಹಿಂದೆ ಬಲಾಢ್ಯರ ಕಾಣದ ಕೈ ಕೆಲಸ ಮಾಡಿದೆ. ಈ ಸಾವುಗಳಿಗೆ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ವೈದ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ 10 ತಿಂಗಳಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ತಾಯಂದಿರು ಹೆರಿಗೆ ನಂತರ ಮೃತರಾಗಿದ್ದಾರೆ. ಈಗ ಜನರಲ್ಲಿ ಭಯದ ವಾತಾವರಣವಿದೆ. ಹಾಗೆಯೇ ಇಲ್ಲಿ ಮೆಡಿಕಲ್ ಮಾಫಿಯಾ ಕೂಡ ಇದೆ. ಇದು ಒಂದು ಜಿಲ್ಲೆಯಲ್ಲಿ ಕಂಡುಬಂದ ಸಮಸ್ಯೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಏನಾಗಿದೆ ಎಂಬುದನ್ನು ನೋಡಬೇಕಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಇಲ್ಲವಾದರೆ ನಾನೇ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದ ಬಳಿಕ ತಾಯಂದಿರ ಲಿವರ್ ವಿಫಲವಾಗಿದೆ. ರಕ್ತದೊತ್ತಡ ಸಂಪೂರ್ಣ ಇಳಿಮುಖವಾಗಿದೆ. ಈ ದ್ರಾವಣ ಯಾರ ಪ್ರಭಾವದಿಂದ ಕರ್ನಾಟಕಕ್ಕೆ ಬಂತು ಎಂದು ನೋಡಬೇಕಿದೆ. ಹಿಂದೆ ಇದ್ದ ಡ್ರಗ್ ಕಂಟ್ರೋಲರ್ ಆರು ತಿಂಗಳ ಹಿಂದೆ ಐವಿ ದ್ರಾವಣ ಖರೀದಿಸಬಾರದು ಎಂದು ಸರ್ಕಾರಕ್ಕೆ ತಿಳಿಸಿದ್ದರು. ಬಳಸಬಾರದು ಎಂದು ಹೇಳಿದ್ದರೂ ಯಾವ ಕಾಣದ ಬಲಾಢ್ಯ ಕೈ ಇದನ್ನೇ ಖರೀದಿ ಮಾಡಬೇಕೆಂದು ಪ್ರಭಾವ ಬೀರಿದೆ ಎಂದು ನೋಡಬೇಕಿದೆ. ಈ ಕಂಪನಿಯ ಅನ್ಸಾರಿ ಎಂಬುವರು ಇಲ್ಲಿ ಪ್ರಭಾವ ಬೀರಿದ್ದು, ಈತನನ್ನು ಬಂಧಿಸಿದರೆ ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಮಾಡಬಹುದು ಎಂದರು.
ಎರಡು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಿ ನುಣುಚಿಕೊಂಡಿದೆ. ಸಚಿವರೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಳಪೆ ದ್ರಾವಣ
ಅಧಿಕಾರಿಗಳಾದ ಚಿದಾನಂದ ವಟಾರೆ, ರಘುನಂದನ್, ನಂದಿನಿ, ಶೈಲಾವತಿ ಇದನ್ನು ಶಿಫಾರಸು ಮಾಡಿದ್ದಾರೆ. 97 ಬ್ಯಾಚ್‌ಗಳಲ್ಲಿ 23 ಬ್ಯಾಚ್‌ಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ವರದಿ ನೀಡಲಾಗಿದೆ. ಔಷಧಿಯಲ್ಲಿ ಶೇ.1 ರಷ್ಟು ಕಳಪೆ ಇದ್ದರೂ ಅದು ರೋಗಿಗಳಿಗೆ ಅಪಾಯ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕಳಪೆ ಔಷಧಿ ಇದ್ದರೂ ಅದನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಇದರ ಹಿಂದೆ ಸರ್ಕಾರವೇ ಇದೆ. ಈ ಸಾವುಗಳಿಗೆ ಯಾರು ನ್ಯಾಯ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಇದು ವೈದ್ಯರ ಲೋಪವಲ್ಲ. ಈ ದ್ರಾವಣ ನೀಡಿದ ನಂತರ ತಾಯಂದಿರ ಅಂಗಾಂಗ ವೈಫಲ್ಯವಾಗಿದೆ. ಸರ್ಕಾರವೇ ಬಾಳಂತಿಯರನ್ನು ಕೊಲ್ಲುವ ಕೆಲಸ ಮಾಡಿದ್ದು, ಇದು ಸಂಪೂರ್ಣವಾಗಿ ಸರ್ಕಾರದ್ದೇ ತಪ್ಪು. ಬಾಳಂತಿಯರಿಗೆ ಸಾವಿನ ಭಾಗ್ಯ ನೀಡಿದ ಕಾಂಗ್ರೆಸ್, ಹಾಸನದಲ್ಲಿ ಸಮಾವೇಶ ಮಾಡಲು ಮುಂದಾಗಿದೆ. ಖಜಾನೆ ಖಾಲಿ ಮಾತ್ರವಲ್ಲ, ಆಸ್ಪತ್ರೆಗಳಲ್ಲಿ ಔಷಧಿ ಕೂಡ ಖಾಲಿಯಾಗಿದೆ ಎಂದು ದೂರಿದರು.
ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಕಾಣೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಗೆ ಬಂದರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾತ್ರ ಇವರ ಕಾರ್ಯಕ್ರಮ ಎಂದರು.
25 ಲಕ್ಷ ರೂ. ಪರಿಹಾರ ಕೊಡಿ
ರಾಜ್ಯ ಸರ್ಕಾರ ಮೃತ ಬಾಳಂತಿಯರಿಗೆ 2 ಲಕ್ಷ ರೂ. ಪರಿಹಾರ ನೀಡಿದೆ. ಸರ್ಕಾರಕ್ಕೆ ಜೀವದ ಬೆಲೆ ಗೊತ್ತಿಲ್ಲ. ಮೃತಪಟ್ಟ ಪ್ರತಿ ಸಂತ್ರಸ್ತರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
Watch Video: ಫೆಂಗಲ್ ಚಂಡಮಾರುತ ಎಫೆಕ್ಟ್: ಲ್ಯಾಂಡ್ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ, ವಿಡಿಯೋ ವೈರಲ್
BREAKING: ಬ್ರಹ್ಮಗಂಟು ಧಾರಾವಾಹಿ ‘ಖ್ಯಾತಿಯ ನಟಿ ಶೋಭಿತಾ’ ಆತ್ಮಹತ್ಯೆ | Brahmangantu Shobita No More