ಪುಣೆ:ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ನಡೆದಿದೆ ಎನ್ನಲಾದ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನದ ಆರೋಪಗಳು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿವೆ. ಈ ಸೂಕ್ಷ್ಮ ವಿಷಯದ ಕುರಿತು ಪುಣೆಯಲ್ಲಿ ಪ್ರತಿಕ್ರಿಯಿಸಿದ ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್, “ಕಂಪನಿಯು ಈ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಮಹಿಳಾ ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.ಉದ್ಯೋಗಿಗಳಿಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಹಾಗೂ ಧಾರ್ಮಿಕವಾಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೋಲೀಸರು ಎಚ್‌ಆರ್ (HR) ಮ್ಯಾನೇಜರ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.








