ಬೆಂಗಳೂರು: ರಾಜ್ಯದ 5, 8 ಮತ್ತು 9ನೇ ತರಗತಿಗೆ ಈ ಬಾರಿ ಪಬ್ಲಿಕ್ ಪರೀಕ್ಷೆ ( Public Exam ) ನಿಗದಿಪಡಿಸಲಾಗಿದೆ. ಈ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ( School Education Department ) ಮಾದರಿ ಪ್ರಶ್ನೆ ಪತ್ರಿಕೆ ಕೂಡ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ, ಅಂಕಗಳ ವಿವರವನ್ನು ಹಂಚಿಕೊಂಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಈ ಮಾಹಿತಿ ಹಂಚಿಕೊಂಡಿದ್ದು, 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಸಂಕಲನಾತ್ಮಕ ಮೌಲ್ಯಾಂಕನ-2 ( SA-2)ಕ್ಕೆ ಸಂಬಂಧಿಸಿದಂತೆ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಸದರಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ 5, 8 ಮತ್ತು 9ನೇ ತರಗತಿಯ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ದಿನಾಂಕ 26-01-2024ರಂದು ಮಂಡಳಿಯ ವೆಬ್ ಸೈಟ್ https://kseab.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಈ ಮಾದರಿ ಪ್ರಶ್ನೋತ್ತರಗಳನ್ನು ವಿದ್ಯಾರ್ಥಿಗಳು ನೋಡಿ ವ್ಯಾಸಂಗ ಮಾಡುವಂತೆ ಸೂಚಿಸಿದೆ.
ಹೀಗಿದೆ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಸಂಖ್ಯೆ, ಅಂಕಗಳ ಮಾಹಿತಿ
5ನೇ ತರಗತಿಗೆ 40 ಅಂಕಗಳ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ. 2 ಗಂಟೆಯ ಸಮಯವಿರುತ್ತದೆ. ಒಂದು ಅಂಕದ 14 ಪ್ರಶ್ನೆಗಳು, 2 ಅಂಕದ 4 ಪ್ರಶ್ನೆಗಳು, 3 ಅಂಕದ 2 ಪ್ರಶ್ನೆಗಳು ಮತ್ತು 4 ಅಂಕದ 3 ಪ್ರಶ್ನೆಗಳನ್ನು ನೀಡಲಾಗಿದೆ.
8ನೇ ತರಗತಿಗೆ 50 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಎರಡೂವರೆ ಗಂಟೆ ಸಮಯ ನೀಡಲಾಗಿದೆ. ಒಂದು ಅಂಕದ 20 ಪ್ರಶ್ನೆಗಳು, 2 ಅಂಕದ 6 ಪ್ರಶ್ನೆಗಳು ಮತ್ತು 3 ಅಂಕದ 3 ಪ್ರಶ್ನೆಗಳು, 4 ಮತ್ತು 5 ಅಂಕದ ತಲಾ ಒಂದು ಪ್ರಶ್ನೆಗಳನ್ನು ನೀಡಿದೆ.
9ನೇ ತರಗತಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಮೂರೂಕಾಲು ಗಂಟೆ ಸಮಯ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 9ನೇ ತರಗತಿಯಿಂದಲೇ ಅಭ್ಯಾಸವಾಗಲಿ ಎಂಬ ಉದ್ದೇಶದಿಂದ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.
ಒಂದು ಅಂಕದ 17 ಪ್ರಶ್ನೆಗಳು, 2 ಅಂಕದ 10 ಪ್ರಶ್ನೆಗಳು, 3 ಅಂಕದ 11 ಪ್ರಶ್ನೆಗಳು, 4 ಅಂಕದ 5 ಪ್ರಶ್ನೆಗಳು ಮತ್ತು 5 ಅಂಕದ 2 ಪ್ರಶ್ನೆಗಳನ್ನು ನೀಡಲಾಗಿದೆ.