ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ನೀಡುತ್ತಿರುವ ‘ಜವಾಬ್ದಾರಿಯಿಲ್ಲದ’ ಮತ್ತು ‘ಪ್ರಚೋದನಾಕಾರಿ’ ಹೇಳಿಕೆಗಳು ವಿದೇಶದಲ್ಲಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಶನಿವಾರ ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ನಡೆದ ಎನ್ಡಿಎ (NDA) ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ರಾಜಕೀಯ ಲಾಭಕ್ಕಾಗಿ ದೇಶದ ವಿದೇಶಾಂಗ ಸಂಬಂಧಗಳನ್ನು ಹಾಳುಮಾಡಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.
“ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯರ, ವಿಶೇಷವಾಗಿ ಕೇರಳದ ಸಹೋದರ-ಸಹೋದರಿಯರ ಸುರಕ್ಷತೆಯೇ ನನ್ನ ಮೊದಲ ಆದ್ಯತೆ” ಎಂದು ಮೋದಿ ಹೇಳಿದರು.
ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಗಲ್ಫ್ ರಾಷ್ಟ್ರಗಳೊಂದಿಗೆ ಭಾರತ ಹೊಂದಿರುವ ಉತ್ತಮ ಬಾಂಧವ್ಯವನ್ನು ಕೆಡಿಸುವಂತಿವೆ. ಇದು ಅಲ್ಲಿರುವ ಭಾರತೀಯರಲ್ಲಿ ಅನಗತ್ಯ ಭಯ ಮತ್ತು ಆತಂಕ ಸೃಷ್ಟಿಸುತ್ತಿದೆ ಎಂದು ಪ್ರಧಾನಿ ದೂರಿದರು.
ಕಾಂಗ್ರೆಸ್ ಪಕ್ಷವು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲೂ ರಾಜಕೀಯ ಮಾಡಲು ಹವಣಿಸುತ್ತಿದೆ. ಅವರು ‘ರಾಜಕೀಯ ರಣಹದ್ದುಗಳಂತೆ’ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.








