ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಬೆಳಗಾವಿ ಚಳಿಗಾಲದ ಅಧಿವೇಶನ ವರದಿ ಮಾಡಲು ಆಗಮಿಸುವ ಮಾಧ್ಯಮದವರಿಗೆ ಉತ್ತಮ ದರ್ಜೆಯ ವಸತಿ, ಊಟ ಮತ್ತು ಆರೋಗ್ಯ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಶಾಸಕ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಮಂಡಲದ ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ದಿನೇಶ್ ಗೂಳಿಗೌಡ ಅವರು, ಕಳೆದ 19 ವರ್ಷಗಳಿಂದ ಬೆಳಗಾವಿ ಅಧಿವೇಶನಕ್ಕಾಗಿ ಬೆಂಗಳೂರಿನಿಂದ ಆಗಮಿಸುತ್ತಿರುವ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ.
19 ವರ್ಷದ ಹಳೆಯ ವ್ಯವಸ್ಥೆ ಬದಲಾವಣೆಗೆ ಮನವಿ
2006ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರೂ, ಇಂದಿಗೂ ಖಡೇ ಬಜಾರ್ ವ್ಯಾಪ್ತಿಯ ಕೀರ್ತಿ, ಶ್ರೀನಿವಾಸ ಸೇರಿದಂತೆ ಇನ್ನಿತರ ಹಳೆಯ ಹೋಟೆಲ್‌ಗಳಲ್ಲೇ ಪತ್ರಕರ್ತರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಳಗಾವಿಯಲ್ಲಿ ಉತ್ತಮ ದರ್ಜೆಯ ಹೋಟೆಲ್‌ಗಳು ನಿರ್ಮಾಣವಾಗಿದ್ದರೂ ಹಳೆಯ ಹೋಟೆಲ್‌ಗಳನ್ನೇ ಬಳಸಲಾಗುತ್ತಿದೆ.
ಬೆಂಗಳೂರಿನ ವಾತಾವರಣ ಹಾಗೂ ಆಹಾರಶೈಲಿಗಿಂತ ಬೆಳಗಾವಿಯ ವಾತಾವರಣ ವ್ಯತ್ಯಾಸವಿರುವುದರಿಂದ ಪ್ರತಿ ಅಧಿವೇಶನದ ಸಂದರ್ಭದಲ್ಲಿ ಹಲವು ಪತ್ರಕರ್ತರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಅನಾರೋಗ್ಯ ಸಮಸ್ಯೆಗಳಿಂದ ಒಬ್ಬ ಪತ್ರಕರ್ತರು ಸಾವನ್ನಪ್ಪಿರುವ ನಿದರ್ಶನವೂ ಇದೆ ಎಂದು ದಿನೇಶ್ ಗೂಳಿಗೌಡ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶುಚಿ-ರುಚಿ, ಆರೋಗ್ಯಕ್ಕೆ ಆದ್ಯತೆ ಬೇಕು:
ಈ ವರ್ಷದ ಅಧಿವೇಶನಕ್ಕೆ ಆಗಮಿಸುವ ಮಾಧ್ಯಮದವರಿಗೆ ಶುಚಿ, ರುಚಿಯಾದ ಆಹಾರ, ಉತ್ತಮ ವಸತಿ, ನೀರು ಮತ್ತು ತುರ್ತು ಆರೋಗ್ಯ ಸೌಕರ್ಯಗಳನ್ನು ಒಳಗೊಂಡ ಉತ್ತಮ ದರ್ಜೆಯ ಹೋಟೆಲ್‌ಗಳನ್ನು ಕಾಯ್ದಿರಿಸಬೇಕೆಂದು ಅವರು ಸರ್ಕಾರವನ್ನು ಕೋರಿದ್ದಾರೆ.
ವಿಶೇಷಾಧಿಕಾರಿ ನೇಮಿಸಿ:
ಅಲ್ಲದೆ, ಪತ್ರಕರ್ತರ ಕುಂದುಕೊರತೆ ಮತ್ತು ಸೌಕರ್ಯಗಳನ್ನು ನೋಡಿಕೊಳ್ಳಲು ಒಬ್ಬ ವಿಶೇಷಾಧಿಕಾರಿಯನ್ನು ನೇಮಿಸಬೇಕೆಂದೂ ಅವರು ಮನವಿ ಮಾಡಿದ್ದಾರೆ. ಮಾಧ್ಯಮ ಮಿತ್ರರ ಮನವಿಯನ್ನು ಸರ್ಕಾರ ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಗೆ 10,000 ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ: ಸಚಿವ ಎನ್.ಚಲುವರಾಯಸ್ವಾಮಿ
BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ








