ಬೆಂಗಳೂರು: ನಾಲ್ಕು ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಪಡೆದು, ವಿಧಾನಸೌಧಕ್ಕೆ ಮುತ್ತಿಗೆ ಹಾಕೋದಕ್ಕೆ ಯತ್ನಿಸಿದಂತ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಎಷ್ಟು ದಿನ ಮುಖ್ಯಮಂತ್ರಿಗಳಾಗಿ (ಸಿಎಂ) ಸಿ.ಎಂ. ಕುರ್ಚಿಯಲ್ಲಿ ಕೂತಿದ್ದೀರಿ ಎಂಬುದು ಮುಖ್ಯವಲ್ಲ; ಆ ಕುರ್ಚಿಯಲ್ಲಿ ಕೂತಾಗ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಟ್ಟಿದ್ದೀರಾ ಎಂಬುದು ಅತ್ಯಂತ ಮುಖ್ಯವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ಬಂಜಾರ, ಭೋವಿ, ಕೊರಚ, ಕೊರವ ಸಮುದಾಯಗಳಿಗೆ ಅನ್ಯಾಯವೆಸಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ ಫ್ರೀಡಂ ಪಾರ್ಕ್ ನಲ್ಲಿ “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಬೇಕಾಗಿತ್ತು ಎಂದು ನುಡಿದರು.
ಮುಖ್ಯಮಂತ್ರಿಗಳೇ, ಮನೆ ಮುರಿಯುವ ಕೆಲಸ ಮಾಡುವುದು ಸುಲಭ. ಮನೆ ಕಟ್ಟುವುದು ಅತ್ಯಂತ ಕಷ್ಟದ ಕೆಲಸ ಎಂದು ತಿಳಿಸಿದರು. ರಾಜ್ಯದ ಜನರು ನಿಮಗೆ ಆಶೀರ್ವಾದ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತಂದಿದ್ದಾರೆ. ಈ ರಾಜ್ಯದ ಎಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯಗಳು, ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡುವ ಅಪೇಕ್ಷೆ ಜನರಲ್ಲಿತ್ತು ಎಂದು ತಿಳಿಸಿದರು. ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರಕಾರವು ಶೋಷಿತರಿಗೆ ನ್ಯಾಯ ನೀಡುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ಷೇಪಿಸಿದರು.
ಬಂಜಾರ, ಭೋವಿ, ಕೊರಚ, ಕೊರವ, ಅಲೆಮಾರಿ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ನಿಮ್ಮ ಸಮಾಜಕ್ಕೆ ಅನ್ಯಾಯ ಆಗಬಾರದೆಂದು ಶೇ 4.5 ರಷ್ಟು ಮೀಸಲಾತಿ ಕೊಟ್ಟಿದ್ದರು. ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡಲು ಶೇ 1 ಪ್ರತ್ಯೇಕವಾಗಿ ಇಡಲಾಗಿತ್ತು. ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ನಿಮ್ಮ ಪರವಾಗಿ ನಿರ್ಧಾರ ಮಾಡಿತ್ತು ಎಂದು ವಿವರಿಸಿದರು.
ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ ರಚಿಸಿದ್ದರು. ಅಲೆಮಾರಿ ಸಮುದಾಯ, ಕೊರಚ, ಕೊರಮ ಸೇರಿ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಹಿಂದೆ ಯಡಿಯೂರಪ್ಪ ಅವರು ನೋಡಿಕೊಂಡಿದ್ದರು ಎಂದು ಗಮನ ಸೆಳೆದರು.
ಕಾಂಗ್ರೆಸ್ ಸರಕಾರದ ಒಡೆದಾಳುವ ನೀತಿ..
ಇವತ್ತು ಬ್ರಿಟಿಷರ ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಸರಕಾರ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸಿದೆ. ಬಂಜಾರ, ಭೋವಿ, ಕೊರಚ, ಕೊರವ, ಅಲೆಮಾರಿ ಸಮುದಾಯದವರಿಗೆ ಅನ್ಯಾಯ ಮಾಡುವ ಮತ್ತು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಆ ಭಗವಂತನೂ ಕ್ಷಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಪ್ರಭು ಚೌಹಾಣ್, ಎಂ. ಚಂದ್ರಪ್ಪ, ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕರಾದ ಪಿ. ರಾಜೀವ್, ದೇವನಹಳ್ಳಿ ಚಂದ್ರಪ್ಪ, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ವಿಷ್ಣುವರ್ಧನ್ ಸ್ಮಾರಕಕ್ಕೆ 15 ಗುಂಟೆ ಜಮೀನಿಗೆ ಸ್ಯಾಂಡಲ್ ವುಡ್ ನಿರ್ಮಾಪಕರು ಸಚಿವ ಈಶ್ವರ್ ಖಂಡ್ರೆಗೆ ಮನವಿ








