ಮಂಡ್ಯ : ಕಂದಾಯ ಇಲಾಖೆಯಿಂದ ನೀಡುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ನ್ಯಾಯಾಲಯದ ಪ್ರಮಾಣ ಪತ್ರ ಲಗತ್ತಿಸಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮದ್ದೂರು ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ನೇತೃತ್ವದಲ್ಲಿ ತಾಲೂಕು ಕಛೇರಿಗೆ ಆಗಮಿಸಿದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ, ಸೋಮನಹಳ್ಳಿ ಅಂದಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಪ್ರಮಾಣ ಪತ್ರ ಪಡೆಯಲು ರಾಜ್ಯ ಸರ್ಕಾರ ನ್ಯಾಯಾಲಯದ ಪ್ರಮಾಣ ಪತ್ರ ಲಗತ್ತಿಸಬೇಕೆಂದು ಆದೇಶ ಹೊರಡಿಸಿದೆ. ಆದರೆ, ಈ ಆದೇಶದಿಂದ ಜನಸಾಮಾನ್ಯರಿಗೆ 500 ರೂಪಾಯಿಗೂ ಹೆಚ್ಚು ಖರ್ಚಾಗಲಿದೆ. ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ಆರ್ಥಿಕವಾಗಿ ಹೊರೆಯಾಗಲಿದ್ದು, ಈ ಹಿಂದೆ ಇದ್ದಂತೆ ಕೆಲವು ದಾಖಲೆಗಳನ್ನು ನೀಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದು ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಮರು ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ಇನ್ನು ಸೋಮನಹಳ್ಳಿಯ ದಲಿತ ಜನಾಂಗದ ಸ್ಮಶಾನವು ಒತ್ತುವರಿಯಾಗಿದ್ದು, ಈ ಕೂಡಲೇ ತಾಲೂಕು ಆಡಳಿತ ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ಅಗರಲಿಂಗನದೊಡ್ಡಿಯಲ್ಲಿ ನಡೆಯುತ್ತಿರುವ 15 ನೇ ಹಣಕಾಸು ಯೋಜನೆಯಡಿ ರಸ್ತೆ ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ನಗರಸಭೆ ಮುಂಭಾಗದ ಡಾ. ಅಂಬೇಡ್ಕರ್ ಪುತ್ತಳಿಗೆ ಭಧ್ರತೆ ಒದಗಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ನಿಗದಿ ಮಾಡಬೇಕು. ಹಾಗೂ ಸಾರ್ವಜನಿಕ ಸ್ಮಶಾನ ಎಂದು ನಾಮಫಲಕ ಹಾಕಬೇಕು. ಇನ್ನು ಮದ್ದೂರು ತಾಲೂಕಿನಲ್ಲಿ ವಿವಿಧ ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸುವಂತೆ ಶಿರಸ್ತೆದಾರ್ ಚಲುವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಬಿ.ಎಂ.ಸತ್ಯ, ಜಿಲ್ಲಾ ಸಂಚಾಲಕ ಶಿವು, ತಾಲೂಕು ಸಂಚಾಲಕ ರಂಗಸ್ವಾಮಿ, ಶ್ರೀನಿವಾಸ್, ಮೆಹಬೂಬ್ ಖಾನ್, ರಾಜೇಶ್, ಶಂಕರ್, ಅಂಬರೀಷ್, ಕುಮಾರ್, ಶ್ರೀನಿವಾಸ್, ಪುಟ್ಟರಾಮು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಸುತ್ತೂರು ಮಠ ಸಮಾಜದ ಬಡ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction







