ಮಂಡ್ಯ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ರೂಪುರೇಷೆ ತಯಾರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಕೆ.ಬೆಳ್ಳೂರು ಗ್ರಾಮದಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಾರಂಭಿಸಿರುವ ಪಶು ಚಿಕಿತ್ಸಾಲಯದ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಬೆಳ್ಳೂರು ಪಕ್ಷಿಗಳಿಗೆ ಹೆಸರುವಾಸಿಯಾದ ಗ್ರಾಮವಾಗಿದ್ದು, ಇಲ್ಲಿಗೆ ದೇಶ ವಿದೇಶಗಳಿಂದ ಹಲವು ಪ್ರಭೇದದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಆದ್ದರಿಂದ ಈ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರಿಗೆ ಹಾಗೂ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲ್ಲಿಗೆ ಆಗಮಿಸುವ ಪಕ್ಷಿಗಳಿಗೆ ಏನು ತೊಂದ್ರೆ ಆದರೂ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಕೊಡಿಸಬೇಕಿತ್ತು. ಪಕ್ಷಿಗಳ ಆರೋಗ್ಯದ ದೃಷ್ಟಿಯಿಂದ ಪಶು ಚಿಕಿತ್ಸಾಲಯನ್ನು ಪ್ರಾರಂಭಿಸಲಾಗಿದೆ ಎಂದರು.
ಗ್ರಾಮಕ್ಕೆ ಹೊರ ದೇಶಗಳಿಂದ ಪಕ್ಷಿಗಳು ಹೆಚ್ಚಾಗಿ ಬರುತ್ತವೆ. ಅವುಗಳಿಗೆ ಅನುಕೂಲಕ್ಕೆ ತಕ್ಕಂತೆ ನೀರು, ಆಹಾರದ ತೊಡಕಾಗಿದೆ. ಹೀಗಾಗಿ ಅವುಗಳಿಗೆ ಇನ್ನು ಹೆಚ್ಚಿನ ಅನುಕೂಲ ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಈ ಭಾಗದ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬನ್ನಹಳ್ಳಿ ಏತ ನೀರಾವರಿ ಯೋಜನೆ ಕೆಲ ದಿನಗಳಲ್ಲೇ ಕನಸು ನನಸಾಗಲಿದೆ. ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಬೋರ್ ವೆಲ್ ಗಳಿಗೆ ಪುನಶ್ಚೇತನಗೊಳ್ಳಲಿದೆ. ಹೀಗಾಗಿ ಈ ಭಾಗದ ನೀರಾವರಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಕೆ.ಬೆಳ್ಳೂರು ಹಾಗೂ ತಾಲೂಕಿನ ಇನ್ನೂ 2 ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಾಲೂಕಿನಲ್ಲಿ ರೈತರ ಬಾಳಿಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಹಾಲು ಒಕ್ಕೂಟ ಅಗತ್ಯ ಸಹಕಾರ ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂವರು ಕುರಿಗಾಯಿಗಳಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಕೆಂಪರಾಜು, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಲುವರಾಜು, ಮನ್ಮುಲ್ ನಿರ್ದೆಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಪಶು ಇಲಾಖೆ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಗೋವಿಂದ್, ಗ್ರಾ.ಪಂ ಸದಸ್ಯರಾದ ಕೂಳಗೆರೆ ಜಯರಾಮು, ಹಳ್ಳಿಕೆರೆ ಮಾದೇಶ್, ಮುಖಂಡರಾದ ಶ್ರೀನಿವಾಸ್, ಅರುವನಹಳ್ಳಿ ಸಿದ್ದರಾಜು, ಶ್ರೀನಿವಾಸ್, ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಮಹದೇವಪ್ಪ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ