ಶಿವಮೊಗ್ಗ: ಐತಿಹಾಸಿಕ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಈಗಾಗಲೆ ಸಿಗಂದೂರು ಚೌಡೇಶ್ವರಿ ಕೇಬಲ್ ಸೇತುವೆ ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಿಂದ ಹೆಸರು ಅಂತಿಮಗೊಳಿಸಿ ಕೇಂದ್ರಕ್ಕೆ ಸಲ್ಲಿಸಿದರೆ ನಾನು ಇದನ್ನು ಅನುಮೋದಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಸೇತುವೆಗೆ ರಾಣಿ ಚನ್ನಬೈರಾದೇವಿ, ಕೆಳದಿ ರಾಣಿ ಚೆನ್ನಮ್ಮಾಜಿ, ಶರಾವತಿ ಸೇತುವೆ, ಅಂಬಾರಗೋಡ್ಲು ಕಳಸವಳ್ಳಿ ಸೇರಿದಂತೆ ಬೇರೆಬೇರೆ ಹೆಸರಿನ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ಇರಿಸಲು ನ್ಯಾಯಾಲಯಕ್ಕೂ ಹೋಗಿದ್ದಾರೆ ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.
ಇಂದು ಶಿವಮೊಗ್ಗದ ಸಾಗರ ನಗರದ ನೆಹರೂ ಮೈದಾನದಲ್ಲಿ ಶನಿವಾರ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಲೋಕಾರ್ಪಣೆ ಸಭಾ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎಂತಹ ಮಳೆ ಬಂದರೂ ಸೇತುವೆ ಲೋಕಾರ್ಪಣೆ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತದೆ. ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆ ದೇವಿಗೆ ಸಮರ್ಪಣೆ ಮಾಡುವ ಶ್ರೇಷ್ಟ ಕಾರ್ಯವಾಗಿದೆ. ಇಂತಹ ಕಾರ್ಯಕ್ಕೆ ಅಪಚಾರ ಎಸಗಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಸೇತುವೆ ಲೋಕಾರ್ಪಣೆ ಮಾಡಲಿದ್ದು, ಮುಖ್ಯಮಂತ್ರಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸೇತುವೆ ನಿರ್ಮಾಣದ ರೂವಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಯಾಗಿದೆ. ಕೇಂದ್ರ ಸಚಿವರು ನಾಗಪುರದಿಂದ ಶಿವಮೊಗ್ಗಕ್ಕೆ ಆಗಮಿಸಿ, ಶಿವಮೊಗ್ಗ ಮೂಲಕ ಸಾಗರ ಹೆಲಿಪ್ಯಾಡ್‌ಗೆ ಬಂದು, ಅಲ್ಲಿಂದ ವಾಹನ ಮೂಲಕ ತೆರಳಿ ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ಲೋಕಾರ್ಪಣೆ ಮಾಡಿ ಶ್ರೀ ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ 1ಕ್ಕೆ ನೆಹರೂ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶರಾವತಿ ಹಿನ್ನೀರ ಜನರ ಆರು ದಶಕದ ಕನಸು ನನಸಾಗುತ್ತಿದೆ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಸಂತ್ರಸ್ತರ ಬದುಕಿಗೆ ಬೆಳಕು ನೀಡುವ ಶ್ರೇಷ್ಟ ಕಾರ್ಯಕ್ರಮ ಇದಾಗಿರುತ್ತದೆ. ಸುಮಾರು 470 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರದ ಅತಿ ಉದ್ದದ ಎರಡನೇ ಕೇಬಲ್ ಆಧಾರಿತ ಸೇತುವೆ ಇದಾಗಿದೆ. ಈ ಸೇತುವೆಗೆ ರಾಷ್ಟ್ರೀಯ ಹೆದ್ದಾರಿ 369ಇ ನಾಮಕರಣ ಮಾಡಿ ಸಾಗರದಿಂದ ಮರಕುಟಿಕವರೆಗೆ ಹೆದ್ದಾರಿ ನಿರ್ಮಿಸಲು 920 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರು ಸಂಸದರಾಗಿದ್ದಾಗ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿ ಸೇತುವೆಗೆ ಮಂಜೂರಾತಿ ದೊರಕಿಸಿ ಕೊಟ್ಟಿದ್ದರು. ಸೇತುವೆ ನಿರ್ಮಾಣದ ಹಿಂದೆ ಎಲ್ಲರ ತಪ್ಪಸಿದೆ. ಎಲ್ಲರ ತಪ್ಪಸಿಗೆ ಸಂದ ವರ ಇದಾಗಿದೆ. ಅನೇಕರ ಹೋರಾಟ, ಮನವಿ ಎಲ್ಲವೂ ಸೇತುವೆ ನಿರ್ಮಾಣಕ್ಕಾಗಿಯೆ ಸಲ್ಲಿಸಲಾಗಿತ್ತು. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಯಡಿಯೂರಪ್ಪ, ಕಾಗೋಡು ತಿಮ್ಮಪ್ಪನವರು, ಹರತಾಳು ಹಾಲಪ್ಪನವರು ಸೇರಿ ಎಲ್ಲರೂ ಪ್ರಯತ್ನ ನಡೆಸಿದ್ದರು. ಈ ಅಪರೂಪದ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಇರುವ ಸಿಗಂದೂರು ದೇವಿಯ ಭಕ್ತರು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲಿನ ಅಭಿಮಾನಕ್ಕೆ ಧನ್ಯವಾದವೆಂದ ಸಂಸದ ಬಿವೈ ರಾಘವೇಂದ್ರ
ಸೇತುವೆಗೆ ಈಗಾಗಲೆ ಸಿಗಂದೂರು ಚೌಡೇಶ್ವರಿ ಕೇಬಲ್ ಸೇತುವೆ ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಿಂದ ಹೆಸರು ಅಂತಿಮಗೊಳಿಸಿ ಕೇಂದ್ರಕ್ಕೆ ಸಲ್ಲಿಸಿದರೆ ನಾನು ಇದನ್ನು ಅನುಮೋದಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಸೇತುವೆಗೆ ರಾಣಿ ಚನ್ನಬೈರಾದೇವಿ, ಕೆಳದಿ ರಾಣಿ ಚೆನ್ನಮ್ಮಾಜಿ, ಶರಾವತಿ ಸೇತುವೆ, ಅಂಬಾರಗೋಡ್ಲು ಕಳಸವಳ್ಳಿ ಸೇರಿದಂತೆ ಬೇರೆಬೇರೆ ಹೆಸರಿನ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ಇರಿಸಲು ನ್ಯಾಯಾಲಯಕ್ಕೂ ಹೋಗಿದ್ದಾರೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳಾಗಿ ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಅಭಿವೃದ್ದಿ ಹರಿಕಾರರು ಎಂದೇ ಅವರನ್ನು ಕರೆಯಲಾಗುತ್ತದೆ. ಅವರ ಮೇಲಿನ ಅಭಿಮಾನಕ್ಕೆ ಮಗನಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ಸೇತುವೆಗೆ ಹೆಸರು ಇರಿಸುವಾಗ ಅದ್ದರದ್ದೆ ಕೆಲವು ನಿಯಮಗಳಿವೆ. ಅದನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ರಾಜಶೇಖರ್ ಗಾಳಿಪುರ, ಆರ್.ಶ್ರೀನಿವಾಸ್, ವಿ.ಮಹೇಶ್, ಸತೀಶ್ ಕೆ., ಶ್ರೀರಾಮ್, ವಿನೋದ್ ರಾಜ್, ವಿಶ್ವನಾಥ ಕುಗ್ವೆ, ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಪ್ರಶಾಂತ್ ಕೆ.ಎಸ್. ಸೇರಿದಂತೆ ಇತರರು ಹಾಜರಿದ್ದರು.
ಕಡಿಮೆ ಅವಧಿಯಲ್ಲಿ ಹೆಚ್ಚಿನ ರೈಲುಗಳ ಮಂಜೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ