ಶಿವಮೊಗ್ಗ: ಸಾಗರದ ಉರ್ದು ಪ್ರೌಢಶಾಲೆ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ವಿಶೇಷ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ ಶಿಕ್ಷಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ. ಓಂಕಾರಪ್ಪ ಅವರು, ಸಹ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿರುವ ನೀವು ಮುಖ್ಯ ಶಿಕ್ಷಕರಾದ ಮೇಲೆ ಇನ್ನಷ್ಟು ಶ್ರೇಷ್ಠತೆಯನ್ನ ಪಡೆಯಿರಿ ಎಂದು ಹಾರೈಸಿದರು. ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುವಾಗ ಹೆಚ್ಚಿನ ಒತ್ತಡ ಮತ್ತು ಸವಾಲುಗಳಿರುತ್ತವೆ, ಅದನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಉತ್ತಮ ಹೆಸರು ಪಡೆಯಲು ಸಾಧ್ಯ ಮತ್ತು ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಯೇ ಎಲ್ಲರ ಗುರಿಯಾಗಲಿ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಭಟ್ ಮಾತನಾಡಿ, ಸಾಗರದಲ್ಲಿ ಶಿಕ್ಷಕರಿಗೆ ಕೆಲಸ ಮಾಡಲು ಉತ್ತಮ ವಾತಾವರಣವಿದ್ದು, ಸಮಾಜ ನಮ್ಮ ಚಲನವಲನಗಳನ್ನು ಗಮನಿಸುತ್ತಿರುತ್ತದೆ ಎಂದರು. ಉತ್ತಮ ಪಾಠ ಪ್ರವಚನಗಳ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾಗುವಂತೆ ತಿಳಿಸಿದ ಅವರು, ಈಗ ಸಿಕ್ಕಿರುವ ಮಹತ್ವದ ಹೊಣೆಗಾರಿಕೆಯಲ್ಲಿ ಯಶಸ್ಸು ಕಂಡು ಉತ್ತಮ ಫಲಿತಾಂಶ ತರುವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಲಕ್ಷ್ಮಣ್ ಆರ್. ನಾಯ್ಕ್ ಅವರು, ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಕೇವಲ ಬೇಡಿಕೆಗಳಿಗೆ ಸೀಮಿತವಾಗದೆ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರಿಗೆ ನಿರಂತರ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು. ಸಹ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆಯುತ್ತಿರುವುದು ಸಂತೋಷದ ವಿಷಯವಾಗಿದ್ದು, ಎಲ್ಲರೂ ಒಟ್ಟಾಗಿ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಪಡಿಸಲು ಶ್ರಮಿಸೋಣ ಎಂದು ಆಶಿಸಿದರು.
ವೇದಿಕೆಯಲ್ಲಿ ಗಜೇಂದ್ರ, ಯಮನೂರಪ್ಪ, ರಮೇಶ್ ಎನ್.ಕೆ., ಶಂಕರ ಶಾಸ್ತ್ರಿ, ನಾಗರಾಜ್ ಹೆಗಡೆ, ಪಾಲಾಕ್ಷಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉಮೇಶ್ ಸ್ವಾಗತಿಸಿದರೆ, ಗಣಪತಿ ಎಚ್.ಬಿ. ವಂದಿಸಿದರು ಹಾಗೂ ವೀರಭದ್ರಪ್ಪ ಜಿ.ಆರ್. ಕಾರ್ಯಕ್ರಮ ನಿರೂಪಿಸಿದರು.
ಸಾಗರದಲ್ಲಿ ಬಿಹಾರಿ ಕಾರ್ಮಿಕನ ಬರ್ಬರ ಹತ್ಯೆ ಖಂಡಿಸಿ ವಿಎಚ್‌ಪಿ, ಭಜರಂಗ ದಳದಿಂದ ಬೃಹತ್ ಪ್ರತಿಭಟನೆ
BREAKING: ಮತದಾನದ ದಿನದಂದು ಎಲ್ಲಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಿದ ಚುನಾವಣಾ ಆಯೋಗ








