ಮಂಡ್ಯ : ಕೆ.ಆರ್.ಎಸ್ ಜಲಾಶಯದಿಂದ ಕಾವೇರಿ ನದಿಗೆ 85 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದ್ದು, ಹೀಗಾಗಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಗೆ ಬರುವ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ಮಳವಳ್ಳಿ ತಾಲೂಕು ದಂಡಾಧಿಕಾರಿ ಎಸ್.ವಿ. ಲೋಕೇಶ್ ಆದೇಶ ಹೊರಡಿಸಿದ್ದಾರೆ.
ಮುತ್ತತ್ತಿ ಗ್ರಾಮವು ಪುರಾಣ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಹೀಗಾಗಿ ದೇವಾಲಯಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಇಳಿಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿ ಪಾತ್ರಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಈಗಾಗಲೇ ಕೃಷ್ಣರಾಜಸಾಗರ ಜಲಾಶಯದಿಂದ 85 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು, ಹೀಗಾಗಿ ಮುತ್ತತ್ತಿಯಲ್ಲಿ ಮುಂಜಾಗೃತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ತಡೆಯಲು, ವನ್ಯಜೀವಿ ಸಂರಕ್ಷಣೆ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡುವಂತೆ ಹಲಗೂರು ಪಿಎಸ್‌ಐ ಲೋಕೇಶ ಅವರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರು.
ಹೀಗಾಗಿ ಜು.28ರಂದು ಸಂಜೆ 6 ಗಂಟೆಯಿಂದ ಮುಂದಿನ ಆದೇಶದವರೆಗೆ ಪ್ರವಾಸಿ ತಾಣ ಮುತ್ತತ್ತಿ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ, ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಎಸ್.ವಿ.ಲೋಕೇಶ್ ತಿಳಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ