ಬೆಂಗಳೂರು : ರಾಜ್ಯದ ಶಾಲಾ – ಕಾಲೇಜುಗಳ ಹಂತದಲ್ಲಿ ಇಕೋ ಕ್ಲಬ್ ಕಾರ್ಯಕ್ರಮದಡಿ ಪರಿಸರ ಸಂರಕ್ಷಣೆ ಕುರಿತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪರಿಸರದ ಸುಸ್ಥಿರ ಬೆಳವಣಿಗೆಯಲ್ಲಿ ಶಾಲಾ ಮಕ್ಕಳ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಶಿಕ್ಷಕರು “ಪರಿಸರ ಸಂರಕ್ಷಣೆ” ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮಾಡುವಂತೆ ಪ್ರೇರೇಪಿಸಲು ವಾರ್ಷಿಕ ಯೋಜನಾ ಅನುಮೋದನಾ ಮಂಡಳಿಯಿಂದ ಪ್ರಾಥಮಿಕ ಶಾಲಾ ವಿಭಾಗಕ್ಕೆ ಪ್ರತಿ ಶಾಲೆಗೆ ಘಟಕ ವೆಚ್ಚ 2000/-ರೂ. ಗಳಂತೆ 20475 ಶಾಲೆಗಳಿಗೆ ರೂ.409.50 ಲಕ್ಷಗಳ ಅನುದಾನ, ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಪ್ರತಿ ಶಾಲೆಗೆ ಘಟಕ ವೆಚ್ಚ 5000/-ರೂ. ಗಳಂತೆ 21660 ಶಾಲೆಗಳಿಗೆ ರೂ.1083.00 ಲಕ್ಷಗಳ ಅನುದಾನ ಹಾಗೂ ಪ್ರೌಢ ಶಾಲಾ ವಿಭಾಗಕ್ಕೆ ಪ್ರತಿ ಶಾಲೆಗೆ ಘಟಕ ವೆಚ್ಚ 7500/-ರೂ.ಗಳಂತೆ 5410 ಶಾಲೆಗಳಿಗೆ ರೂ.405.75 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ.
ಉದ್ದೇಶಗಳು:-
1. ವಿದ್ಯಾರ್ಥಿಗಳಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸ್ಥಳೀಯ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು.
2. ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.
3. ವಿದ್ಯಾರ್ಥಿಗಳಲ್ಲಿ ಮರುಬಳಕೆ ಹಾಗೂ ನವೀಕರಿಸಲಾಗದ ಸಂಪನ್ಮೂಲಗಳನ್ನು
ಉಳಿಸುವಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಬೆಳೆಸುವುದು.
4. ಗಿಡಮರಗಳನ್ನು ಬೆಳೆಸುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.
ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರು ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:
1. ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು, ಶಿಕ್ಷಕರು ಮಕ್ಕಳಿಗೆ ದತ್ತು ನೀಡಿ, ಅವುಗಳನ್ನು ಪೋಷಿಸುವುದರ ಮೂಲಕ ಶಾಲಾ ಆವರಣವನ್ನು ಹಸಿರು ವಾತಾವರಣವನ್ನಾಗಿ ರೂಪಿಸುವುದು.
2. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು.
3. ಶಾಲೆಗಳಲ್ಲಿ ‘ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಪರಿವರ್ತಿಸುವುದು,
4. ಮಕ್ಕಳಲ್ಲಿ ಸಮತೋಲನ ಆಹಾರ ಬಳಕೆಯ ಅಭ್ಯಾಸ ಬೆಳೆಸುವುದು.
5. ಶಾಲೆಗಳಲ್ಲಿ ಅಡುಗೆ ಮನೆಯಿಂದ ಹೊರ ಹೋಗುವ ನೀರಿನಿಂದ ಶಾಲಾ ಕೈತೋಟವನ್ನು ಕಡ್ಡಾಯವಾಗಿ ನಿರ್ಮಿಸುವುದು.
6. ಮಕ್ಕಳಿಗೆ ತ್ಯಾಜ್ಯದ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ ಶಾಲಾ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು.
7. ಶಿಕ್ಷಕರು ಪರಿಸರ ಮಾಲಿನ್ಯದಿಂದ (ಹವಾಮಾನ ವೈಪರಿತ್ಯ) ಉಂಟಾಗುವ
ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.
8. ಶಾಲಾ ಮಕ್ಕಳಿಂದ ಘೋಷಣೆಗಳೊಂದಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು, ಸಮುದಾಯದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು.
9. ನೀರಿನ ಮಿತ ಬಳಕೆ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು.
10. ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ
ಸ್ಪರ್ಧೆ, ಭಾಷಣ ಸ್ಪರ್ಧೆ, ಘೋಷವಾಕ್ಯಗಳು, ಕವನ ಹಾಗೂ ವ್ಯಂಗ್ಯ ಚಿತ್ರಗಳ ರಚನೆ,
ಕಿರುನಾಟಕ ಹಾಗೂ ಚಿತ್ರಕಲೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
11. ಮರ ಗಿಡಗಳ ಎಲೆಗಳ ಸಂಗ್ರಹದಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಶಾಲಾ ಕೈತೋಟಕ್ಕೆ ಬಳಸುವುದು.
12. ಶಕ್ತಿ ಉಳಿತಾಯದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು.
13. ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಒದಗಿಸುವುದು.
14. ವನ ಭೇಟಿ ಹಾಗೂ ಪ್ರಕೃತಿ ನಡಿಗೆ ಹಮ್ಮಿಕೊಳ್ಳುವುದು. (ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ)