ಬೆಂಗಳೂರು : “ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ರೀತಿ ಪ್ರಾಧ್ಯಾಪಕರು ತಮ್ಮ ಜ್ಞಾನವನ್ನು ಕೊಟ್ಟು ಅವರಲ್ಲಿ ಅರಿವಿನ ಬೆಳಕನ್ನು ಉತ್ತೇಜಿಸಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ನೂತನವಾಗಿ ನೇಮಕಗೊಂಡಿರುವ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಉದ್ಘಾಟಿಸಿ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.
“ನಿಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಮವಾಗಿ ತಯಾರು ಮಾಡಲು ಆಗದೇ ಇರಬಹುದು. ಆದರೆ, ಒಂದಷ್ಟು ಜನರನ್ನು ತಯಾರು ಮಾಡುವ ಶಕ್ತಿ ನಿಮ್ಮಲ್ಲಿದೆ. ನೀವು ಸಮಾಜಕ್ಕೆ ಉತ್ತಮ ಸಾಧಕರನ್ನು ನೀಡುವ ಗುರಿ ಇಟ್ಟುಕೊಳ್ಳಬೇಕು” ಎಂದು ತಿಳಿಸಿದರು.
“ವಿದ್ಯಾರ್ಥಿಗಳಿಗೆ ಸಮಯ ನೀಡಿ ಅವರ ಜೊತೆ ವೈಯಕ್ತಿಕವಾಗಿ ಸಂವಹನ ನಡೆಸಬೇಕು. ಶಿಕ್ಷಣದ ಮಹತ್ವವನ್ನು ಅವರಿಗೆ ತಿಳಿಸಬೇಕು. ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧದಂತೆ ನಿಮ್ಮ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಭಾಂದವ್ಯ ಬೆಳೆಯಬೇಕು. ಕೇವಲ ಸಂಬಳಕ್ಕೆ ಕೆಲಸ ಮಾಡಬೇಡಿ” ಎಂದು ಕಿವಿಮಾತು ಹೇಳಿದರು.
“ಕೇವಲ ಪುಸ್ತಕದಲ್ಲಿ ಇರುವುದನ್ನು ಪಾಠ ಮಾಡಬೇಡಿ. ವಿದ್ಯಾರ್ಥಿಗಳ ನಡೆ, ನುಡಿ, ವಿಚಾರಧಾರೆ, ಚಿಂತನೆಗಳನ್ನು ದೇಶ ಕಟ್ಟುವ ರೀತಿ ತಯಾರು ಮಾಡಬೇಕು. ನಿಮ್ಮ ಜ್ಞಾನ ಭಂಡಾರವನ್ನು ಹೆಚ್ಚು ಮಾಡಿಕೊಳ್ಳಬೇಕು. ಹೆಚ್ಚಿನ ಪದ ಸಂಪತ್ತು, ಗ್ಲೋಬಲ್ ಮಟ್ಟದ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದರು.
“ಶಿಕ್ಷಕ ವೃತ್ತಿಯನ್ನು ಹಿಡಿಯಬೇಕು ಎಂದು ಬಹಳ ಕಷ್ಟಪಟ್ಟು ಈ ಸ್ಥಾನವನ್ನು ಅಲಂಕರಿಸಿದ್ದೀರಿ. ಈ ದೇಶದ ಭವಿಷ್ಯದ ಆಧಾರ ಸ್ತಂಬಗಳನ್ನು ತಯಾರು ಮಾಡುವ ಸ್ಥಾನದಲ್ಲಿ ಕುಳಿತಿರುವ ನಿಮಗೆ ಅಭಿನಂದನೆಗಳು. ನಿಮ್ಮ ಜೀವನ ಇಲ್ಲಿಗೆ ನಿಂತಿಲ್ಲ. ಶಿಕ್ಷಕರಾಗಿದ್ದವರು ಆನಂತರ ಐಎಎಸ್, ಕೆಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ನಾನು ಕೆಲಸಗಾರರನ್ನು ನೋಡಲು ಇಷ್ಟ ಪಡುವುದಿಲ್ಲ. ಕೆಲಸ ಸೃಷ್ಟಿಸುವವರನ್ನು ಇಷ್ಟ ಪಡುತ್ತೇನೆ. ಅಂತಹ ಶಕ್ತಿಯನ್ನು ಯುವ ಜನರಲ್ಲಿ ನೀವು ಬೆಳೆಸಬೇಕು” ಎಂದರು.
“ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾಂಗ ಪ್ರಜಾಪ್ರಭುತ್ವದ ನಾಲ್ಕು ಅಂಗಗಳು. ಈ ದೇಶದ ನಾಲ್ಕು ಆಧಾರ ಸ್ತಂಬಗಳು ಎಂದರೆ ಕೃಷಿಕ, ಸೈನಿಕ, ಕಾರ್ಮಿಕ, ಶಿಕ್ಷಕರು. ಈ ಜವಾಬ್ದಾರಿಯುತ ಹುದ್ದೆಯನ್ನು ಯಾವುದೇ ಲಂಚ ನೀಡದೆ ಪಡೆದಿದ್ದೀರಿ. ಈ ಕೆಲಸ ಕೊಡಿ ಎಂದು ಯಾವ ಜನಪ್ರತಿನಿಧಿಯ ಮನೆಗೂ ಅಲೆದಾಡಿಲ್ಲ” ಎಂದು ಹೇಳಿದರು.
“ಇಡೀ ದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕರ್ನಾಟಕ ಹೆಸರಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕ ನಮಗೆ ಸಾಟಿ ಯಾರೂ ಇಲ್ಲ. 200 ಎಂಜಿನಿಯರಿಂಗ್ ಕಾಲೇಜುಗಳು, 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಇವೆ. ಇಂಜಿನಿಯರ್, ವೈದ್ಯಕೀಯ ಓದದ ವಿದ್ಯಾರ್ಥಿಗಳನ್ನು ತಯಾರು ಮಾಡುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಕುದುರೆಯನ್ನು ರೇಸ್ ಅಲ್ಲಿ ಓಡುವ ಕುದುರೆ ಮಾಡುವುದು ಸುಲಭ. ಆದರೆ ಕತ್ತೆಯನ್ನು ಕುದುರೆ ಮಾಡುವುದು ಕಠಿಣ ಕೆಲಸ” ಎಂದು ತಿಳಿಸಿದರು.
“ನೀವು ಹದಿಹರೆಯದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೀರಿ. ಈ ವಯಸ್ಸಿನ ವಿದ್ಯಾರ್ಥಿಗಳು ಅತಿ ಹುಮ್ಮಸ್ಸಿನಿಂದ ಕೂಡಿರುತ್ತಾರೆ. ಅಲ್ಲದೇ ಮನಸ್ಸು ನೂರಾರು ವಿಚಾರಗಳಲ್ಲಿ ಹರಿದು ಹಂಚಿ ಹೋಗಿರುತ್ತದೆ. ಅಂತಹ ವಿದ್ಯಾರ್ಥಿಗಳನ್ನು ನೀವು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ನೀವು ಸಾಕಷ್ಟು ಸನ್ನದ್ದರಾಗಿರಬೇಕು. ಇಂದಿನ ಶಿಕ್ಷಕರು ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ. ಏಕೆಂದರೆ ಜಾಲತಾಣದಲ್ಲಿಯೇ ಎಲ್ಲ ಮಾಹಿತಿ ವಿದ್ಯಾರ್ಥಿಗೆ ಸಿಗುವ ಕಾರಣಕ್ಕೆ ನೀವು ತಪ್ಪಿಸಿಕೊಳ್ಳಲು ಆಗುವುದಿಲ್ಲ” ಎಂದರು.
“ಎಲ್ಲಾ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಇದ್ದೇ ಇರುತ್ತದೆ. ಬೆಂಗಳೂರು ಸೇರಿದಂತೆ ಇತರೆಡೆ ದೊಡ್ಡ, ದೊಡ್ಡ ಶಿಕ್ಷಣ ಸಂಸ್ಥೆಗಳು ಇದ್ದರೂ ಬಾಗಲಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಮೊಬೈಲ್, ಸಾಮಾಜಿಕ ಜಾಲತಾಣ ಬಂದ ಮೇಲೆ ವಿದ್ಯಾರ್ಥಿಗಳು ಕಲುಷಿತಗೊಂಡಿದ್ದಾರೆ. ಈ ಜಾಲದಿಂದ ಅವರನ್ನು ಹೊರ ತರಬೇಕು. “ನೈತಿಕ ಶಿಕ್ಷಣ ಇಂದಿನ ಅಗತ್ಯ” ಎಂದರು.
“ನಮ್ಮ ಸಂಸ್ಕೃತಿ ನಮ್ಮ ಶಕ್ತಿ. ಲಕ್ಷಾಂತರ ವಿದೇಶಿಗರು ಕುಂಭಮೇಳಕ್ಕೆ ಬಂದು ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಅವರ ದೇಶದಲ್ಲಿ ನದಿಗಳು ಇಲ್ಲವೇ? ಏಕೆಂದರೆ ನಮ್ಮ ಸಂಸ್ಕೃತಿ ನೋಡಲು ಬಂದಿದ್ದಾರೆ. ಬಿದಿರಿಗೆ ತನ್ನಿಂದ ನಾದ ಬರುತ್ತದೆ ಎನ್ನುವುದೇ ತಿಳಿದಿರುವುದಿಲ್ಲ. ಚರ್ಮದಿಂದಲೂ ನಾದ ಹೊರಬರುತ್ತದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಅವರಲ್ಲಿರುವ ಶಕ್ತಿಯನ್ನು ನೀವು ತಿಳಿಸಬೇಕು” ಎಂದು ಹೇಳಿದರು.
“ಅನೇಕ ವರ್ಷಗಳಿಂದ ಕೃಷಿಯನ್ನು ಕೊನೆಯ ಸ್ಥಾನಕ್ಕೆ ನೂಕಲಾಗಿದೆ. ಕೃಷಿ ಮಾಡುವುದು ಕೀಳು ಎನ್ನುವ ಭಾವನೆ ಬಂದುಬಿಟ್ಟಿದೆ. ಈ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ ಇದರ ಬಗ್ಗೆ ಜನರಿಗೆ ಅರಿವಿಲ್ಲ. ನೀವು ಎಲ್ಲಾ ಕೆಲಸಗಳು ಒಂದು ಎನ್ನುವ ಭಾವನೆ ಮೂಡಿಸಬೇಕು” ಎಂದು ಹೇಳಿದರು.
“ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಅವರಿಗೆ ಬೇರೆ ಖಾತೆಯನ್ನು ನೀಡಲಾಗಿತ್ತು. ಅದನ್ನು ನಾನು ಒಂದಷ್ಟು ಬದಲಾವಣೆ ಮಾಡಿ ಅರ್ಹ ವ್ಯಕ್ತಿಗೆ ಅರ್ಹ ಹುದ್ದೆ ಸಿಗಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಲಾಯಿತು. ಅವರು ಇಲಾಖೆಯಲ್ಲಿ ಮಾಡುತ್ತಿರುವ ಕೆಲಸಗಳನ್ನು ನೋಡಿ ನನಗೆ ಸಮಾಧಾನವಾಗಿದೆ. ಸುಧಾಕರ್ ಅವರಿಗೆ ಬದ್ಧತೆ, ಶ್ರದ್ದೆ ಇರುವ ಕಾರಣಕ್ಕೆ ಜವಾಬ್ದಾರಿಯುತ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ” ಎಂದರು.
“ನಾನು ಕಾಲೇಜಿನಲ್ಲಿ ಓದುವಾಗ ವಿದ್ಯಾರ್ಥಿ ನಾಯಕನಾಗಿದ್ದೆ. ನನ್ನ ಚಟುವಟಿಕೆಗಳನ್ನು ನೋಡಿ ವಿಧಾನಸಭೆಗೆ ಟಿಕೆಟ್ ನೀಡಲಾಯಿತು. ಈ ಕಾರಣಕ್ಕೆ ಪದವಿಯನ್ನು ಮುಗಿಸಲು ನನ್ನಿಂದ ಆಗಲಿಲ್ಲ. ಅಂದು ವಿಧಾನಸಭೆಯಲ್ಲಿ ದಿಗ್ಗಜ ನಾಯಕರು ಇದ್ದರು. ಬಂಗಾರಪ್ಪ ಅವರು, ನಂಜೇಗೌಡರು, ಕಾಗೋಡು ತಿಮ್ಮಪ್ಪ ಅವರು, ನಾಣಯ್ಯ, ವಿರೇಂದ್ರ ಪಾಟೀಲ್ ಅವರು ಹೀಗೆ ಘಟಾನುಘಟಿಗಳ ದಂಡೇ ಇತ್ತು. ಅವರ ಭಾಷಣ, ಚರ್ಚೆ, ಮಾತುಗಳನ್ನು ಕೇಳುತ್ತಿದ್ದರೆ ನಮಗೆ ಪದಗಳೇ ಬರುತ್ತಿರಲಿಲ್ಲ. ಜೊತೆಗೆ ನಾನು ಪದವಿ ಓದುವುದನ್ನು ಮೊಟಕುಗೊಳಿಸಿದೆ ಎನ್ನುವ ಕೊರಗು ನನ್ನ ಕಾಡುತ್ತಿತ್ತು” ಎಂದರು.
“ಹೈಸ್ಕೂಲ್ ಓದುವ ವೇಳೆ ಎನ್ ಪಿಎಸ್ ಸಂಸ್ಥೆಯ ಗೋಪಾಲಕೃಷ್ಣ ಅವರು ಈ ಹುಡುಗ ಸರಿಯಿಲ್ಲ ಎಂದು ನನಗೆ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಿದ್ದರು. ಆದರೆ ಇದೇ ಸಂಸ್ಥೆಯಲ್ಲಿ ಓದಬೇಕು ಎನ್ನುವ ಹಠ ನನ್ನದು. ಆಗ ಕನಕಪುರದ ರೂರಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಶಾಸಕರಾಗಿದ್ದ ಕರಿಯಪ್ಪ ಅವರ ಬಳಿಗೆ ನಮ್ಮ ತಾತ ಕರೆದುಕೊಂಡು ಹೋದರು. ಆಗ ಮಲ್ಲಿಕಾರ್ಜುನ ಸ್ವಾಮಿ ಎನ್ನುವವರು ಶಿಕ್ಷಣ ಸಚಿವರಾಗಿದ್ದರು. ಅವರು ಗೋಪಾಲಕೃಷ್ಣ ಅವರಿಗೆ ಕರೆ ಮಾಡಿ ಹೇಳಿದರೂ ಅವರು ನನ್ನ ಸೇರಿಸಿಕೊಳ್ಳಲಿಲ್ಲ” ಎಂದರು.
“ಈ ವಿಚಾರ ದೇವರಾಜ ಅರಸು ಅವರ ಬಳಿಗೆ ಹೋಯಿತು. ಅವರು ಗೋಪಾಲಕೃಷ್ಣ ಅವರನ್ನು ಕರೆದು ನನ್ನ ಸೇರಿಸಿಕೊಳ್ಳಿ ಎಂದರೂ ಅವರು ಒಪ್ಪಲಿಲ್ಲ. ನಂತರ ನನ್ನನ್ನು ವಿದ್ಯಾವರ್ದಕ ಸಂಘದ ಶಾಲೆಗೆ ಅನುಮತಿ ಕೊಡಿಸಿ ಅಲ್ಲಿಗೆ ದಾಖಲಾತಿ ಮಾಡಲಾಯಿತು. ಇಷ್ಟೆಲ್ಲಾ ಕಷ್ಟಪಟ್ಟರು ನಾನು ಪದವೀಧರನಾಗಲಿಲ್ಲ. ನಾನು 2004- 2007 ರಲ್ಲಿ ಎಂ.ಎ ರಾಜಕೀಯ ಶಾಸ್ತ್ರ ಪದವಿಯನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಪಡೆದೆ. ಘಟಿಕೋತ್ಸವದ ವೇಳೆ ನಾನು ಕಾಂಗ್ರೆಸ್ ಶಾಸಕ ಎಂದು ಪ್ರಮಾಣ ಪತ್ರ ವಿತರಣೆ ಮಾಡಲು ಹಿಂಜರಿದರು. ಆಗ ನಾನು ಶಾಸಕನಾಗಿದ್ದೆ. ತದ ನಂತರ ಅದೇ ವಿಶ್ವವಿದ್ಯಾಲಯದ ನಿರ್ದೇಶಕ ಮಂಡಳಿಯಲ್ಲಿ ಸ್ಥಾನ ಪಡೆದೆ. ಕ್ಯಾಬಿನೆಟ್ ದರ್ಜೆಯ ಸಚಿವನಾದಗಲೂ ಆಗದ ಸಂತಸ ಪದವಿ ಪಡೆದಾಗ ಆಯಿತು” ಎಂದು ಹೇಳಿದರು.
“ಸುಧಾಕರ್ ಅವರು ವಿದ್ಯಾರ್ಥಿಗಳನ್ನು ಉನ್ನತ ತರಬೇತಿಗಾಗಿ ವಿದೇಶಕ್ಕೆ ಕಳುಹಿಸಲಾಗಿತ್ತು. ಅವರು ಬರುವಾಗ ಅತ್ಯಂತ ಆತ್ಮವಿಸ್ವಾಸದಿಂದ ಬರುತ್ತಿದ್ದರು ಎಂದು ಹೇಳಿದ್ದನ್ನು ಕೇಳಿ ನನ್ನನ್ನು ಕಳುಹಿಸಿ ಎಂದು ಅವರಲ್ಲಿ ಕೇಳಿದ್ದೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕಾರ್ಯಕ್ರಮದ ಉದ್ಘಾಟನೆ ವೇಳೆ ʼಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪಂಜ್ಜೋತಿ ಪ್ರಕಾಶಿತಂʼ ಎನ್ನುವ ಶ್ಲೋಕದ ಬದಲು ಶತ್ರು ವಿನಾಶಾಯ ಎನ್ನುವ ಶ್ಲೋಕ ಸಾಲು ಹೇಳಲಾಯಿತು. ಇದು ತಪ್ಪು ನಾವೆಲ್ಲರೂ ಸೇರಿರುವುದು ಶತ್ರು ವಿನಾಶಕ್ಕಲ್ಲ ಜ್ಞಾನದ ವೃದ್ದಿಗೆ” ಎಂದು ಶ್ಲೋಕದಲ್ಲಿ ಆದ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದರು.
“ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ. ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಜಂಕಿಸಿ ಬುದ್ದಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ. ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ. ಈ ಸನ್ನಿವೇಶದಲ್ಲಿ ನಾವು, ನೀವು ಎಲ್ಲರೂ ಇದ್ದೇವೆ. ಇದನ್ನು ಬದಲಾವಣೆ ಮಾಡುವ ಶಕ್ತಿ ನಿಮ್ಮಲ್ಲಿದೆ” ಎಂದರು.
SHOCKING : ಹಾಸ್ಟೆಲ್ ನಲ್ಲಿ `ಲೋ ಬಿಪಿ’ಯಿಂದ ಕುಸಿದು ಬಿದ್ದು 8 ನೇ ತರಗತಿ ವಿದ್ಯಾರ್ಥಿ ಸಾವು.!