ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಜನಪರ ಗ್ಯಾರಂಟಿ ಸ್ಕೀಂಗಳನ್ನು ನಿಲ್ಲಿಸಲೂ ಬಾರದು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರವಾಸಿ ಮಂದಿರದಲ್ಲಿ ಇಂದು ತಾಲೂಕು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ತಾಲೂಕಿನ ಪಿಡಿಓಗಳ ಸಭೆಯನ್ನು ನಡೆಸಿ, ಮಳೆಗಾಲದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಮಳೆಯಿಂದ ಉಂಟಾದ ಹಾನಿಯ ಬಗ್ಗೆ ತುರ್ತು ಕ್ರಮವಹಿಸಿ, ಸರಿಪಡಿಸೋ ಕೆಲಸ ಮಾಡಬೇಕು. ಮನೆ ಹಾನಿಗೆ ಕೂಡಲೇ 10,000 ಪರಿಹಾರವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ ಅಬಕಾರಿ ಇಲಾಖೆಯ ಸಭೆ ನಡೆಸಿ, ಆದಾಯ ಸಂಗ್ರಹಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಕೊರತೆ ಎದುರಾಗಿದ್ಯಾ ಅಂತ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದಂತ ಅವರು, ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಕೊರತೆ ಉಂಟಾಗಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಟಾರ್ಗೆಟ್ ಫಿಕ್ಸ್ ಮಾಡುವುದು ಮಾಮೂಲಿ. ಅದೇನೂ ಹೊಸದೇನಲ್ಲ ಎಂದರು.
ರಾಜ್ಯದಲ್ಲಿ ಗಾರಂಟಿ ಯೋಜನೆ ನಿಲ್ಲಲಿದೆ ಅನ್ನೋ ಆತಂಕದಲ್ಲಿ ಜನತೆ ಇದ್ದಾರೆ ಎಂಬ ಮತ್ತೊಬ್ಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದಂತ ಅವರು, ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಇದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಈಗಾಗಲೇ ಹಲವು ಬಾರಿ ಸ್ಪಷ್ಟ ಪಡಿಸಿದ್ದಾರೆ. ನಾನು ಕೂಡ ಈ ಸಂದರ್ಭದಲ್ಲಿ ರಾಜ್ಯದ ಜನಪರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಾರದು ಅಂತ ಮನವಿ ಮಾಡುವುದಾಗಿ ಹೇಳಿದರು.