ನವದೆಹಲಿ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾವನಾತ್ಮಕ ಪತ್ರ ಬರೆದಿದ್ದಾರೆ. ನಾವು ಹೆಮ್ಮೆಯಿಂದ ಹೇಳೋಣ – ನಾವು ಸ್ವದೇಶಿ ಉತ್ಪನ್ನಗಳನ್ನು ಖರೀದಿಸುತ್ತೇವೆ. ನಾವು ಹೆಮ್ಮೆಯಿಂದ ಹೇಳೋಣ – ನಾವು ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಎಂಬುದಾಗಿ ಶಪಥ ಮಾಡಲು ಕರೆ ನೀಡಿದ್ದಾರೆ. ಆ ಭಾವನಾತ್ಮಕ ಪತ್ರ ಮುಂದಿದೆ ಓದಿ.
ನನ್ನ ಪ್ರೀತಿಯ ದೇಶಬಾಂಧವರೇ,
ನಮಸ್ಕಾರ!
ದೇಶಾದ್ಯಂತ ನವರಾತ್ರಿ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.
ಈ ವರ್ಷದ ಹಬ್ಬದ ಋತುವು, ಸಂಭ್ರಮಿಸಲು ಮತ್ತೊಂದು ಕಾರಣವನ್ನು ತಂದಿದೆ. ಸೆಪ್ಟೆಂಬರ್ 22ರಿಂದ ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳು ಜಾರಿಗೆ ಬಂದಿವೆ, ಇದು ದೇಶಾದ್ಯಂತ “ಜಿ.ಎಸ್.ಟಿ ಉಳಿತಾಯ ಉತ್ಸವ”ದ ಆರಂಭವನ್ನು ಗುರುತಿಸುತ್ತದೆ.
ಈ ಸುಧಾರಣೆಗಳು ಉಳಿತಾಯವನ್ನು ಹೆಚ್ಚಿಸುತ್ತವೆ ಮತ್ತು ರೈತರು, ಮಹಿಳೆಯರು, ಯುವಜನರು, ಬಡವರು, ಮಧ್ಯಮ ವರ್ಗ, ವ್ಯಾಪಾರಿಗಳು ಹಾಗೂ ಎಂ.ಎಸ್.ಎಂ.ಇ. ಗಳಂತಹ ಸಮಾಜದ ಪ್ರತಿಯೊಂದು ವರ್ಗಕ್ಕೂ ನೇರವಾಗಿ ಪ್ರಯೋಜನವನ್ನು ನೀಡುತ್ತವೆ. ಈ ಸುಧಾರಣೆಗಳು ಹೆಚ್ಚಿನ ಬೆಳವಣಿಗೆ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸುತ್ತವೆ ಹಾಗೂ ಪ್ರತಿಯೊಂದು ರಾಜ್ಯ, ಪ್ರದೇಶದ ಪ್ರಗತಿಯನ್ನು ವೇಗಗೊಳಿಸುತ್ತವೆ.
ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳ ಪ್ರಮುಖ ಲಕ್ಷಣವೆಂದರೆ ಮುಖ್ಯವಾಗಿ ಶೇಕಡ 5 ಮತ್ತು ಶೇಕಡ 18ರ ಎರಡು ಹಂತಗಳು ಇರುತ್ತವೆ.
ಆಹಾರ, ಔಷಧಿಗಳು, ಸಾಬೂನು, ಟೂತ್ ಪೇಸ್ಟ್, ವಿಮೆ ಮತ್ತು ಇತರ ಹಲವು ದಿನನಿತ್ಯದ ವಸ್ತುಗಳು ಈಗ ತೆರಿಗೆ ಮುಕ್ತವಾಗಿವೆ ಅಥವಾ ಕಡಿಮೆ ಶೇಕಡ 5ರ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಹಿಂದೆ ಶೇಕಡ 12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸರಕುಗಳು ಈಗ ಬಹುತೇಕವಾಗಿ ಶೇಕಡ 5ರ ತೆರಿಗೆ ವ್ಯಾಪ್ತಿಗೆ ಬಂದಿವೆ.
ಸುಧಾರಣೆಗಳ ಮೊದಲು ಮತ್ತು ನಂತರದ ತೆರಿಗೆಗಳನ್ನು ಬಿಂಬಿಸುವ ‘ಆಗ ಮತ್ತು ಈಗ’ ಫಲಕಗಳನ್ನು ವಿವಿಧ ಅಂಗಡಿಯವರು ಮತ್ತು ವ್ಯಾಪಾರಿಗಳು ಪ್ರದರ್ಶಿಸುತ್ತಿರುವುದನ್ನು ನೋಡಲು ಹೃದಯಸ್ಪರ್ಶಿಯಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, 25 ಕೋಟಿ ಜನರು ಬಡತನದಿಂದ ಹೊರಬಂದು, ಮಹತ್ವಾಕಾಂಕ್ಷೆಯ ನವ-ಮಧ್ಯಮ ವರ್ಗವನ್ನು ರೂಪಿಸಿಕೊಂಡಿದ್ದಾರೆ.
ಇದಲ್ಲದೆ, ನಾವು ಆದಾಯ ತೆರಿಗೆಯಲ್ಲಿ ಭಾರಿ ಕಡಿತ ಮಾಡುವ ಮೂಲಕ ನಮ್ಮ ಮಧ್ಯಮ ವರ್ಗದವರ ಕೈಗಳನ್ನು ಬಲಪಡಿಸಿದ್ದೇವೆ, ಆ ಮೂಲಕ ವಾರ್ಷಿಕ 12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ನೀಡಿದ್ದೇವೆ.
ನಾವು, ಆದಾಯ ತೆರಿಗೆ ಕಡಿತ ಮತ್ತು ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳನ್ನು ಸೇರಿಸಿದರೆ ಜನರಿಗೆ ಸುಮಾರು 2.5 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗುತ್ತದೆ.
ನಿಮ್ಮ ಗೃಹ ಉಪಯೋಗಿ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ಮನೆ ಕಟ್ಟುವುದು, ವಾಹನ ಖರೀದಿಸುವುದು, ಉಪಕರಣಗಳನ್ನು ಖರೀದಿಸುವುದು, ಹೊರಗೆ ಊಟ ಮಾಡುವುದು ಅಥವಾ ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸುವುದು ಮುಂತಾದ ಆಕಾಂಕ್ಷೆಗಳನ್ನು ಈಡೇರಿಸಲು ಸುಲಭವಾಗುತ್ತದೆ.
2017ರಲ್ಲಿ ಪ್ರಾರಂಭವಾದ ನಮ್ಮ ದೇಶದ ಜಿ.ಎಸ್.ಟಿ ಪ್ರಯಾಣವು, ನಮ್ಮ ನಾಗರಿಕರು ಮತ್ತು ವ್ಯವಹಾರಗಳನ್ನು ಬಹು ತೆರಿಗೆಗಳ ಜಾಲದಿಂದ ಮುಕ್ತಗೊಳಿಸುವಲ್ಲಿ ಒಂದು ಮಹತ್ವದ ತಿರುವು ನೀಡಿತು. ಜಿ.ಎಸ್.ಟಿ ದೇಶವನ್ನು ಆರ್ಥಿಕವಾಗಿ ಒಗ್ಗೂಡಿಸಿತು. “ಒಂದು ದೇಶ, ಒಂದು ತೆರಿಗೆ” ಏಕರೂಪತೆ ಮತ್ತು ಪರಿಹಾರವನ್ನು ಒದಗಿಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಜಿ.ಎಸ್.ಟಿ ಮಂಡಳಿಯು ಹಲವಾರು ಜನಪರ ನಿರ್ಧಾರಗಳನ್ನು ತೆಗೆದುಕೊಂಡಿತು.
ಈಗ, ಈ ಹೊಸ ಸುಧಾರಣೆಗಳು ನಮ್ಮನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತವೆ, ವ್ಯವಸ್ಥೆಯನ್ನು ಸರಳಗೊಳಿಸುತ್ತವೆ, ಬೆಲೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಜನರಿಗೆ ಹೆಚ್ಚಿನ ಉಳಿತಾಯವನ್ನು ಒದಗಿಸುತ್ತವೆ.
ನಮ್ಮ ಸಣ್ಣ ಕೈಗಾರಿಕೆಗಳು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಎಂ.ಎಸ್.ಎಂ.ಇ.ಗಳಿಗೆ ವ್ಯವಹಾರ ಮಾಡುವ ಸುಲಭತೆ ಮತ್ತು ಅನುಸರಣೆಯ ಸರಳತೆಯನ್ನು ಹೆಚ್ಚಿಸುತ್ತವೆ. ಕಡಿಮೆ ತೆರಿಗೆಗಳು, ಕಡಿಮೆ ಬೆಲೆಗಳು ಮತ್ತು ಸರಳ ನಿಯಮಗಳು ವಿಶೇಷವಾಗಿ ಎಂ.ಎಸ್.ಎಂ.ಇ. ವಲಯದಲ್ಲಿ ಉತ್ತಮ ಮಾರಾಟ, ಕಡಿಮೆ ಅನುಸರಣೆ ಹೊರೆ ಮತ್ತು ಹೆಚ್ಚಿನ ಅವಕಾಶಗಳಿಗೆ ಕಾರಣವಾಗುತ್ತವೆ.
2047ರ ವೇಳೆಗೆ ವಿಕಸಿತ ಭಾರತ ನಮ್ಮ ಸಾಮೂಹಿಕ ಗುರಿಯಾಗಿದೆ. ಇದನ್ನು ಸಾಧಿಸಲು, ಸ್ವಾವಲಂಬನೆಯ ಹಾದಿಯಲ್ಲಿ ಸಾಗುವುದು ಅತ್ಯಗತ್ಯ. ಈ ಸುಧಾರಣೆಗಳು ನಮ್ಮ ದೇಶೀಯ ಉತ್ಪಾದನಾ ನೆಲೆಯನ್ನು ಬಲಪಡಿಸುತ್ತವೆ ಮತ್ತು ಸ್ವಾವಲಂಬಿ ಭಾರತಕ್ಕೆ ದಾರಿ ಮಾಡಿಕೊಡುತ್ತವೆ.
ಈ ನಿಟ್ಟಿನಲ್ಲಿ, ಈ ಹಬ್ಬದ ಋತುವಿನಲ್ಲಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬೆಂಬಲಿಸುವುದಾಗಿ ನಾವು ಸಂಕಲ್ಪ ಮಾಡೋಣ. ಇದರರ್ಥ ಬ್ರ್ಯಾಂಡ್ ಅಥವಾ ಕಂಪನಿಯನ್ನು ಲೆಕ್ಕಿಸದೆ, ಭಾರತೀಯರ ಬೆವರು ಮತ್ತು ಕಠಿಣ ಪರಿಶ್ರಮದಿಂದ ತಯಾರಿಸಿಲಾದ ದೇಶೀಯ ಉತ್ಪನ್ನಗಳನ್ನು ಖರೀದಿಸುವುದು.
ನಮ್ಮದೇ ಆದ ಕುಶಲಕರ್ಮಿಗಳು, ಕಾರ್ಮಿಕರು ಮತ್ತು ಕೈಗಾರಿಕೆಗಳು ತಯಾರಿಸಿದ ಉತ್ಪನ್ನವನ್ನು ನೀವು ಖರೀದಿಸಿದಾಗಲೆಲ್ಲಾ, ನೀವು ಅನೇಕ ಕುಟುಂಬಗಳ ಜೀವನೋಪಾಯಕ್ಕೆ ಸಹಾಯ ಮಾಡುತ್ತೀರಿ ಮತ್ತು ನಮ್ಮ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೀರಿ.
ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ನಾನು ನಮ್ಮ ಅಂಗಡಿಯವರು ಮತ್ತು ವ್ಯಾಪಾರಿಗಳಿಗೆ ಮನವಿ ಮಾಡುತ್ತೇನೆ.
ನಾವು ಹೆಮ್ಮೆಯಿಂದ ಹೇಳೋಣ – ನಾವು ಸ್ವದೇಶಿ ಉತ್ಪನ್ನಗಳನ್ನು ಖರೀದಿಸುತ್ತೇವೆ.
ನಾವು ಹೆಮ್ಮೆಯಿಂದ ಹೇಳೋಣ – ನಾವು ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ.
ರಾಜ್ಯ ಸರ್ಕಾರಗಳು ಕೈಗಾರಿಕೆ, ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು ಮತ್ತು ಹೂಡಿಕೆ ವಾತಾವರಣವನ್ನು ಸುಧಾರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.
ಮತ್ತೊಮ್ಮೆ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನವರಾತ್ರಿಯ ಶುಭಾಶಯಗಳು ಮತ್ತು ‘ಜಿ.ಎಸ್.ಟಿ ಉಳಿತಾಯ ಉತ್ಸವ’ದ ಮೂಲಕ ಸಂತೋಷ ಮತ್ತು ಉಳಿತಾಯದಿಂದ ತುಂಬಿದ ಋತುವು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
ಈ ಸುಧಾರಣೆಗಳು ಪ್ರತಿಯೊಂದು ಭಾರತೀಯ ಕುಟುಂಬಕ್ಕೂ ಹೆಚ್ಚಿನ ಸುಖ-ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಬರೆದಿರುವಂತ ಪತ್ರದಲ್ಲಿ ತಿಳಿಸಿದ್ದಾರೆ.
CSR ನಿಧಿ ಬಿಟ್ಟು ಎಷ್ಟು ಅನುದಾನ ತಂದಿದ್ದಾರೆ; HDK ಗೆ ಚಲುವರಾಯಸ್ವಾಮಿ ಟಾಂಗ್
ರಾಜ್ಯದ ಜೈನ ಮಂದಿರಗಳ ಅರ್ಚಕರಿಗೆ ಸಿಹಿಸುದ್ದಿ: ವೇತನ ನಿಗದಿ ಪಡಿಸಿ ಸರ್ಕಾರ ಅಧಿಕೃತ ಆದೇಶ