ಚಿಕ್ಕಮಗಳೂರು : ವಿವಾದಿತ ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆಡಳಿತ ಮಂಡಳಿಯ ಶಿಫಾರಸ್ಸಿನ ಮೇರೆಗೆ ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಎಂಬ ಇಬ್ಬರು ಹಿಂದೂ ಅರ್ಚಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಅರ್ಚಕರ ನೇಮಕ ಸಂಬಂಧ ರಾಜ್ಯಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿತ್ತು. ಈ ಆಡಳಿತ ಮಂಡಳಿಯಲ್ಲಿ ಓರ್ವ ಮುಸ್ಲಿಂ ಸದಸ್ಯ ಸೇರಿ 8 ಜನರು ಇದ್ದರು. ಅರ್ಚಕರ ನೇಮಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿತ್ತು, ಅಂತೆಯೇ ಆಡಳಿತ ಮಂಡಳಿ ಇಬ್ಬರು ಅರ್ಚಕರನ್ನು ನೇಮಿಸಿ ಆದೇಶ ಹೊರಡಿಸಿದೆ.

ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯ ವಿವಾದಾತ್ಮಕ ದತ್ತ ಪೀಠದಲ್ಲಿ ಡಿಸೆಂಬರ್ 6, 7, 8 ರಂದು ದತ್ತ ಜಯಂತಿಗೆ ಹೈಕೋರ್ಟ್ ಅನುಮತಿ ಮಂಜೂರಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪ್ರಕರಣದಲ್ಲಿ ಅನುಮತಿ ನೀಡಲಾಗಿದೆ.ಇನ್ನೂ, ದತ್ತಪೀಠದಲ್ಲಿ ದತ್ತಜಯಂತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ 5 ದಿನ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ 5 ದಿನಗಳ ಕಾಲ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್ 6ರಿಂದ 8 ರವರೆಗೆ ದತ್ತಜಯಂತಿ ಕಾರ್ಯಕ್ರಮ ನಡೆಯಲಿದ್ದು, ಡಿಸೆಂಬರ್ 5ರ ಬೆಳಗ್ಗೆ 9 ಗಂಟೆಯಿಂದ ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳಕ್ಕೆ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ದಿನಗಳಲ್ಲಿ ಪ್ರವಾಸಿಗರು ಹೋಟೆಲ್, ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ವಾಸ್ತವ್ಯಕ್ಕೆ ಕಾಯ್ದಿರಿಸಿಕೊಂಡಿದ್ದರೆ, ವಾಸ್ತವ್ಯ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Share.
Exit mobile version