ಬೆಂಗಳೂರು: ಕರ್ನಾಟಕದಲ್ಲಿ ಸ್ವತಃ ಉಪ ಮುಖ್ಯಮಂತ್ರಿ ಸೇರಿ ಹಲವಾರು ಶಾಸಕರು ಅಭಿವೃದ್ಧಿಗೆ ಅನುದಾನ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ಸಿನ ಘೋಷಣೆಗಳು ಅರ್ಧಂಬರ್ಧ ಆಶ್ವಾಸನೆಗಳು. ಅವನ್ನು ಈಡೇರಿಸಲಾಗದೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಜೆಟ್ 2.98 ಲಕ್ಷ ಕೋಟಿ ಇದ್ದು, ಫೆಬ್ರವರಿ ಮಧ್ಯಭಾಗಕ್ಕೆ ಬಂದರೂ ಶೇ 38 ರಷ್ಟು ಹಣ ವ್ಯಯಿಸದೆ ಬಾಕಿ ಇದೆ. 1.13 ಲಕ್ಷ ಕೋಟಿ ಹಣ ಖರ್ಚಾಗಿಲ್ಲ. ನಮ್ಮ ಕಡೆ ಒಮ್ಮೆ ಬಂದು ಚೆಕ್ ಮಾಡಿ ಎಂದರಲ್ಲದೆ, ನಮ್ಮಲ್ಲಿ ಪ್ರತಿ ತಿಂಗಳೂ ಪ್ರಧಾನಿಯವರು ಹಣ ಖರ್ಚಾದುದರ ಕುರಿತು ಸಭೆ ನಡೆಸುತ್ತಾರೆ. ಇಲ್ಲಿ ಮಾರ್ಚ್‍ನಲ್ಲಿ ಲೆಕ್ಕ ತೋರಿಸುತ್ತಾರಷ್ಟೇ ಎಂದು ಟೀಕಿಸಿದರು.
ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳ ಶೇ 34 ರಷ್ಟು (5,727 ಕೋಟಿ ರೂ) ಹಣ ಖರ್ಚಾಗದೆ ಉಳಿದಿದೆ. ಇದು ರಾಜ್ಯ ಸರ್ಕಾರದ ಡ್ಯಾಶ್ ಬೋರ್ಡಿನ ಮಾಹಿತಿ ಎಂದು ತಿಳಿಸಿದರು. ಕೇಂದ್ರ ಸರ್ಕಾರ ರಾಜ್ಯದ ಕೃಷಿ ಇಲಾಖೆಗೆ ಕೊಟ್ಟ ಹಣವೂ ಸರಿಯಾಗಿ ಖರ್ಚಾಗಿಲ್ಲ. ಪಶು ಚಿಕಿತ್ಸಾಲಯ, ಪಶುಗಳಿಗೆ ಬೇಕಾದ ಔಷಧಿಗೆ ಬೇಡಿಕೆ ಇದೆ. ಆದರೆ, ಆ ಸಂಬಂಧ ಕೇಂದ್ರ ಕೊಟ್ಟ ಅನುದಾನವನ್ನು ಸರಿಯಾಗಿ ಬಳಸಿಲ್ಲ ಎಂದು ಆಕ್ಷೇಪಿಸಿದರು.
ಬರ ಪರಿಹಾರ
2004-05ರಲ್ಲಿ ಸರಕಾರ ಯಾರದಿತ್ತು ಸಿದ್ದರಾಮಯ್ಯನವರೇ? ಮಿಸ್ಟರ್ ಸಿದ್ದರಾಮಯ್ಯ; ಅದು ಯುಪಿಎ ಸರಕಾರ. ಆಗ ನೀವು ಕೇಂದ್ರದಿಂದ ಎಷ್ಟು ಹಣ ಕೇಳಿದ್ದಿರಿ. 2004-05ರಲ್ಲಿ ನಿಮ್ಮ ಸಮ್ಮಿಶ್ರ ಸರಕಾರ ಇತ್ತು. ಆಗ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದರು. ಬರ ಸಂಬಂಧ ನೀವು ಕೇಳಿದ್ದು, 1,147 ಕೋಟಿ. 131 ಕೋಟಿ ಬಿಡುಗಡೆ ಆಗಿತ್ತು; ಜಸ್ಟ್ ಶೇ 10 ಎಂದು ಅಂಕಿ ಅಂಶ ನೀಡಿದರು.
2006-07ರಲ್ಲಿ 1,595 ಕೋಟಿ ಕೇಳಿದ್ದು, 340 ಕೋಟಿ ರಿಲೀಸ್ ಆಗಿತ್ತು. 2006ರಲ್ಲಿ ನೆರೆ ಸಂಬಂಧ 406 ಕೋಟಿ ಕೇಳಿದ್ದರು. 249 ಕೋಟಿ ಬಿಡುಗಡೆ ಮಾಡಿದ್ದರು. 2008-09ರಲ್ಲಿ ಬರಗಾಲ ಮತ್ತು ನೆರೆ ಸಂಬಂಧ ಸುಮಾರು 2600 ಕೋಟಿ ಕೇಳಿದ್ದರು. 178 ಕೋಟಿ ಕೊಟ್ಟಿದ್ದಾರೆ. 2004-09 ನಡುವಿನ 5 ವರ್ಷಗಳ ಯುಪಿಎ ಆಡಳಿತದಲ್ಲಿ 15,541 ಕೋಟಿ ಕೇಳಿದ್ದು, 1,524 ಕೋಟಿಯಷ್ಟೇ ರಾಜ್ಯಕ್ಕೆ ಬಿಡುಗಡೆ ಆಗಿತ್ತು ಎಂದು ಹೇಳಿದರು.
ಎನ್‍ಡಿಆರ್‍ಎಫ್ ಅಡಿಯಲ್ಲಿ ಜಾಸ್ತಿನೇ ಕೊಟ್ಟಿದ್ದೇವೆ..
2009-10ರಿಂದ 2013-14ರ ಯುಪಿಎ ಎರಡನೇ ಅವಧಿಯಲ್ಲಿ 29,097 ಕೋಟಿ ಕೇಳಿದ್ದು, 3,297 ಕೋಟಿ ಬಿಡುಗಡೆ ಆಗಿತ್ತು. ಇದು ಕೂಡ ಶೇ 10 ಎಂದು ಪ್ರಲ್ಹಾದ್ ಜೋಶಿ ಅವರು ಹೇಳಿದರು. ನಮ್ಮ ಕಾಲದಲ್ಲಿ 2014ರಿಂದ 2023-24ರ ನಡುವಿನ ಅವಧಿಯಲ್ಲಿ ಸುಮಾರು 63,440 ಕೋಟಿ ರೂ. ಕೇಳಿದ್ದು, 13,378 ಕೋಟಿ ರೂ. ಬಿಡುಗಡೆ ಆಗಿದೆ. ಎನ್‍ಡಿಆರ್‍ಎಫ್ ಅಡಿಯಲ್ಲಿ ಜಾಸ್ತಿನೇ ಕೊಟ್ಟಿದ್ದೇವೆ. ಮುಂಚಿತವಾಗಿಯೇ ಹಣ ಬಿಡುಗಡೆ ಮಾಡಿದ್ದೇವೆ ಎಂದು ವಿಶ್ಲೇಷಿಸಿದರು.
ಮುಂಚಿತವಾಗಿಯೇ ಸುಮಾರು 700 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದ ಅವರು, ಪ್ರತಿಯೊಂದು ಹಣಕಾಸು ಆಯೋಗವೂ ಅದರದೇ ಆದ ನಿಯಾಮಾವಳಿ ಹೊಂದಿರುತ್ತದೆ. ಆಯೋಗವು 2016-17ರಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಆ ಸಂದರ್ಭದಲ್ಲಿ ನಮ್ಮ ಸಿದ್ದರಾಮಯ್ಯನವರ ಸರಕಾರವೇ ಇತ್ತು. ಸಿದ್ದರಾಮಯ್ಯನವರ ಸರಕಾರ ಸಮರ್ಪಕ ಮಾಹಿತಿ ಕೊಟ್ಟು ಆಯೋಗಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿಲ್ಲ. ಹಾಗಾಗಿ ಅದರಲ್ಲಿ ಏನಾದರೂ ದೋಷ ಇದ್ದರೆ ಸಿದ್ದರಾಮಯ್ಯನವರೇ ಹೊಣೆ ಎಂದು ತಿಳಿಸಿದರು.
2004-14ರವರೆಗೆ ಯುಪಿಎ ಕಾಲಖಂಡದಲ್ಲಿ ರಾಜ್ಯಕ್ಕೆ ಅನುದಾನ (ಗ್ರಾಂಟ್ ಇನ್ ಏಯ್ಡ್) 60 ಸಾವಿರ ಕೋಟಿ ಕೊಟ್ಟಿದ್ದರು. ಕಳೆದ 10 ವರ್ಷಗಳಲ್ಲಿ ಮೋದಿ ಕಾಲದಲ್ಲಿ ಅನುದಾನ ಮೊತ್ತ ಇಲ್ಲಿವರೆಗೆ 2 ಲಕ್ಷ 36 ಸಾವಿರ ಕೋಟಿ. ಶೇ 243ರಷ್ಟು ಹೆಚ್ಚಳ ದಾಖಲಾಗಿದೆ ಎಂದರಲ್ಲದೆ, ಇನ್ನೂ ಒಂದು ತ್ರೈಮಾಸಿಕ ಅವಧಿ ಬಾಕಿ ಇದೆ ಎಂದು ವಿವರಿಸಿದರು.
2004-14ರವರೆಗೆ 10 ವರ್ಷದಲ್ಲಿ ರಾಜ್ಯಕ್ಕೆ 81 ಸಾವಿರ ಕೋಟಿ ರೂ. ತೆರಿಗೆ ಹಂಚಿಕೆಯನ್ನು (ಟ್ಯಾಕ್ಸ್ ಡೆವೊಲ್ಯೂಷನ್) ಯುಪಿಎ ಸರಕಾರ ಮಾಡಿತ್ತು. ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಕೊಟ್ಟ ತೆರಿಗೆ ಹಂಚಿಕೆ 2.85 ಲಕ್ಷ ಕೋಟಿ. ಇಲ್ಲಿನವರೆಗೆ ಶೇ 250 ಅಧಿಕ ಹಣ ಕೊಡಲಾಗಿದೆ. ಇನ್ನೂ 18 ಸಾವಿರ ಕೋಟಿ ಕೊಡಲಿಕ್ಕಿದೆ ಎಂದು ತಿಳಿಸಿದರು.
ವಾಸ್ತವವಾಗಿ ಅವರು ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆಕ್ಷೇಪಿಸಿದರು.
2004ರಿಂದ 2014ರವರೆಗೆ ಯುಪಿಎ ಅವಧಿಯಲ್ಲಿ ಈವರೆಗೆ 3,655.25 ಕೋಟಿ ಎನ್‍ಡಿಆರ್‍ಎಫ್ (ಓಆಖಈ) ಹಣ ಬಿಡುಗಡೆಯು ಆಗಿತ್ತು. 2014ರಿಂದ ಇಲ್ಲಿನವರೆಗೆ ಮೋದಿ ಸರಕಾರದ ಅವಧಿಯಲ್ಲಿ ಈವರೆಗೆ 12,542.974 ಕೋಟಿ ಬಿಡುಗಡೆ ಆಗಿದೆ. ಅಂದರೆ 3 ಪಟ್ಟು ಹೆಚ್ಚು ಹಣ ಬಿಡುಗಡೆ ಆಗಿದೆ.
ಕೇಂದ್ರದ ಯೋಜನೆಗಳಾದ ಜಲ್‍ಜೀವನ್ ಮಿಷನ್, ಮೆಟ್ರೋ, ಸಬ್‍ಅರ್ಬನ್, ಕಿಸನ್ ಸಮ್ಮಾನ್ ಯೋಜನೆ, ಶಿವಮೊಗ್ಗ ವಿಮಾನ ನಿಲ್ದಾಣ, ಏಕಲವ್ಯ ಸ್ಕೂಲ್ ಮತ್ತು ಮೋರಾರ್ಜಿ ದೇಸಾಯಿ ವಸತಿ ಶಾಲೆಗಳು ಈ ಎಲ್ಲಾ ಯೋಜನೆಗಳು ಕೇಂದ್ರದ ಯೋಜನೆಯಾಗಿದ್ದು ಇದು ತಮ್ಮ ಸರ್ಕಾರದ ಯೋಜನೆಗಳು ಎಂದು ರಾಜ್ಯಪಾಲರ ಭಾಷಣದ ಮೂಲಕ ಹೇಳಿಸಿದ್ದಾರೆ.
ಒಂದು ಕಡೆ ಸಂವಿಧಾನ ಓದಲು ಹೇಳಿ ಇನ್ನೊಂದು ಕಡೆ ವಿಭಜನೆಯ ಮಾತುಗಳನ್ನು ಆಡುತ್ತೀರಿ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾಡಿದರು.
ಸುಳ್ಳು ಹೇಳುವುದರಲ್ಲಿ ಎಕ್ಸ್‍ಪರ್ಟ್..
ಸಿದ್ದರಾಮಯ್ಯನವರು ಸುಳ್ಳು ಹೇಳುವುದರಲ್ಲಿ ಎಕ್ಸ್‍ಪರ್ಟ್. ಅವರು ಸುಳ್ಳುರಾಮಯ್ಯ ಎಂದು ಟೀಕಿಸಿದ ಪ್ರಲ್ಹಾದ್ ಜೋಶಿ ಅವರು, ಕಾಂಗ್ರೆಸ್ಸಿನ ಭರವಸೆಗಳನ್ನು ಈಡೇರಿಸಲು ಅವರಿಗೆ ಆಗುತ್ತಿಲ್ಲ. ತಮ್ಮ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಒಳಜಗಳದ ಗಮನವನ್ನು ಬೇರೆಡೆ ತಿರುಗಿಸಲು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷರಾದ ಮಾಲವಿಕಾ ಅವಿನಾಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಶಾಸಕರುಗಳಾದ ಅಭಯ್ ಪಾಟೀಲ್, ಮಹೇಶ್ ಟೆಂಗಿನಕಾಯಿ ಹಾಗೂ ಎಂ.ಆರ್.ಪಾಟೀಲ್ ಭಾಗವಹಿಸಿದ್ದರು.
BIG NEWS: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 DYSP, 51 PI’ ವರ್ಗಾವಣೆ
‘ಖಾಯಂ ನಿರೀಕ್ಷೆ’ಯಲ್ಲಿದ್ದ ‘ಅತಿಥಿ ಉಪನ್ಯಾಸಕ’ರಿಗೆ ಬಿಗ್ ಶಾಕ್: ‘ಸೇವೆ ಖಾಯಂ’ ಇಲ್ಲ – ‘ರಾಜ್ಯ ಸರ್ಕಾರ’ ಸ್ಪಷ್ಟನೆ