ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ದೂರು ನೀಡಲು ಎಸ್ ಐಟಿಯಿಂದ ಸಹಾಯವಾಣಿ ತೆರೆಯಲಾಗಿದ್ದು, ಈವರೆಗೆ ಇದಕ್ಕೆ 30 ಜನರು ಕರೆ ಮಾಡಿದ್ದಾರೆ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದಾರೆ.
ಎಸ್ ಐಟಿ ಸಹಾಯವಾಣಿ ಸಂಖ್ಯೆಗೆ ಯಾರು ಯಾರು ಕರೆ ಮಾಡಿದ್ದಾರೆ? ಅವರು ಏನು ಹೇಳಿದ್ದಾರೆ? ಈ ಕರೆಗಳು ಸಂತ್ರಸ್ತೆಯರಿಂದಲೇ ಬಂದಿವೆಯೇ ಎಂಬುದವರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಈ ನಡುವೆ ಸಹಾಯವಾಣಿ ಮೂಲಕ ದಾಖಲಾಗುವ ಹೇಳಿಕೆಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದು, ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಇನ್ನು ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ನಂತರ ಜರ್ಮನಿಗೆ ಪಲಾಯನ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಖಚಿತಪಡಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ 33 ವರ್ಷದ ಪ್ರಜ್ವಲ್ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ 27ರಂದು ಹಾಸನ ಲೋಕಸಭಾ ಚುನಾವಣೆ ಮುಗಿದ ಮರುದಿನವೇ ಪ್ರಜ್ವಲ್ ಜರ್ಮನಿಗೆ ತೆರಳಿದ್ದರು. “ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಪಾಸ್ಪೋರ್ಟ್ ಕಾಯ್ದೆ ಎಂಬ ಕಾಯ್ದೆಯಿಂದ ನಿಯಂತ್ರಿಸಲ್ಪಡುತ್ತದೆ. ಹಾಗೆ ಮಾಡಲು ನಮಗೆ ನ್ಯಾಯಾಂಗ ನ್ಯಾಯಾಲಯ ಅಥವಾ ಪೊಲೀಸ್ ವಿನಂತಿ ಬೇಕು. ಎಂಇಎಗೆ ಕರ್ನಾಟಕದಿಂದ ಮೇ 21 ರಂದು ಮಾತ್ರ ಈ ಮನವಿ ಬಂದಿದೆ” ಎಂದು ಜೈಶಂಕರ್ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.