ಹಾನಗಲ್ : “ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿ ಇದರಿಂದ ಹಗಲು ಹೊತ್ತಿನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲು ಸರ್ಕಾರ ತೀರ್ಮಾನ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಾಜಿ ಸಿಎಂ ಬಂಗಾರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಯಿತು. 2013 ರ ಕಾಂಗ್ರೆಸ್ ಸರ್ಕಾರದ ವೇಳೆ ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡುವ ತ್ರೀ ಫೇಸ್ ವಿದ್ಯುತ್ ಪೂರೈಕೆಯನ್ನು 6 ಗಂಟೆಯಿಂದ 7 ಗಂಟೆಗೆ ಹೆಚ್ಚಳ ಮಾಡಲಾಯಿತು” ಎಂದು ಹೇಳಿದರು.
“665.75 ಕೋಟಿ ಹಣವನ್ನು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದೇವೆ. 418 ಕೋಟಿ ವೆಚ್ಚದಲ್ಲಿ ಬಾಳಂಬೀಡು ಹಾಗೂ ಇತರೇ 72 ಗ್ರಾಮಗಳ 162 ಕೆರೆಗಳು. 116 ಕೋಟಿ ವೆಚ್ಚದಲ್ಲಿ ಹಿರೇಕೌಂಶಿ ಮತ್ತು ಇತರೇ 9 ಗ್ರಾಮಗಳ 77 ಕೆರೆಗಳನ್ನು ತುಂಬಿಸುವ ಕೆಲಸ ನಾವು ಮಾಡುತ್ತಿದ್ದೇವೆ. 2018 ಕೋಟಿ ವೆಚ್ಚದ ವರದಾ ಮತ್ತು ಬೇಡ್ತಿ ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ನದಿ ಪ್ರಾಧಿಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ” ಎಂದರು.
“ರೈತರಿಗಾಗಿ ಹಾಲಿನ ಬೆಲೆ ಹೆಚ್ಚಳ ಮಾಡಿದ್ದೇವೆ. ಈ ಹಣವನ್ನು ಸರ್ಕಾರ ಏನಾದರೂ ತೆಗೆದುಕೊಂಡಿದೆಯೇ? ಇದನ್ನು ರೈತರಿಗೆ ನೀಡಿದ್ದೇವೆ. 30 ಸಾವಿರವಿದ್ದ 10 ಗ್ರಾಂ ಚಿನ್ನದ ಬೆಲೆ 1 ಲಕ್ಷಕ್ಕೆ ಏರಿದೆ. ದಿನಸಿ ವಸ್ತುಗಳು, ಕಬ್ಬಿಣ, ಸಿಮೆಂಟ್ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾದಾಗ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಲಿಲ್ಲ. ಈಗ ಕಾಂಗ್ರೆಸ್ ಮೇಲೆ ಆಕ್ರೋಶವಂತೆ. ಅವರು ಯಾವಾಗ ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸಿದರೋ ಅದೇ ದಿನ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿತು. ಅಧಿಕಾರದಲ್ಲಿ ಇರುವ ನಾವು ನಿಮ್ಮ ನೆರವಿಗೆ ನಿಲ್ಲಬೇಕೆ ಹೊರತು ಪಿಕ್ ಪಾಕೆಟ್ ಮಾಡಲು ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ಕೊಟ್ಟಂತಹ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ನಿಮಗೆ ನಾವು ಆಸರೆಯಾಗಿ ನಿಂತು ಆಧಾರವಾಗಿದ್ದೇವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಹೋದ ತೆರಿಗೆಯಲ್ಲಿ ಕೇವಲ ಶೇ 13 ರಷ್ಟನ್ನು ಮಾತ್ರ ವಾಪಸ್ ಕೊಡುತ್ತಿದೆ. ಆದರೂ ನಾವು 4 ಲಕ್ಷ ಕೋಟಿಗೂ ಅಧಿಕವಾದ ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗಾಗಿ ಮಂಡನೆ ಮಾಡಿದ್ದೇವೆ” ಎಂದರು.
*ಗ್ಯಾರಂಟಿ ವಿರೋಧ ಮಾಡುತ್ತಿದ್ದ ಬಿಜೆಪಿಯವರು ನಂತರ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ದೆಹಲಿ ಚುನಾವಣೆಯಲ್ಲಿ ಅವರೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ದೇಶದ ಪ್ರಧಾನಿ ಕರ್ನಾಟಕ ಬರಿದಾಗಿ ಹೋಯಿತು ಎಂದರು. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಕೊಟ್ಟು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ಪ್ರತಿಯೊಂದು ಕುಟುಂಬ 5-6 ಸಾವಿರ ಉಳಿತಾಯ ಮಾಡುತ್ತಿದೆ” ಎಂದರು.
“ಗುಣವಿಲ್ಲದ ರೂಪ ವ್ಯರ್ಥ. ಹಸಿವಿಲ್ಲದ ಊಟ ವ್ಯರ್ಥ. ಪರೋಪಕಾರವಿಲ್ಲದ ಅಧಿಕಾರ ವ್ಯರ್ಥ. ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ. ಅದಕ್ಕಾಗಿ ನಮಗೆ ಸಿಕ್ಕಿರುವ ಅವಕಾಶ ವ್ಯರ್ಥವಾಗಬಾರದು ಎಂದು ನಿಮ್ಮ ಸೇವೆ ಮಾಡುತ್ತಿದ್ದೇವೆ” ಎಂದರು.
“ನಾವು ಹಾನಗಲ್ ಕ್ಷೇತ್ರಕ್ಕೆ ಕೇವಲ ಅಭಿವೃದ್ಧಿ ಕೆಲಸಗಳ ಉದ್ಘಾಟನೆಗೆ ಬಂದಿಲ್ಲ. ಬದಲಾಗಿ ನೀವು ನಮಗೆ ಕೊಟ್ಟ ಶಕ್ತಿಗೆ ಪ್ರತಿಯಾಗಿ ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನೀವು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿದ್ದೀರಿ. ಅದಕ್ಕಾಗಿ ನಾವು ನಿಮಗೆ ಆಭಾರಿ” ಎಂದು ತಿಳಿಸಿದರು.
“ನಮ್ಮ ಗೌರವ ನಮ್ಮ ನಾಲಿಗೆ ಮೇಲೆ ಇರುತ್ತದೆ. ಮಾತು ಕೂಡ ನಮ್ಮ ಸಂಸ್ಕಾರ ಹೇಳುತ್ತದೆ. ಅಂದರೆ ನಾವು ನುಡಿದಂತೆ ನಡೆಯಬೇಕು ಎಂಬುದು ಇದರ ಅರ್ಥ. ರಾಜಕಾರಣಿಗಳಿಗೆ ಅಂತಿಮವಾಗಿ ಮತದಾರನೇ ಈಶ್ವರ. ಮತದಾರನಿಗೆ ಸೇವೆ ಮಾಡಬೇಕು ಎಂಬುದು ನಮ್ಮ ಸಂಕಲ್ಪ. ಇದಕ್ಕೆ ಬದ್ಧವಾಗಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದ ಉದ್ದಗಲಕ್ಕೂ ನಾವು ಇದೇ ಕೆಲಸವನ್ನು ಮಾಡುತ್ತಿದ್ದೇವೆ” ಎಂದು ನುಡಿದರು.
“ಹಾನಗಲ್ಲಿನ ಶಾಸಕರಾದ ಶ್ರೀನಿವಾಸ ಮಾನೆ ಅವರು ಅತ್ಯಂತ ಕ್ರಿಯಾಶೀಲವಾದ ಶಾಸಕರು. ನೀರಾವರಿ, ಲೋಕೋಪಯೋಗಿ ಮಾತ್ರವಲ್ಲ ಎಲ್ಲಾ ಇಲಾಖೆಗಳಿಂದ ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿದ್ದಾರೆ. ಕಂದಾಯ, ವಿದ್ಯುತ್ ಇಲಾಖೆಯಿಂದ ರೈತರಿಗೆ ಬೇಕಾದಂತಹ ಕೆಲಸ ಮಾಡಿಕೊಡುತ್ತಿದ್ದಾರೆ. ಸಮುದಾಯದ ಬೆಂಬಲ ಇಲ್ಲದೇ ಹೋದರು ಸಹ ಕಳೆದ ಎರಡು ದಶಕಗಳಿಂದ ಜನಸೇವೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಇವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ನಮ್ಮ ಮೇಲೆ ನಂಬಿಕೆ ಇಟ್ಟವರು ನೀವು” ಎಂದು ಹೇಳಿದರು.
“ಹಾವೇರಿ ಜಿಲ್ಲೆ ಐತಿಹಾಸಿಕ ಭೂಮಿ. ಸಂತ ಶಿಶುನಾಳ ಶರೀಫರು, ಕನಕದಾಸರು ಸೇರಿದಂತೆ ಹಲವಾರು ಯೋಗಿಗಳು ಜನಿಸಿದ ಭೂಮಿಯಿದು. ನಿಜಲಿಂಗಪ್ಪ ಅವರಿಗೆ ರಾಜಕೀಯ ಪುರ್ನಜನ್ಮ ಕೊಟ್ಟಂತಹ ಕ್ಷೇತ್ರವಿದು. ಉಪಚುನಾವಣೆಯಲ್ಲಿ ನಮ್ಮ ಪರವಾಗಿ ನೀವು ಕೊಟ್ಟ ತೀರ್ಪು ಐತಿಹಾಸಿಕವಾದುದು” ಎಂದರು.
ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಅಲ್ಲವೆಂದು ಸಾಬೀತಾದ್ರೆ, ರಾಜೀನಾಮೆಗೆ ಸಿದ್ಧ: ಛಲವಾದಿ ನಾರಾಯಣಸ್ವಾಮಿ ಸವಾಲ್
Property Law: ತಂದೆಯ ಆಸ್ತಿಯಲ್ಲಿ ಯಾರಿಗೆಲ್ಲ ಪಾಲು ಇದೆ? ಕಾನೂನು ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ