ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ವರ್ಗಾವಣೆ ದಂಧೆಯಲ್ಲಿ ಸರ್ಕಾರ ತೊಡಗಿರುವಂತ ಗಂಭೀರ ಆರೋಪ ಮಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಪಿಟಿಸಿಎಲ್ ನಿಂದ 226 ಕಿರಿಯ ಇಂಜಿನಿಯರ್ ವರ್ಗಾವಣೆಯಲ್ಲೂ ಕಾಸಿಗಾಗಿ ಪೋಸ್ಟಿಂಗ್ ವಾಸನೆ ಎದ್ದು ಕಾಣುತ್ತಿದೆ. ಪ್ರತಿ ಹುದ್ದೆಗೂ ಪುಲ್ ಡೀಲ್ ಮಗಾ ಡೀಲ್ ನಡೆಸಲಾಗಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಮುಂದೆ ಓದಿ.
226 ಜೆಇ ಅಲ್ಲ, ಡಬಲ್ ವರ್ಗಾವಣೆ
ದಿನಾಂಕ 31-07-2024ರಂದು ಕೆಪಿಟಿಸಿಎಲ್ ನಿಂದ ಕಿರಿಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಗ್ರೂಪ್-ಸಿ ಹಾಗೂ ಡಿ ಪದವೃಂದದ 226 ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇದು ಕೇವಲ ಮೇಲ್ನೋಟಕ್ಕೆ 226 ವರ್ಗಾವಣೆಯಾದರೂ, ಆಂತರಿಕವಾಗಿ ಮಾಡಿರುವ ವರ್ಗಾವಣೆ ದಂಧೆ ಮಾತ್ರ ಡಬಲ್.
ಅಂದರೆ ವರ್ಗಾವಣೆ ಮಾಡಿರುವುದು 226 ಜೆಇ ಆದರೇ, ಅವರನ್ನು ವರ್ಗಾವಣೆ ಮಾಡಿರುವಂತ ಸ್ಥಳದಲ್ಲಿದ್ದಂತ ಜೆಇಗಳನ್ನು ಆಂತರಿಕ ಆದೇಶದ ಮೂಲಕ ಬೇರೆಡೆಗೆ ವರ್ಗಾವಣೆ ಮಾಡಿ, ಚಾಲನಾದೇಶ ನೀಡಿರುವುದು ಕಂಡು ಬಂದಿದೆ.
ದಿನಾಂಕ 31-07-2024ರಂದು 226 ಜೆಇ ವರ್ಗಾವಣೆ ಮಾಡಿದ ಬಗ್ಗೆ ಆದೇಶ ಹೊರ ಬಿದ್ರೇ, ಅಂದೇ ಆಯಾ ಎಸ್ಕಾಂ ಹೆಚ್.ಆರ್ ಗಳು ಚಾಲನಾದೇಶವನ್ನು ಕಾರ್ಪೋರೇಟ್ ಆಫೀಸಿನಿಂದಲೇ ಹೊರಡಿಸಿರುವುದು ಕಂಡರೇ, ವರ್ಗಾವಣೆಯನ್ನು 226 ಜೆಇಗಳನ್ನು ಅಲ್ಲ ಮಾಡಿರೋದು, ಡಬ್ಬಲ್ ಎಂಬುದು ತಿಳಿದು ಬರುತ್ತದೆ. ಅಂದರೆ ಕೆಪಿಟಿಸಿಎಲ್ 226 ಜೆಇ ವರ್ಗಾವಣೆ ಮಾಡಿದರೇ, ಆಯಾ ಎಸ್ಕಾಂಗಳನ್ನು ಅವರ ವರ್ಗಾವಣೆಯ ಸ್ಥಳದಲ್ಲಿದ್ದಂತವರನ್ನು ಬೇರೊಂದು ಖಾಲಿ ಸ್ಥಳಕ್ಕೆ ವರ್ಗಾವಣೆ ಮಾಡಿದೆ.
ಷರತ್ತಿಗೂ ಡೋಂಟ್ ಕೇರ್ ಎಂದು ವರ್ಗಾವರ್ಗಿ
ಇನ್ನೂ 226 ಜೆಇ ವರ್ಗಾವಣೆಯ ಆದೇಶದಲ್ಲೇ ಷರತ್ತು ಮತ್ತು ಸೂಚನೆಗಳನ್ನು ನಿಗದಿ ಪಡಿಸಲಾಗಿದೆ. ಆದ್ರೇ ಅದ್ಯಾವುದಕ್ಕೂ ಡೋಂಟ್ ಕೇರ್ ಎನ್ನುವಂತೆ ಷರತ್ತುಗಳನ್ನು ಮೀರಿಯೇ ಆಡಳಿತಾತ್ಮಕ ಹಿತದೃಷ್ಠಿಯ ಕಾರಣ ನೀಡಿ 4 ವರ್ಷ ಪೂರೈಸದಂತ ನೂರಾರು ಕಿರಿಯ ಇಂಜಿನಿಯರ್ ಗಳನ್ನು ಏಕಾಏಕಿ ಎತ್ತಂಗಡಿ ಮಾಡಲಾಗಿದೆ.
ಒಂದೇ ಹುದ್ದೆಗೆ 7 ಜೆಇ ವರ್ಗಾವಣೆ ಎನ್ನುವ ಸುದ್ದಿಯನ್ನು ನಿನ್ನ ಕನ್ನಡ ನ್ಯೂಸ್ ನೌ ಪ್ರಕಟಿಸಿತ್ತು. ಆ ಬಳಿಕ ಫ್ಯಾಕ್ಟ್ ಚೆಕ್ ನಲ್ಲಿ ಅದರ ಹಿಂದಿನ ಕಾರಣ ಏನು, ಒಂದೇ ಹುದ್ದೆಗೆ ಕೆಪಿಟಿಸಿಎಲ್ 7 ಜೆಇಗಳನ್ನು ವರ್ಗಾವಣೆ ಮಾಡಿದ್ಯಾ ಅನ್ನೋದನ್ನು ಕೂಲಂಕುಷವಾಗಿ ನೌಕರರಿಗೆ, ರಾಜ್ಯದ ಜನತೆಗೆ ತಿಳಿಸಿಕೊಡುವಂತ ಕೆಲಸ ಮಾಡಲಾಗಿತ್ತು.
ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು
ಕನ್ನಡ ನ್ಯೂಸ್ ನೌ ಸುದ್ದಿಯ ಫಲಶೃತಿ ಎನ್ನುವಂತೆ ದಿನಾಂಕ 14-08-2024ರಂದು ಕೆಪಿಟಿಸಿಎಲ್ ನಿಂದ ಈ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ಅದರಲ್ಲಿ ಜೆಇಗಳನ್ನು ಇಂಧನ ಇಲಾಖೆಯ ವಿವಿಧ ವೃತ್ತಗಳಿಗೆ ವರ್ಗಾವಣೆ ಮಾಡಲಾಗಿದೆಯೇ ಹೊರತು ಕೊನೆಯ ಕಾಲಂನಲ್ಲಿ ತಿಳಿಸಿರುವಂತೆ ಆ ಸ್ಥಳಕ್ಕೆ ವರ್ಗಾವಣೆ ಮಾಡಿಲ್ಲ. ನೌಕರರು ಇಲ್ಲಿಗೆ ವರ್ಗಾವಣೆ ಕೋರಿದ್ದಾರೆ ಅಂತ ತಿಳಿಸಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಆದರೇ ಈ ಆದೇಶ ಹೊರ ಬೀಳುವ ಮುನ್ನವೇ ಕೆಪಿಟಿಸಿಎಲ್ ವರ್ಗಾವಣೆ ಆದೇಶದ ದಿನಾಂಕ 31-07-2024ರ ಅಂದೇ ಆ ದಿನದಲ್ಲಿ ಅವರು ಕೋರಿರುವಂತ ಸ್ಥಳಕ್ಕೆ ವರ್ಗಾವಣೆ ಮಾಡಿ ಚಾಲನಾ ಆದೇಶವನ್ನು ಇಂಧನ ಇಲಾಖೆಯ ವಿವಿಧ ವೃತ್ತಗಳ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದಾರೆ. ಅದರಲ್ಲೂ 7 ದಿನಗಳಲ್ಲಿ ವರ್ಗಾವಣೆ ಮಾಡಿರುವಂತ ಸ್ಥಳಕ್ಕೆ ವರದಿ ಮಾಡಿಕೊಳ್ಳುವಂತೆಯೂ ತಿಳಿಸಲಾಗಿದೆ. ಆದರೇ ಆ ವರ್ಗಾವಣೆಯ ಆದೇಶ ತಲುಪಿರೋದು ಮಾತ್ರ ವರ್ಗಾವಣೆಗೊಂಡ ನೌಕರರಿಗೆ ಆಗಸ್ಟ್.14, 2024ರ ಸ್ಪಷ್ಟೀಕರಣದ ಆದೇಶದ ದಿನದಂದು ಆಗಿದೆ.
ನಿಯಮಗಳನ್ನೇ ಗಾಳಿಗೆ ತೂರಿದ ಇಂಧನ ಇಲಾಖೆಯ ಅಧಿಕಾರಿಗಳು
ಅಲ್ಲ ಸ್ವಾಮಿ ದಿನಾಂಕ 31-07-2024ರಂದು ಕೆಪಿಟಿಸಿಎಲ್ ನಿಂದ ವರ್ಗಾವಣೆ ಆದೇಶ ಮಾಡ್ತೀರಿ. ವರ್ಗಾವಣೆ ಕೋರಿರುವ ಸ್ಥಳ ಅಂತ ತೋರಿಸ್ತೀರಿ. ಷರತ್ತಿನಲ್ಲಿ ಗ್ರೂಪ್-ಸಿ ವೃಂದದ ನೌಕರರಿಗೆ 4 ವರ್ಷ, ಗ್ರೂಪ್-ಡಿ ವೃಂದದವರಿಗೆ 7 ವರ್ಷ ಅದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದ್ದರೇ ಮಾತ್ರ ವರ್ಗಾವಣೆಗೆ ಅರ್ಹರು ಅಂತ ತಿಳಿಸ್ತೀರಿ. ಹೀಗಿದ್ದೂ ಈ ಎಲ್ಲಾ ನಿಯಮಗಳನ್ನು ಮೀರಿ ನೌಕರರು ವರ್ಗಾವಣೆ ಕೋರಿದ ಸ್ಥಳಕ್ಕೆ ಆಂತರೀಕವಾಗಿ ವರ್ಗಾವಣೆಗೊಳಿಸಿ ಆದೇಶ ಮಾಡಿದ್ದೇಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇದು ಓಕೆ. ಷರತ್ತಿನಲ್ಲಿ ನಾಲ್ಕು ವರ್ಷ ಪೂರ್ಣಗೊಳಿಸಿರಬೇಕು, 7 ವರ್ಷ ಪೂರ್ಣಗೊಳಿಸಿರಬೇಕು ಅಂತ ವಿಧಿಸಿ, ಅಷ್ಟು ವರ್ಷದ ಸೇವಾ ವೃತ್ತಿಯನ್ನು ಪೂರ್ಣಗೊಳಿಸದ ನೌಕರರನ್ನು ವರ್ಗಾವಣೆ ಮಾಡಿದ್ದೇಕೆ? ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ.
ನೆಪ ಮಾತ್ರಕ್ಕೇ 226 ಜೆಇಗಳನ್ನು ವರ್ಗಾವಣೆ ಗೊಳಿಸಿ, ವರ್ಗಾವಣೆ ಕೋರಿದಂತ ಸ್ಥಳ ತೋರಿಸಿದ್ದೀರಿ. ಆದರೇ ಆ ಸ್ಥಳದಲ್ಲಿ ಖಾಲಿ ಇದ್ಯೋ ಇಲ್ಲವೋ ಎಂಬುದನ್ನು ನೋಡದೇ ಅಲ್ಲಿರುವವರನ್ನು ಆಂತರೀಕವಾಗಿ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಿದ್ದೀರಿ ಇದು ವರ್ಗಾವಣೆ ದಂಧೆ ಅಲ್ಲವೇ ಎನ್ನವುದು ವಿಪಕ್ಷಗಳ ಪ್ರಶ್ನೆಯೂ ಹೌದು.
ಯಾವುದೇ ಇಲಾಖೆಯಿಂದ ವರ್ಗಾವಣೆ ಮಾಡುವ ವೇಳೆಯಲ್ಲಿ ವರ್ಗಾವಣೆಗೊಳಿಸಿದಂತ ನೌಕರನ ಹೆಸರು, ಆತ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಸ್ಥಳ, ವರ್ಗಾವಣೆ ಗೊಳಿಸುತ್ತಿರುವಂತ ಸ್ಥಳವನ್ನು ನಮೂದಿಸಲಾಗುತ್ತದೆ. ಅಲ್ಲದೇ ವರ್ಗಾವಣೆ ಗೊಳಿಸಿದಂತ ಸ್ಥಳದಲ್ಲಿ ಖಾಲಿ ಹುದ್ದೆಯೋ, ಅಥವಾ ಆ ಹುದ್ದೆಯಲ್ಲಿ ಇದ್ದಂತ ನೌಕರನ್ನು ವರ್ಗಾವಣೆ ಮಾಡಿದ ಬಗ್ಗೆಯೋ ತೋರಿಸಲಾಗುತ್ತದೆ. ಇಂಧನ ಇಲಾಖೆಯಲ್ಲಿ ಇದ್ಯಾವ ನಿಯಮ ಇಲ್ಲವೇ.? ಎನ್ನುವಂತಾಗಿದೆ.
ಇದು ಇಂಧನ ಇಲಾಖೆ ಮತ್ತೊಂದು ಕರ್ಮಕಾಂಡ
ಈ ಮೊದಲು ಜೆಇ ಆಗಿ ಪ್ರಮೋಷನ್ ಮಾಡುವಾಗಲೂ ವೃತ್ತ ವ್ಯಾಪ್ತಿಯಲ್ಲಿ ಸೀನಿಯಾರಿಟಿಯನ್ನು ಲೆಕ್ಕಿಸದೆ ವರ್ಗಾವಣೆ ಮುಂದಾಗಿತ್ತು. ಆಗಲೂ ಕನ್ನಡ ನ್ಯೂಸ್ ನೌ ವರದಿ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡಿದ್ದಂತ ಇಂಧನ ಇಲಾಖೆಯೂ ಕೆಪಿಟಿಸಿಎಲ್ ನಿಯಮಾನುಸಾರ ನೌಕರಿಗೆ ಸೇರಿದಂತ ದಿನಾಂಕದ ಹಿರಿತನದ ಮೇರೆಗೆ ಪದೋನ್ನತಿಯನ್ನು ನೀಡಲಾಗಿತ್ತು. ಆದೇ ಈಗ ಜೆಇ ವರ್ಗಾವಣೆಯಲ್ಲಿ ಮತ್ತೊಂದು ಕರ್ಮಕಾಂಡವೇ ನಡೆದಿದೆ. 226 ಜೆಇಗಳನ್ನು ವರ್ಗಾವಣೆಗೆ ತೋರಿಸಿ, ಅವರೊಟ್ಟಿಗೆ ಅವರನ್ನು ವರ್ಗಾವಣೆ ಮಾಡಿದಂತ ಸ್ಥಳದಲ್ಲಿದ್ದಂತ ಜೆಇಗಳನ್ನು ಮಗದೊಂದು ಸ್ಥಳಕ್ಕೆ ಆಯಾ ಎಸ್ಕಾಂ ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲಾಗಿದೆ.
ಅಂದಹಾಗೇ ಈ ಹಿಂದೆಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಕೆಪಿಟಿಸಿಎಲ್ ವರ್ಗಾವಣೆ ಮಾಡಿದ್ದೆಲ್ಲ ಹಿರಿಯ ಅಧಿಕಾರಿಗಳನ್ನು. ಗ್ರೂಪ್-ಸಿ, ಡಿ ವೃಂದದ ಅಧಿಕಾರಿಗಳನ್ನು ಕಾರ್ಪೊರೇಟ್ ಕಚೇರಿಯಿಂದ ವರ್ಗಾವಣೆಗೊಳಿಸಿದ್ದು ಕಡಿಮೆ. ಈ ಪ್ರವೃತ್ತಿ ಕಳೆದ ಎರಡು ವರ್ಷಗಳಿಂದ ಶುರುವಾಗಿದೆ. ಕೇಂದ್ರ ಕಚೇರಿಯಿಂದಲೇ ವರ್ಗಾವಣೆ ಆದೇಶ ಹೊರ ಬೀಳುತ್ತಿರುವುದರಿಂದ ನೌಕರರು ಹೀಗೆ ಕರ್ಮಕಾಂಡವಾದಾಗ ಕೇಂದ್ರ ಕಚೇರಿಗೆ ಕೆಲಸ ಬಿಟ್ಟು ಅಲೆದಾಡುವಂತ ಪರಿಸ್ಥಿತಿಯನ್ನು ಇಲಾಖೆಯೇ ತಂದಿಟ್ಟಿದೆ.
ಇನ್ನೂ ಸರ್ಕಾರದ ಆದೇಶ ಅನ್ವಯ ವರ್ಗಾವಣೆ ಮಾಡಲಾಗುತ್ತಿತ್ತು. ಆ ವರ್ಗಾವಣೆ ಆದೇಶದಲ್ಲಿ ಹಿಂದಿನ ದಿನಾಂಕಗಳನ್ನು ನಮೂದು ಮಾಡಲಾಗುತ್ತದೆ. ಷರತ್ತುಗಳನ್ನು ವಿಧಿ, ಷರತ್ತುಗಳನ್ನೇ ಅಧಿಕಾರಿಗಳು ಮೀರುತ್ತಿರಲಿಲ್ಲ. ಈಗ ಮುಖ್ಯ ಇಂಜಿನೀಯರ್, ಅಧೀಕ್ಷಕ ಇಂಜಿನೀಯರ್, ಕಾರ್ಯ ನಿರ್ವಾಹಕ ಇಂಜಿನಿಯರ್ ಮಾಡಬೇಕಾದಂತ ವರ್ಗಾವಣೆಯನ್ನು, ಕೇಂದ್ರ ಕಚೇರಿಯ ಅಧಿಕಾರಿಗಳೇ ಮಾಡುತ್ತಿದ್ದಾರೆ. ಇದು ಕೆಪಿಸಿಎಲ್ ನ ಮತ್ತೊಂದು ವರ್ಗಾವಣೆ ದಂಧೆಯಾಗಿದೆ.
ಲೈನ್ ಮ್ಯಾನ್ ಎಲ್ಲಿ ಕೆಲಸ ಮಾಡಬೇಕು. ಜೆಇ ಎಲ್ಲಿ ಕೆಲಸ ಮಾಡಬೇಕು ಅನ್ನೋದು ಆಯಾ ವೃತ್ತ ವ್ಯಾಪ್ತಿಯ ಎಸ್ಇಗಳಿಗೆ ತಿಳಿದಿರುತ್ತದೆ. ಅದರ ಹೊರತಾಗಿ ಕೇಂದ್ರ ಕಚೇರಿಯ ಕಾರ್ಪೋರೇಟ್ ಆಫೀಸಲ್ಲಿ ಹೇಗೆ ಗೊತ್ತಾಗುತ್ತದೆ ಎಂಬುದು ನೌಕರರ ಪ್ರಶ್ನೆ.
ಒಟ್ಟಾರೆಯಾಗಿ 226 ಜೆಇಗಳ ವರ್ಗಾವಣೆಯಲ್ಲಿ ನಿಯಮ ರೂಪಿಸಿದಂತ ಅಧಿಕಾರಿಗಳೇ, ನಿಯಮ ಮೀರಿ ವರ್ಗಾವಣೆ ಮಾಡಿದ್ದಾರೆ. ನಿಯಮಗಳನ್ನು ಪಾಲಿಸಬೇಕಿದ್ದ ನಿಗಮದಿಂದಲೇ ನಿಯಮ ಬಾಹಿರ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಅನೇಕ ಜೆಇಗಳು ಕಾನೂನು ಹೋರಾಟಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿಯೂ ತಿಳಿದು ಬಂದಿದೆ.
ಕೆಪಿಟಿಸಿಎಲ್ ಜೆಇ ವರ್ಗಾವಣೆ ದಂಧೆಯ ಬಗ್ಗೆ ಉದಾಹರಣೆ ಸಹಿತ ವಿವರಣೆ
ದಿನಾಂಕ 31-07-2024ರಂದು ಕೆಪಿಟಿಸಿಎಲ್ ರಮೇಶ್(ಹೆಸರು ಉದಾಹರಣೆಗೆ ನಮೂದು) ಎಂಬುವರನ್ನು 66/11 ಕೆವಿಯ ಅವರು ಕಾರ್ಯ ನಿರ್ವಹಿಸುತ್ತಿದ್ದಂತ ಸ್ಥಳದಿಂದ ಬೆಸ್ಕಾಂ ವ್ಯಾಪ್ತಿಯ 66/11 ಕೆವಿಯ ಉಪ ಕೇಂದ್ರ, ಬನ್ನೇರುಘಟ್ಟಕ್ಕೆ ವರ್ಗಾವಣೆಯ ಸ್ಥಳ ಕೋರಿದ್ದಾರೆ ಎಂದು ತಿಳಿಸಿದ್ದಾರೆ. ಆದರೇ ದಿನಾಂಕ 31-07-2024ರಂದೇ ಬೆಸ್ಕಾಂ ಹೆಚ್.ಆರ್ ಅವರು ರಮೇಶ್ ಅವರನ್ನು ಬನ್ನೇರುಘಟ್ಟಕ್ಕೆ ವರ್ಗಾವಣೆಗೆ ಸ್ಥಳ ಕೋರಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ದಿನಾಂಕ 14-07-2024ರಂದು ಕೆಪಿಟಿಸಿಎಲ್ ಮತ್ತೊಂದು ಸ್ಪಷ್ಟೀಕರಣ ಆದೇಶದಲ್ಲಿ 226 ಜೆಇ ವರ್ಗಾವಣೆಯಲ್ಲಿ ಯಾವುದೇ ಎಡವಟ್ಟು, ಲೋಪ ಆಗಿಲ್ಲ. 7 ಜೆಇ ವರ್ಗಾವಣೆಯನ್ನು ಒಂದೇ ಸ್ಥಳಕ್ಕೆ ಮಾಡಿಲ್ಲ. ಬದಲಾಗಿ ಅವರು ವರ್ಗಾವಣೆಗೆ ಸ್ಥಳವನ್ನು ಕೋರಿದ್ದಾರೆ. ಅದು ವರ್ಗಾವಣೆಗೆ ಕೋರಿರುವ ಸ್ಥಳವಷ್ಟೇ ಅಂತ ಸ್ಪಷ್ಟೀಕರಿಸಲಾಗಿದೆ. ಆದರೇ ಎಸ್ಕಾಂ ವ್ಯಾಪ್ತಿಯ ಆಯಾ ಅಧಿಕಾರಿಗಳು ಮಾತ್ರ ವರ್ಗಾವಣೆ ಕೋರಿದ ಸ್ಛಳಕ್ಕೆ, ಅಲ್ಲಿರುವ ಜೆಇ ವರ್ಗಾವಣೆಗೆ ಅರ್ಜಿ ಸಲ್ಲಿಸದೇ ಇದ್ದರೂ, 4 ವರ್ಷ ಪೂರ್ಣಗೊಳಿಸದೇ ಇದ್ದರೂ, ಆಡಳಿತಾತ್ಮಕ ದೃಷ್ಠಿಯ ಕಾರಣದಿಂದ ಎಂಬುದಾಗಿ ಹೇಳಿ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿದೆ.
ವರ್ಗಾವಣೆ ದಂಧೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಭಾಗಿ?
ಕೆಪಿಟಿಸಿಎಲ್ ಜೆಇ ವರ್ಗಾವಣೆ ಬಳಿಕ, ಎಸ್ಕಾಂಗಳು ಹೊರಡಿಸಿರುವಂತ ವರ್ಗಾವಣೆಯ ಚಾಲನಾ ಆದೇಶದಲ್ಲಿ ನೋಡಿದ್ರೇ, ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಎನ್ನುವಂತೆ ಎಸ್ಕಾಂಗಳು ಹೊರಡಿಸಿರುವಂತ ವರ್ಗಾವಣೆ ಕೋರಿರುವ ಸ್ಥಳಕ್ಕೆ ವರ್ಗಾವಣೆ ಮಾಡಿರುವಂತ ಆದೇಶ ಪ್ರತಿಯಲ್ಲೇ ಇಂಧನ ಸಚಿವರ ಟಿಪ್ಪಣಿಯ ಸಂಖ್ಯೆಯಂತೆ ವರ್ಗಾವಣೆ ಮಾಡಿರುವ ಉಲ್ಲೇಖವನ್ನು ಸಂಖ್ಯೆಯನ್ನು ನಮೂದು ಮಾಡಲಾಗಿದೆ. ಇಂಧನ ಸಚಿವರ ಟಿಪ್ಪಣಿಯ ಮೇಲೆ ಇಂಧನ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿಯವರು ಕಿರಿಯ ಇಂಜಿನಿಯರ್ ಕೋರಿರುವಂತ ಸ್ಥಳಗಳಿಗೆ ವರ್ಗಾವಣೆ ಮಾಡವಂತೆ ಸೂಚಿಸಿದ್ದಾರೆ. ಅದರಂತೆ ವರ್ಗಾವಣೆಯ ಆದೇಶವನ್ನು ಹೊರಡಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
GOOD NEWS : 545 ‘PSI’ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ ಪತ್ರ ವಿತರಣೆ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
ಸ್ವಾತಂತ್ರ್ಯ ದಿನಾಚರಣೆಯಂದು ಮಹಿಳಾ ಉದ್ಯೋಗಿಗಳಿಗೆ 1 ದಿನ ಋತುಸ್ರಾವ ರಜೆ ಘೋಷಿಸಿದ ಒಡಿಶಾ
2036ರ ಒಲಿಂಪಿಕ್ಸ್‌ಗೆ ಭಾರತ ಸಿದ್ಧತೆ: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷಣೆ