ಬೆಂಗಳೂರು : ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಹೇಳಿಕೆ ಕೊಡುವ ನಾಯಕರ ವಿರುದ್ಧ 41A ಪ್ರಕಾರ ವಿಚಾರಣೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ .ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿರುದ್ದ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಎಸ್ ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇಂಟರ್ ಪೋಲ್ ನವರು ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ. ಸಿಬಿಐ ಅಧಿಕಾರಿಗಳ ಮೂಲಕ ನಮಗೆ ಗೊತ್ತಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಎಸ್ ಐಟಿ ತನಿಕೆ ಮಾಡುತ್ತಿದೆ. ಪ್ರಜ್ವಲ್ ಪ್ರಕರಣದ ಬಗ್ಗೆ ಯಾರ್ಯಾರೋ ಏನೇನೋ ಮಾತನಾಡುತ್ತಿದ್ದಾರೆ. ಪ್ರತಿಯೊಂದು ಸಾರ್ವಜನಿಕ ಹೇಳಿಕೆಗೂ ಉತ್ತರ ಕೊಡಲು ಆಗಲ್ಲ. ತನಿಖೆ ಆಗುವವರೆಗೂ ಯಾವುದೇ ಮಾಹಿತಿಯನ್ನು ಹೇಳಲು ಆಗಲ್ಲ. ನಾಯಕರು ಹೇಳಿಕೆ ಕೊಟ್ಟರೂ ಎಚ್ಚರಿಕೆಯಿಂದ ಕೊಡಬೇಕು. ಈ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವವರ ವಿರುದ್ಧವೂ ಕ್ರಮ ಆಗುತ್ತದೆ. ಯಾವುದೇ ರೀತಿಯ ಹೇಳಿಕೆ ಕೊಟ್ಟರೆ ೪೧ ಎ ಪ್ರಕಾರ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.