ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಎಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದೇನೆ. ಒಂದು ವೇಳೆ ಅಪರಾಧ ಚಟುವಟಿಕೆಯಲ್ಲಿ ಪೊಲೀಸರು ಭಾಗಿಯಾದರೆ ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸುವುದಾಗಿ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ, ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ವಂಶಿಕೃಷ್ಣ ಅವರೊಂದಿಗೆ ಪ್ರಕರಣದ ತನಿಖೆಯ ಕುರಿತು ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಹಿಡಿದಿದ್ದಾರೆ. ಇನ್ನು ಕೆಲವರು ಸಿಗಬೇಕಿದೆ. ಪ್ರಕರಣದಲ್ಲಿ ಇಲಾಖೆಯ ಒಬ್ಬ ವ್ಯಕ್ತಿ ಭಾಗಿಯಾಗಿದ್ದ. ಮೂರು ವಿಶೇಷ ತಂಡಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪ್ರಕರಣದ ಜವಾಬ್ದಾರಿ ವಹಿಸಿಕೊಂಡ ಇಬ್ಬರು ಜಂಟಿ ಪೊಲೀಸ್ ಆಯುಕ್ತರಿಗೆ, ಇಬ್ಬರು ಡಿಸಿಪಿಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಬೆಂಗಳೂರಿನಲ್ಲಿ ಇಂಥ ಘಟನೆಯಾದಾಗ ಯಾರು ಕೂಡ ನಂಬಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಕೆಟ್ಟ ಹೆಸರು ಬರುವ ರೀತಿ ಕೃತ್ಯ ಅಗಿತ್ತು. ಈ ಘಟನೆ ಪೊಲೀಸ್ ಇಲಾಖೆಗೂ ಸವಾಲಾಗಿತ್ತು. 6.29 ಕೋಟಿ ರೂ. ಹಣ ಸಿಕ್ಕಿದೆ. ಬಾಕಿ ಹಣ ಪತ್ತೆಹಚ್ಚುತ್ತಾರೆ.
ಈ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ತಾಂತ್ರಿಕವಾಗಿ, ಬಹಳ ಎಚ್ಚರಿಕೆಯಿಂದ ಬುದ್ಧಿ ಉಪಯೋಗಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲಸ ಮಾಡಿ ಪ್ರಕರಣವನ್ನು ಭೇದಿಸಿದ್ದಾರೆ. ದರೋಡೆ ಮಾಡಿದವರು ಬಹಳ ಎಚ್ಚರಿಕೆಯಿಂದ ಕೃತ್ಯ ಎಸಗಿದ್ದರು. ಅದೆಲ್ಲವೂ ಕೂಡ ಈಗ ತನಿಖೆಯಿಂದ ಗೊತ್ತಾಗುತ್ತಿದೆ.
ತಾವು ಕೂಡ ಬಹಳ ಇಲಾಖೆಯನ್ನು ಎಚ್ಚರಿಸುವ ರೀತಿಯಲ್ಲಿ ಸುದ್ದಿಗಳನ್ನು ಮಾಡಿದ್ದಿರಿ. ಘಟನೆಗೆ ಸಂಬಂಧಿಸಿದಂತೆ ಇನ್ನುಮುಂದೆ ಇಲಾಖೆಯಲ್ಲಿ ಎಚ್ಚರಿಕೆಯಿಂದ ಇರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿಯ ಕೃತ್ಯದಲ್ಲಿ ಯಾರಾದರು ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆಯ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ನಿನ್ನೆ ಕೋರಮಂಗಲದಲ್ಲಿಯೂ ಘಟನೆ ನಡೆದಿದೆ. ಅರೆಸ್ಟ್ ಮಾಡಿದ್ದಾರೆ ಎಂದು ತಿಳಿಸಿದರು.
ಏಜೆನ್ಸಿಯವರು ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಿಎಂ ಅವರು ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾತನಾಡಿ.., ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಸಮಸ್ಯೆಯೇ ಇಲ್ಲ. ಯಾರ ಮನೆಗೆ ಹೋದರೆ ಸುದ್ದಿ ಮಾಡ್ತೀರ. ಕೆಲಸ ಇರುತ್ತೆ ಹೋಗಿರುತ್ತಾರೆ. ಸತೀಶ್ ಜಾರಕಿಹೊಳಿ ಮನೇಲಿ ನಾವು ಐದು ಜನ ಸೇರಿ ಊಟ ಮಾಡಿದ್ದೆವು. ಅದು ತಪ್ಪಾ? ಭೇಟಿ ವೇಳೆ ರಾಜಕೀಯನೂ ಮಾತಾಡಿರುತ್ತೇವೆ. ಸರ್ಕಾರದಲ್ಲಿ ಮಂತ್ರಿಗಳಿರುವುದರಿಂದ ಇಲಾಖೆಯಲ್ಲಿ ಏನೆಲ್ಲ ಕೆಲಸಗಳಾಗಬೇಕು ಅದರ ಬಗ್ಗೆನು ಚರ್ಚೆ ಮಾಡ್ತಿವಿ. ಭೇಟಿಯಾದಾಗ ಏನು ಮಾತಾಡಬಾರದೆ? ಯಾಕೆ ನಿಮಗೆ ಇಷ್ಟೊಂದು ಆಸಕ್ತಿ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಬಿಟ್ಟು ಏನು ತೀರ್ಮಾನಗಳಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್‌ನವರು ಇಲ್ಲಿವರೆಗೂ ಲೀಡರ್‌ಶಿಪ್ ಬದಲಾವಣೆ ಆಗುತ್ತೆ, ಸಂಪುಟ ಪುನರ್ ರಚನೆ ಆಗುತ್ತೆ ಅಂತ ಯಾರಾದರು ಹೇಳಿದ್ದಾರೆಯೇ ಎಂದರು.
ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎಐಸಿಸಿಯಿಂದ ವೀಕ್ಷಕರು ಬಂದಿದ್ದರು. ಸಿಎಲ್‌ಪಿ ಸಭೆಯಲ್ಲಿ ಅವರ ಮುಂದೆ ನಡೆದಿದೆ. ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಸಿಎಂ ಅಂತ ಹೇಳಿರಲಿಲ್ಲ. ಮಧ್ಯದಲ್ಲಿ ಬದಲಾಯಿಸುತ್ತಾರೆ ಎಂಬುದು ಹೈಕಮಾಂಡ್‌ಗೆ ಬಿಟ್ಟದ್ದು. ನಾವು ಬದಲಾವಣೆ ಮಾಡಲು ಆಗುತ್ತದೆಯೇ. ಆ ಸಂದರ್ಭ ಬಂದಾಗ ಹೈಕಮಾಂಡ್‌ನವರು ಮಾಡುತ್ತಾರೆ. ಹಿಂದೆ ಎಲ್ಲ ಮಾಡಿಲ್ಲವೇ? ಬಂಗಾರಪ್ಪ ಅವರನ್ನು ಬದಲಾಯಿಸಿ ವೀರಪ್ಪ ಮೋಯ್ಲಿ ಅವರನ್ನು ಮಾಡಿದ್ದರು. ಈಗ ಆ ಸಂದರ್ಭ ಬಂದಿದೆ ಅಂತ ನನಗೆ ಅನ್ನಿಸುತ್ತಿಲ್ಲ ಎಂದು ಹೇಳಿದರು.
ಯಾವಾಗ್ಲು ಸಿಎಂ ರೇಸ್‌ನಲ್ಲಿ ಇರ್ತೀನಿ
ನೀವು ಸಿಎಂ ರೇಸ್ ಅಲ್ಲಿ ಇದ್ದೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾವಾಗ್ಲು ರೇಸ್ ಅಲ್ಲಿ ಇರ್ತಿನಿ ಕಣ್ರಿ. 2013ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೆವು. ನಾನೊಬ್ಬನೇ ಸರ್ಕಾರ ಅಧಿಕಾರಕ್ಕೆ ತಂದಿದ್ದು ಅಂತ ಇಲ್ಲಿಯವರೆಗೂ ನಾನು ಎಲ್ಲೂ ಹೇಳಿಲ್ಲ. ಎಲ್ಲರು ಸೇರಿ ಕೆಲಸ ಮಾಡಿದ್ವಿ. ಜನರು ಓಟ್ ಹಾಕಿ ಪಕ್ಷವನ್ನು ಗೆಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಪರಾಭವಗೊಂಡೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದರು. ಆ ಕನಸು ಈಗ ಈಡೇರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಆ ಕನಸೇ ಬಿದ್ದಿಲ್ಲವಲ್ಲ ಎಂದು ಹೇಳಿದರು.
ದಲಿತ ನಾಯಕರು ಸಿಎಂ ಆಗಬೇಕು ಎಂದು ಬಹಳ ದಿನದಿಂದ ಕೇಳುತ್ತಿದ್ದಾರೆ. ನಾವು ಊಟಕ್ಕೆ ಸೇರಿದ ತಕ್ಷಣ ಆಗಿಬಿಡುತ್ತದೆಯೇ? ನಾವೆಲ್ಲ ಸಮಾನ ಮನಸ್ಕರಿದ್ದೇವೆ. ಒಳಮೀಸಲಾತಿ ಬಗ್ಗೆ ಹೋರಾಟ ಅಯ್ತು. ನಮ್ಮ ಸಮಸ್ಯೆಗಳ ಚರ್ಚೆ ಮಾಡಬಾರದೇ ಎಂದು ಅವರು ಮರುಪ್ರಶ್ನಿಸಿದರು.
ಸಿಎಂ ಬದಲಾವಣೆಯ ಕೂಗು ಬಂದರೆ ಪರಿಗಣಿಸುವಂತೆ ಹೇಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ.. ಆ ಸಂದರ್ಭ ಬರಲಿ. ಸಂದರ್ಭ ಇನ್ನು ಬಂದಿಲ್ಲ. ಎಐಸಿಸಿ ಅಧ್ಯಕ್ಷರನ್ನು ನಾನೇನು ಹೋಗಿ ಭೇಟಿ ಮಾಡುವುದಿಲ್ಲ. ಬೇಕಾದಾಗ ನಾನು ಹೋಗಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಪಕ್ಷದಲ್ಲಿ ಅಂತ ಬೆಳವಣಿಗೆಗಳಿದ್ದರೆ ಚರ್ಚೆ ಮಾಡಿ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕರ್ನಾಟಕದವರೇ ಎಐಸಿಸಿ ಅಧ್ಯಕ್ಷರಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಅವರಿಗೆ ಗೊತ್ತಿರುವಷ್ಟು ಯಾರಿಗೂ ಗೊತ್ತಿಲ್ಲ. ಐವತ್ತು ವರ್ಷ ಸುಧೀರ್ಘ ರಾಜಕಾರಣ ಮಾಡಿರುವವರು ಎಐಸಿಸಿ ಅಧ್ಯಕ್ಷರಿದ್ದಾರೆ. ತೀರ್ಮಾನಗಳನ್ನು ಮಾಡುತ್ತಾರೆ. ಪಕ್ಷದಲ್ಲಿ ಅಂತದ್ದೇನಾದರು ಗೊಂದಲಗಳಿದ್ದರೆ ರಾಹುಲ್ ಗಾಂಧಿ ಅವರು ಬಂದ ಬಳಿಕ ತೀರ್ಮಾನ ಮಾಡುತ್ತಾರೆ ಎಂದು ಹೆಳಿದರು.
ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರನ್ನು ನಾವೇನು ಸರ್ಟಿಫಿಕೇಟ್ ಕೇಳುತ್ತಿಲ್ಲ. ಅವರ ಮನೆ ಹೇಗಿದೆ ಅಂತ ನೋಡಿಕೊಳ್ಳಲಿ. ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ವಿಜಯೇಂದ್ರ ಅವರು ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆಯ ಅಗತ್ಯ ಇದೆಯೇ? ಮೊದಲು ಅವರ ಮನೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಹೇಳಿ. ಆ ಮೇಲೆ ನಮ್ಮನ್ನು ಕೇಳಲಿ ಎಂದು ತಿರುಗೇಟು ನೀಡಿದರು.
ನಾರಾಯಣಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಈ ಹಂತ ಅನುಸರಿಸಿ ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ನಂಬರ್ ಕುಳಿತಲ್ಲೇ ಲಿಂಕ್ ಮಾಡಿ | Link PAN With Bank Account








