ಶಿವಮೊಗ್ಗ : ಪೊಲೀಸರು ಹೆಣ್ಣುಮಕ್ಕಳೊಂದಿಗೆ ಸೂಕ್ಮತೆ ಮತ್ತು ಸಮಾಧಾನದಿಂದ ನಡೆದುಕೊಳ್ಳಬೇಕು. ಹಾಗೂ ಅವರಿಗೆ ಆಪ್ತಸಮಾಲೋಚನಾ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮ ಚೌದರಿ ಸೂಚಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013(POSH) ಅನುಷ್ಟಾನ, ಮಹಿಳಾ ಸ್ಪಂದನ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸರು ಮಹಿಳೆಯರು, ಮಕ್ಕಳಸ್ನೇಹಿ ಮತ್ತು ಜನಸ್ನೇಹಿಯಾಗಿರಬೇಕು, ಸ್ಥಳೀಯ ಠಾಣೆಗಳಲ್ಲಿ ಹೆಣ್ಣು ಮಕ್ಕಳೊಂದಿಗೆ ಸಮಾಧಾನ, ಸೂಕ್ಷ್ಮತೆಯಿಂದ ನಡೆದುಕೊಳ್ಳಬೇಕು. ಪೊಲೀಸ್ ಸಿಬ್ಬಂದಿಗಳಿಗೆ ಆಪ್ತಸಮಾಲೋಚನಾ ತರಬೇತಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ತರಬೇತಿ ನೀಡಿದ ಬಗ್ಗೆ ಆಯೋಗಕ್ಕೆ ವರದಿ ನೀಡಬೇಕು ಎಂದ ಅವರು ಹೆಣ್ಣು ಮಕ್ಕಳು ಸಹ ಪೊಲೀಸ್ ಠಾಣೆಗಳ ಬಗ್ಗೆ ಭಯ ತೊರೆದು ಉತ್ತಮ ಸಂಬAಧ ಹೊಂದಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಜಿಲ್ಲೆಯಲ್ಲಿ 3612 ಸರ್ಕಾರಿ ಕಚೇರಿಗಳಿದ್ದು 10 ಜನಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವ 1050 ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲಾಗಿದೆ ಎಂದರು.
ಅಧ್ಯಕ್ಷರು, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳು, ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಯಾವುದೇ ರೀತಿಯಲ್ಲಿ ದೈಹಿಕ, ಮಾನಸಿಕ ದೌರ್ಜನ್ಯ, ಕಿರುಕುಳ ನೀಡುತ್ತಿದ್ದರೆ ಯಾವುದೇ ಭಯ-ಆತಂಕಕ್ಕೆ ಒಳಗಾಗದೇ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕೆಂದು ತಿಳಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಓಪಿಡಿ, ಔಷಧಿ ಕೌಂಟರ್‌ಗಳ ಬಳಿ ಗರ್ಭಿಣಿಯರು, ಮಕ್ಕಳು ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಲ್ಲುವ ಸ್ಥಿತಿ ಇದ್ದು, ಹೆಚ್ಚುವರಿ ಕೌಂಟರ್‌ನ್ನು ತೆರೆಯಲು ಕೂಡಲೇ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಆಸ್ಪತ್ರೆಗಳು, ಪಿಹೆಚ್‌ಸಿ, ಸಿಹೆಚ್‌ಸಿ ಗಳ ಎಲ್ಲ ಹೊರಗುತ್ತಿಗೆ ನೌಕರರಿಗೆ ನಿಯಮಿತವಾಗಿ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ನೀಡಿರುವ ವರದಿ ನೀಡುವಂತೆ ತಿಳಿಸಿದರು.
ಶೌಚಾಲಯ ನಿರ್ಮಿಸಿ : ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ ವಾರ್ಡಿನಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲದೇ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಾರ್ಡಿನಿಂದ ಹೊರಗಡೆ ಹೋಗಿ ಅಲ್ಲಿರುವ ಶೌಚಾಲಯ ಬಳಕೆ ಮಾಡಿ ಮತ್ತೆ ವಾರ್ಡಿಗೆ ಬರಬೇಕು. ಆದ್ದರಿಂದ ಶೀಘ್ರದಲ್ಲೇ ವಾರ್ಡಿನಲ್ಲಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಕೂಡಲೇ ಲೈಟ್ ಹಾಕಿಸಿ : ನೆಹರು ಸ್ಟೇಡಿಯಂ ನ ಒಳಗೆ ವ್ಯವಸ್ಥಿತವಾದ ಬೆಳಕು ಇಲ್ಲ. ಸಂಜೆ ಆಗುತ್ತಿದ್ದ ಹಾಗೆ ಸಂಪೂರ್ಣ ಕತ್ತಲು ಆವರಿಸುತ್ತಿದೆ. ಕ್ರೀಡಾ ವಸತಿ ನಿಲಯದ ಹೆಣ್ಣುಮಕ್ಕಳು ಕತ್ತಲಲ್ಲೇ ಅಭ್ಯಾಸ ಮಾಡುತ್ತಿದ್ದು, ಈ ಕೂಡಲೇ ಲೈಟ್‌ಗಳನ್ನು ಹಾಕಿಸಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಿಸಿ ಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಕುಡಿಯುವ ನೀರು, ಶೌಚಾಲಯ, ಲೈಟ್‌ಗಳು, ಕ್ರೀಡಾ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಬೋರ್ಡ್, ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡುವುದು ಸೇರಿದಂತೆ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ತಂದೆ ರೀತಿ ಜವಾಬ್ದಾರಿ ವಹಿಸಿ : ಸಕ್ರೆಬೈಲು ಬಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಕಲ್ಯಾಣ ಇಲಾಖೆಗಳ ಮುಖ್ಯಸ್ಥರು ಪ್ರತಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತನಾಡಬೇಕು. ಆಗ ಸಮಸ್ಯೆ ತಿಳಿಯುತ್ತದೆ. ನಿಯೋಜಿತ ಅಧಿಕಾರಿಗಳು ತಂದೆ ರೀತಿ ಹಾಸ್ಟೆಲ್‌ಗಳ ಜವಾಬ್ದಾರಿ ವಹಿಸಬೇಕು. ವಾರ್ಡನ್‌ಗಳು ಮಕ್ಕಳೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಹಾಸ್ಟೆಲ್‌ನಲ್ಲಿನ ಕಂಪ್ಯೂಟರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಹಾಗೂ ಉತ್ತಮ ಆಹಾರ ನೀಡಬೇಕು. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಹೆಸರನ್ನು ಹಾಸ್ಟೆಲ್ ಫಲಕದಲ್ಲಿ ಬರೆಸುವಂತೆ ಸೂಚನೆ ನೀಡಿದ ಅವರು ಏನಾದರೂ ಸಮಸ್ಯೆಗಳಿದ್ದಲ್ಲಿ ವಿದ್ಯಾರ್ಥಿಗಳು ಸಂಬಂಧಿಸಿದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಬಹುದು ಎಂದರು.
ಬಾಣಂತಿ ಸಾವು ತಗ್ಗಿಸಿ : ಡಿಹೆಚ್‌ಓ ಡಾ. ನಟರಾಜ್ ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಇಲ್ಲಿಯವರೆಗೆ 12 ಬಾಣಂತಿಯರ ಸಾವು ಸಂಭವಿಸಿದ್ದು, 9 ನಮ್ಮ ಜಿಲ್ಲೆ ಮತ್ತು 03 ಹೊರ ಜಿಲ್ಲೆಯ ಪ್ರಕರಣಗಳಾಗಿವೆ. ಬಿಪಿ, ಹಿಮೊಗ್ಲೋಬಿನ್ ಕೊರತೆ, ರಕ್ತಸ್ರಾವ ಸೇರಿದಂತೆ ಇತರೆ ಸಂಕೀರ್ಣತೆಗಳಿಂದ ಸಾವು ಸಂಭವಿಸುತ್ತಿದೆ ಎಂದರು.
ಅಧ್ಯಕ್ಷರು, ಬಾಣಂತಿ ಸಾವು ನಿಯಂತ್ರಣ ಮಾಡಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಸೂಕ್ತ ಔಷಧೋಪಚಾರ ಮತ್ತು ಚಿಕಿತ್ಸೆ ನೀಡಬೇಕು. ಶಿವಮೊಗ್ಗದಲ್ಲಿ ಬಾಣಂತಿ ಸಾವು ಪ್ರಕ್ರರಣಗಳು ಪೂರ್ಣವಾಗಿ ತಗ್ಗಬೇಕು. ನರ್ಸ್ಗಳಿಗೆ ಬಾಣಂತಿ ರಕ್ತಸ್ರಾವ ತಗ್ಗಿಸುವ ಕುರಿತಾದ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ನಾಪತ್ತೆಯಾಗಿ ಸುಳಿವು ಪತ್ತೆಯಾಗದ ಮಹಿಳೆಯರ ವಿವರವನ್ನು ಆಯೋಗಕ್ಕೆ ನೀಡಬೇಕು. ಸಮರ್ಥ ಸೇತು ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಕೈಗೊಳ್ಳಬೇಕು ಎಂದು ಎಸ್‌ಪಿ ಯವರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಓಸಿ ಮತ್ತು ಡ್ರಗ್ಸ್ ದಂಧೆ ಹಾಗೂ ಗ್ರಾಮೀಣ ಭಾಗದಲ್ಲಿ ಹೆಂಡ ಮಾರಾಟ ಹೆಚ್ಚಿದೆ ಎಂಬ ಮಾಹಿತಿ ದೊರೆತಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು.
ಎಸ್‌ಪಿ ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2023 ರಲ್ಲಿ 454 ಮಹಿಳೆಯರ ನಾಪತ್ತೆ ಪ್ರಕರಣ ದಾಖಲಾಗಿದ್ದು 450 ಮಹಿಳೆಯರನ್ನು ಪತ್ತೆ ಹಚ್ಚಿದ್ದು 8 ಮಹಿಳೆಯರು ಪತ್ತೆಯಾಗಿಲ್ಲ, 2024 ರಲ್ಲಿ 506 ನಾಪತ್ತೆ ಪ್ರಕರಣದಲ್ಲಿ 497 ಪತ್ತೆ ಹಚ್ಚಿದ್ದು, 11 ಪತ್ತೆಯಾಗಿಲ್ಲ. 2025 ರಲ್ಲಿ 395 ನಾಪತ್ತೆ ಪ್ರಕರಣದಲ್ಲಿ 374 ಪತ್ತೆ ಹಚ್ಚಿದ್ದು, 27 ಪ್ರಕರಣ ಪತ್ತೆಯಾಗಿಲ್ಲವೆಂದು ವರದಿ ನೀಡಿದರು.
ನಗರದ ಶಾಲಾ-ಕಾಲೇಜು, ಸಾರ್ಜಜನಿಕ ಸ್ಥಳಗಳಲ್ಲಿ ಚೆನ್ನಮ್ಮ ಪಡೆ ಕಳೆದ ವರ್ಷದಿಂದ ಕೆಲಸ ಮಾಡುತ್ತಿದೆ. ರಸ್ತೆ ಸುರಕ್ಷತೆ, ಮಹಿಳೆಯರ ಸುರಕ್ಷತೆ, ಸೈಬರ್ ಕ್ರೈಂ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ಜಿ.ಪಂ. ಸಿಇಓ ಹೇಮಂತ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಶೇ 75.59 ಪ್ರಗತಿ ಸಾಧಿಸಲಾಗಿದೆ. ಶೇ .55.73 ಮಹಿಳೆಯರ ಭಾಗವಹಿಸುವಿಕೆ ಇದೆ ಎಂದರು.
ಕೋಟೆಗಂಗೂರು, ಹರಮಘಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಊರಿಗೆ ಬಸ್ ಇಲ್ಲದೇ ವಿದ್ಯಾಸಂಸ್ಥೆಗೆ ಬರುವುದು ಕಷ್ಟವಾಗುತ್ತಿದೆ ಎಂದು ದೂರಿತ್ತಿದ್ದು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.
ಕೂಡಿ ಬಾಳೋಣ ಕಾರ್ಯಕ್ರಮ ಮಾಡಿ : ರಾಷ್ಟ್ರೀಯ ಮಹಿಳಾ ಆಯೋಗದಡಿ ಕೈಗೊಳ್ಳಲಾಗಿರುವ ‘ಕೂಡಿ ಬಾಳೋಣ’ ಎಂಬ ವಿವಾಹ ಪೂರ್ವ ಆಪ್ತ ಸಮಾಲೋಚನೆಯಂತಹ ಚಟುವಟಿಕೆಯನ್ನು ಜಿಲ್ಲೆಯಲ್ಲಿಯೂ ಕೈಗೊಳ್ಳಬೇಕು. ಇಲ್ಲಿ ವಿವಾಹ ಪೂರ್ವದಲ್ಲಿ ಗಂಡು ಮತ್ತು ಹೆಣ್ಣಿನ ಎರಡೂ ಕುಟುಂಬಗಳು ಒಬ್ಬರನ್ನೊಬ್ಬರು ಅರಿಯುವ ಅವಕಾಶ ಲಭಿಸುವುದರಿಂದ ವಿಚ್ಚೇದನದಂತಹ ಪ್ರಕರಣಗಳು ಕಡಿಮೆಯಾಗಲಿವೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಲಭ್ಯವಿರುವ ಉಚಿತ ಸೇವೆ, ಸೌಲಭ್ಯಗಳ ಕುರಿತು ತಿಳಿಸಿ, ಪ್ರಾಧಿಕಾರದ ಸೇವೆಯಿಂದಾಗಿ ಮಹಿಳಾ ಮಧ್ಯಸ್ಥಿಕೆ ಸಂಖ್ಯೆ ಹೆಚ್ಚಿದೆ, ಲೋಕ ಅದಾಲತ್ ನಿಂದಾಗಿ ಸಾವಿರಾರು ಪ್ರಕರಣಗಳು ರಾಜೀ ಸಂಧಾನದಿಂದ ಇತ್ಯರ್ಥವಾಗುತ್ತಿವೆ. ಮಹಿಳೆಯರು ಕಾನೂನಿಗೆ ಸಂಬಂಧಿಸಿದ ಏನಾದರೂ ಸಮಸ್ಯೆಗಳು ಇದ್ದಲ್ಲಿ ನಾಲ್ಸಾ ಸಹಾಯವಾಣಿ ಸಂಖ್ಯೆ 15100 ಕರೆ ಮಾಡಿ ಉಚಿತವಾಗಿ ಕಾನೂನಿನ ನೆರವು ಪಡೆಯಬಹುದು ಎಂದರು.
ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯೋರ್ವರು ಲಿಮಿಟೇಷನ್ ಅವಧಿ ಮೀರಿ ನೀಡಿದ್ದ ಅರ್ಜಿಯನ್ನು ಪ್ರಾಧಿಕಾರ ಪುರಸ್ಕರಿಸಿ ಅವರಿಗೆ ಪರಿಹಾರ ನೀಡಿದ ಬಗೆಯನ್ನು ವಿವರಿಸಿದರು.
ಅಧ್ಯಕ್ಷರು ಮಹಿಳೆಯರಿಗೆ ಕಾನೂನಿನ ಅರಿವು ಮತ್ತು ನೆರವು ನೀಡುವುದು ನಿಜವಾದ ಮಹಿಳಾ ಸಬಲೀಕರಣ. ಕಾನೂನು ಸೇವಾ ಪ್ರಾಧಿಕಾರ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ಉತ್ತಮ ಕಾರ್ಯವೆಸಗುತ್ತಿದೆ ಎಂದು ಶ್ಲಾಘಿಸಿದರು.
ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ಸಾಯುವವರೆಗೆ ಚಿಕಿತ್ಸೆ ಪಡೆಯುವ ಅವಶ್ಯಕತೆ ಇರುವುದರಿಂದ ಅವರಿಗೆ ಸಕ್ಷಮ ಪ್ರಾಧಿಕಾರವು ಸೂಕ್ತ ಪರಿಹಾರ ,ಸೌಲಭ್ಯ ನೀಡಬೇಕೆಂದರು.
54 ಲಕ್ಷ ಸೈಬರ್ ಕ್ರೈಮ್ ಮೂಲಕ ಹಣ ಕಳೆದುಕೊಂಡ ಸಂತ್ರಸ್ತೆ, ಮಹಿಳೆಯೋರ್ವರು ಮನೆಗೆ ಹೋಗಲು ರಸ್ತೆ ಇಲ್ಲವೆಂದು, ಆಸಿಡ್ ಸಂತ್ರಸ್ತರು ಪರಿಹಾರ ಕೋರಿ, ವಿಕಲಚೇತನರು ಮನೆ, ಕೆಲಸ ಬೇಕೆಂದು, ಮಹಿಳಾ ಪೇದೆ ಪತಿಯಿಂದ ದೌರ್ಜನ್ಯ ಹಾಗೂ ಅನೇಕ ಮಹಿಳಾ ದೌರ್ಜನ್ಯದ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯ, ಖಾಸಗಿ ವಿಷಯಗಳು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ 100 ಕ್ಕೂ ಹೆಚ್ಚು ಅರ್ಜಿದಾರರು ಅರ್ಜಿ ನೀಡಿದ್ದು, ಆಯುಕ್ತರು ಹಲವಾರು ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಸೂಕ್ತ ಪರಿಹಾರ ಮತ್ತು ನಿರ್ದೇಶನ ನೀಡಲು ಸೂಚಿಸಿದರು.
ಜಿಲ್ಲಾ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಹೇಮಂತ್ ಎನ್, ಎಸ್ ಪಿ ಜಿ.ಕೆ. ಮಿಥುನ್ ಕುಮಾರ್ ಹಾಜರಿದ್ದರು.








