ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ನಗರದಲ್ಲಿ ಶಾಂತಿಯುತ ಮತ್ತು ನಿರ್ಭೀತ ವಾತಾವರಣ ನಿರ್ಮಿಸಲು ಶ್ರಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರಿನಲ್ಲಿ ಅಪರಾಧಗಳು ಕಡಿಮೆಯಾಗಿವೆ, ಅಪರಾಧಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ, ಅದನ್ನು ಕಡಿಮೆ ಮಾಡಲು ಸಾಧ್ಯವಿದೆ, ತಡೆಗಟ್ಟಬಹುದಾದ ಅಪರಾಧಗಳಿಗೆ ಪೊಲೀಸರು ಆದ್ಯತೆ ನೀಡಬೇಕು ಎಂದು ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು.
ನಗರದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಪೊಲೀಸರಿಗೆ ಸೂಚನೆ ನೀಡಿದರು.
ಸಮಾಜದ ಹಿತದೃಷ್ಟಿಯಿಂದ ಡ್ರಗ್ಸ್ ಮಾಫಿಯಾ ತೊಲಗಿಸಲು ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಂಡು ಅನುಷ್ಠಾನಗೊಳಿಸಬೇಕು, ಒಂಟಿಯಾಗಿ ಬದುಕುವವರನ್ನು ಗುರುತಿಸಿ, ಅವರ ರಕ್ಷಣೆಗೆ ಆದ್ಯತೆ ನೀಡಬೇಕು, ಪೊಲೀಸ್ ಬೀಟ್ ವ್ಯವಸ್ಥೆಯನ್ನೂ ಬಲಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ 241 ಹೊಯ್ಸಳ ವಾಹನಗಳ ಗಸ್ತು ಪಡೆಯನ್ನು ಬಲಪಡಿಸಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಿಯಲ್ ಎಸ್ಟೇಟ್ ವಿಚಾರದಲ್ಲಿ ಭಾಗಿಯಾಗುವುದು ಸರಿಯಲ್ಲ.ಇದರಿಂದ ಜನರು ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೇಳಿದರು.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಸ್ತುತ ಸರ್ಕಾರವು ಎಂದಿಗೂ ಕೇಳುವುದಿಲ್ಲ ಎಂದು ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗೆ ತಿಳಿಸಿದರು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ “ಕಠಿಣ ಕ್ರಮ” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ, ನಗರದಲ್ಲಿ ರೌಡಿಸಂ ತೊಲಗಬೇಕು ಹಾಗೂ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.