ಬೆಂಗಳೂರು: ಪೊಲೀಸರು ವಾಟ್ಸ್ ಆಪ್ ಮೂಲಕ ನೋಟಿಸ್ ನೀಡುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
ತಮಿಳುನಾಡಿನ ಪವನ್ ಕುಮಾರ್ ಎಂಬುವರಿಗೆ ಬೆಂಗಳೂರಿನ ಆಡುಗೋಡಿ ಠಾಣೆಯ ಪೊಲೀಸರು ವಾಟ್ಸ್ ಆಪ್ ಮೂಲಕ ನೋಟಿಸ್ ಕಳುಹಿಸಿದ್ದರು. ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ವಾಟ್ಸ್ ಆಪ್ ಮೂಲಕ ನೋಟಿಸ್ ನೀಡುವಂತಿಲ್ಲ ಎಂಬುದಾಗಿ ಪ್ರಕರಣವೊಂದರಲ್ಲಿ ನೀಡಿದ್ದಂತ ತೀರ್ಪಿನ ಹಿನ್ನಲೆಯಲ್ಲಿ, ಈ ನೋಟಿಸ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರದಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಈ ಅಭ್ಯಾಸವು ಕಾನೂನಿನಲ್ಲಿ ಅನುಮತಿಸಲಾಗುವುದಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟರು. ಅಲ್ಲದೇ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ವಾಟ್ಸ್ ಅಪ್ ಮೂಲಕ ನೋಟಿಸ್ ನೀಡುವುದು ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದರು.
ಅರ್ಜಿದಾರರ ಪರವಾಗಿ ವಕೀಲ ಜ್ಞಾನೇಶ ಎನ್ ಐ ವಾದಿಸಿ, ಈ ನೋಟಿಸ್ ಕಾನೂನು ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಇದು ಅಮಾನ್ಯವಾಗಿದೆ ರದ್ದುಗೊಳಿಸುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ವೇಳೆ ಎಎಸ್ ಪಿಪಿ ರಶ್ಮಿ ಜಾಧವ್ ಅವರು, ಕಾನೂನು ಜಾರಿಯಲ್ಲಿ ದಕ್ಷತೆಗಾಗಿ ವಾಟ್ಸ್ ಆಪ್ ಸೇರಿದಂತೆ ಡಿಜಿಟ್ಲ ಸಂವಹನ ವಿಧಾನಗಳನ್ನು ಬಳಸಲಾಗುತ್ತಿದೆ ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.
ಈ ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ವಾಟ್ಸ್ ಆಪ್ ಮೀಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂಬುದಾಗಿ ಆದೇಶಿಸಿದೆ.
ಅಂದಹಾಗೇ ಆಡುಗೋಡಿ ಪೊಲೀಸರು ಪವನ್ ಕುಮಾರ್ ಗೆ ಬಿಎನ್ ಎಸ್ ಎಸ್ 2023ರ ಕಲಂ 35(3)ರ ಅಡಿಯಲ್ಲಿ ವಾಟ್ಸ್ ಆಪ್ ಮೂಲಕ ನೋಟಿಸ್ ನೀಡಲಾಗಿತ್ತು.