ಹರಿಹರ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರ ವಿರುದ್ಧ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ಎಫ್‌ಐಆರ್:
ಬಾಲಕನ ತಾಯಿ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ನಡೆದ ಸ್ಥಳ ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಬರುವುದರಿಂದ, ಅಲ್ಲಿ ಮೊದಲು ‘ಜೀರೋ ಎಫ್‌ಐಆರ್’ ದಾಖಲಿಸಿ ನಂತರ ಹರಿಹರಕ್ಕೆ ಪ್ರಕರಣವನ್ನು ವರ್ಗಾಯಿಸಲಾಯಿತು. ಮೇ 8ರಂದು ಹರಿಹರ ಪೊಲೀಸರು ಪೋಕ್ಸೋ ಕಾಯ್ದೆಯ ಸೆಕ್ಷನ್ 8, 12 ಹಾಗೂ ಐಪಿಸಿ ಕಲಂ 323, 506ರ ಅಡಿಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿರುವ ಭೀಕರ ಅಂಶಗಳು:
ಬಾಲಕನ ತಾಯಿ ನೀಡಿರುವ ದೂರಿನ ಪ್ರಕಾರ:
-
ಹರಿಹರ ಮಠದಲ್ಲಿ ವಿದ್ಯಾಭ್ಯಾಸಕ್ಕೆ ಇದ್ದ ಮಗನಿಗೆ 2021ರಿಂದ 2024ರವರೆಗೆ ದೌರ್ಜನ್ಯ ನಡೆಸಲಾಗಿದೆ.
-
ಸ್ವಾಮೀಜಿಯವರು ಸ್ನಾನದ ಗೃಹದಲ್ಲಿ ಮಕ್ಕಳನ್ನು ಬೆತ್ತಲೆಗೊಳಿಸಿ ತಮ್ಮ ಖಾಸಗಿ ಅಂಗಗಳಿಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು.
-
ಮಕ್ಕಳು ಪ್ರತಿಭಟಿಸಿದರೆ ದೈಹಿಕವಾಗಿ ಹಲ್ಲೆ ನಡೆಸಿ, ಆಹಾರ ನೀಡದೆ ಕೂಡಿ ಹಾಕುತ್ತಿದ್ದರು.
-
ಘಟನೆಯ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಿರೀಕ್ಷಣಾ ಜಾಮೀನು ಪಡೆದ ಶ್ರೀಗಳು:
ಪೋಕ್ಸೋ ಪ್ರಕರಣ ದಾಖಲಾಗುವ ಮುನ್ಸೂಚನೆ ಅರಿತಿದ್ದ ಸ್ವಾಮೀಜಿ, ಏಪ್ರಿಲ್ 21ರಂದೇ ದಾವಣಗೆರೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಮೇ 2ರಂದು ಜಾಮೀನು ಮಂಜೂರು ಮಾಡಿದ್ದರಿಂದ ಸದ್ಯಕ್ಕೆ ಶ್ರೀಗಳಿಗೆ ಬಂಧನದ ಭೀತಿ ಇಲ್ಲ. ಆದರೂ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಸಾಕ್ಷ್ಯಧಾರಗಳ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಹೇಳಿಕೆ: ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ. ಶೇಖರ್ ಅವರು ಪ್ರಕರಣದ ತನಿಖೆ ಆರಂಭವಾಗಿದ್ದು, ಶೀಘ್ರದಲ್ಲೇ ಬಾಲಕನ ಹೇಳಿಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಶ್ರೀಗಳು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪೀಠದ ಟ್ರಸ್ಟ್ ಇತ್ತೀಚೆಗಷ್ಟೇ ವಚನಾನಂದ ಶ್ರೀಗಳನ್ನು ಪೀಠಾಧಿಪತಿ ಸ್ಥಾನದಿಂದ ಪದಚ್ಯುತಗೊಳಿಸಿತ್ತು ಎಂಬುದು ಗಮನಾರ್ಹ.








