ಬೆಂಗಳೂರು: ಬೆಂಗಳೂರಿನ ವಿವಿಧ ಲೋಕಸಭಾ ಕ್ಷೇತ್ರಗಳು, ಗ್ರಾಮಾಂತರ ಕ್ಷೇತ್ರ ಸೇರಿ ಪ್ರಧಾನಿ ಆದರಣೀಯ ನರೇಂದ್ರ ಮೋದಿಜೀ ಅವರ ಕಾರ್ಯಕ್ರಮ ನಾಳೆ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರ ಗೇಟ್ ನಂ.4ರಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯ ಕರ್ಟನ್ ರೈಸರ್ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಚಿಕ್ಕಬಳ್ಳಾಪುರ ಕಾರ್ಯಕ್ರಮದ ಬಳಿಕ ಇಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕರ್ತರು ಮತ್ತು ಮತದಾರರ ಉತ್ಸಾಹ ಇಮ್ಮಡಿಯಾಗಲಿದೆ. ಮಹಿಳೆಯರಿಗೆ ವಿಶೇಷವಾದ ಆಸನ ವ್ಯವಸ್ಥೆ ಮಾಡಲಾಗಿದೆ. 15 ಸಾವಿರ ವಿಶೇಷ ಆಹ್ವಾನಿತರಿಗೆ ಪಾಸ್ ವ್ಯವಸ್ಥೆ ಮಾಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿ ಆಗಲಿದ್ದು, ರಾಜ್ಯಕ್ಕೆ ವಿಶೇಷ ಸಂದೇಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ್ರೋಹಿಗಳಿಗೂ ರಕ್ಷಣೆ
ಹುಬ್ಬಳ್ಳಿಯಲ್ಲಿ ನಡೆದ ದುರ್ಘಟನೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ಘಟನೆ ನಡೆದಾಗ ರಾಜ್ಯ ಸರಕಾರದ ನಡವಳಿಕೆ, ಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರ ಹೇಳಿಕೆಗಳನ್ನು ಗಮನಿಸಬೇಕು. ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಬರ್ಬರ ಹತ್ಯೆಗೆ ವೈಯಕ್ತಿಕ ವಿಚಾರ ಕಾರಣ ಎಂದು ತೇಲಿಬಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಮಾಡಿದ್ದು, ಎಲ್ಲೋ ಒಂದೆಡೆ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ದೇಶದ್ರೋಹಿಗಳಿಗೂ ರಕ್ಷಣೆ ಕೊಡುವಂತಿದೆ ಎಂದು ಆಕ್ಷೇಪಿಸಿದರು.
ಹತ್ಯೆ ಮಾಡುವವರಿಗೆ ರಕ್ಷಣೆಯ ಗ್ಯಾರಂಟಿ…
ಗ್ಯಾರಂಟಿಯ ಭರಾಟೆಯಲ್ಲಿ ದೇಶದ್ರೋಹಿಗಳಿಗೆ, ದರೋಡೆಕೋರರಿಗೆ, ಬರ್ಬರ ಹತ್ಯೆ ಮಾಡುವವರಿಗೂ ರಕ್ಷಣೆ ಕೊಡುವ ಗ್ಯಾರಂಟಿಯನ್ನು ಕೊಡುವಂತೆ ಕಾಣುತ್ತಿದೆ. ಇದನ್ನು ಹಗುರವಾಗಿ ತೆಗೆದುಕೊಳ್ಳುವ ವಿಚಾರವಲ್ಲ. ನಿನ್ನೆ ಒಂದೇ ದಿನದಲ್ಲಿ 8 ಹತ್ಯೆ ಪ್ರಕರಣಗಳು ನಡೆದಿವೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹಾಯಿಸಿದ್ದು, ಒಬ್ಬರ ಹತ್ಯೆಯಾಗಿದೆ. ಧಾರವಾಡದ ಘಟನೆ, ಗದಗದ ಘಟನೆ ಇದಕ್ಕೆ ಉದಾಹರಣೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವುದು ನಡೆದಿದೆ. ಇದು ರಾಜ್ಯದೆಲ್ಲೆಡೆ ಸಾಮಾನ್ಯವಾಗಿದೆ. ರಾಜ್ಯದ ಸರಕಾರವು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದೇ ಇದಕ್ಕೆ ಕಾರಣ. ದೇಶದ್ರೋಹಿಗಳಿಗೆ ಇದರಿಂದ ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರಿಗೆ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಮುಖ್ಯಮಂತ್ರಿಗಳ ಬಾಯಲ್ಲಿ ಇಂಥ ಹೇಳಿಕೆ ಬಂದಿದೆ ಎಂದರೆ, ಇದನ್ನು ಪ್ರತಿಯೊಬ್ಬರೂ ಯೋಚಿಸಬೇಕು ಎಂದು ತಿಳಿಸಿದರು.
ಮಹಿಳೆಯರಿಗೆ ರಕ್ಷಣೆ ಇಲ್ಲ; ಯಾರಿಗೂ ರಕ್ಷಣೆ ಇಲ್ಲ; ಹಾಡುಹಗಲೇ ಕೊಲೆ ಆಗುತ್ತಿದೆ ಎಂದರೆ, ಕಾಂಗ್ರೆಸ್ ಸರಕಾರದ ನೀತಿಗಳು ಇಡೀ ರಾಜ್ಯಕ್ಕೆ ಮಾರಕ ಆಗುತ್ತಿದೆ ಎಂದು ವಿಶ್ಲೇಷಿಸಿದರು. ರಾಜ್ಯದ ಸುರಕ್ಷತೆ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಶಾಂತಿ ಭಂಗ ತರುವವರಿಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ರಕ್ಷಣೆ ಕೊಡುತ್ತಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ ಅವರು ಉಪಸ್ಥಿತರಿದ್ದರು.
ಕರ್ನಾಟಕಕ್ಕೆ ಅನ್ಯಾಯವಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡ ಬಾಯಿ ಬಿಟ್ಟಿಲ್ಲ: CM ಸಿದ್ಧರಾಮಯ್ಯ
‘ಭಯೋತ್ಪಾದಕ’ ರಫ್ತುದಾರ ಈಗ ‘ಹಿಟ್ಟಿ’ಗಾಗಿ ಹೆಣಗಾಡುತ್ತಿದ್ದಾನೆ : ಪಾಕ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ