ನವದೆಹಲಿ: 2029ರ ಲೋಕಸಭಾ ಚುನಾವಣೆಯಲ್ಲೇ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟುನಿಟ್ಟಿನ ಹೆಜ್ಜೆ ಇರಿಸಿದ್ದಾರೆ. ಈ ಐತಿಹಾಸಿಕ ಬದಲಾವಣೆಗೆ ಸಹಕರಿಸುವಂತೆ ಸಂಸತ್ತಿನ ಉಭಯ ಸದನಗಳ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ (Floor Leaders) ಪ್ರಧಾನಿ ಶನಿವಾರ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ.
“2029ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಮಹಿಳಾ ಮೀಸಲಾತಿಯೊಂದಿಗೆ ನಡೆಯುವುದು ಅನಿವಾರ್ಯವಾಗಿದೆ. ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಅದರ ನೈಜ ಆಶಯದೊಂದಿಗೆ ಜಾರಿಗೆ ತರುವ ಸಮಯ ಬಂದಿದೆ,” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಷಯವು ಯಾವುದೇ ಪಕ್ಷ ಅಥವಾ ವ್ಯಕ್ತಿಗಿಂತ ಮಿಗಿಲಾದುದು. ಆದ್ದರಿಂದ ಎಲ್ಲಾ ಪಕ್ಷಗಳು ರಾಜಕೀಯ ಭಿನ್ನಾಭಿಪ್ರಾಯ ಮರೆತು ಏಕದನಿಯಲ್ಲಿ ಈ ತಿದ್ದುಪಡಿ ವಿಧೇಯಕವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮಹಿಳೆಯರಿಗೆ ಆಡಳಿತದಲ್ಲಿ ಹೆಚ್ಚಿನ ಪಾಲು ನೀಡುವುದು ನಮ್ಮ ಪ್ರಜಾಪ್ರಭುತ್ವದ ಪರಂಪರೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ಮೂರು ದಿನಗಳ ಸಂಸತ್ ವಿಶೇಷ ಅಧಿವೇಶನದಲ್ಲಿ ಈ ಸಂಬಂಧಿತ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಲಾಗುವುದು. ಪ್ರಸ್ತುತ ನಿಯಮದ ಪ್ರಕಾರ 2034ರಲ್ಲಿ ಜಾರಿಯಾಗಬೇಕಿದ್ದ ಮೀಸಲಾತಿಯನ್ನು, 2029ಕ್ಕೇ ಮುನ್ನಡೆಸಲು ಸಂವಿಧಾನಾತ್ಮಕ ಬದಲಾವಣೆಗಳನ್ನು ಸರ್ಕಾರ ಉದ್ದೇಶಿಸಿದೆ.








