ನವದೆಹಲಿ : ಆಂಧ್ರಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮ ದಿನಾಚರಣೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ.

ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನೂ ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗೆ ಸೂಕ್ತ ಮನ್ನಣೆ ನೀಡಲು ಮತ್ತು ದೇಶಾದ್ಯಂತ ಜನರಿಗೆ ಅವರ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಒಂದು ವರ್ಷದ ಆಚರಣೆಯ ಭಾಗವಾಗಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ.

4 ಜುಲೈ 1897 ರಂದು ಜನಿಸಿದ ಅಲ್ಲೂರಿ ಸೀತಾರಾಮ ರಾಜು ಅವರು ಪೂರ್ವ ಘಟ್ಟಗಳ ಪ್ರದೇಶದ ಬುಡಕಟ್ಟು ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಅವರು 1922 ರಲ್ಲಿ ಪ್ರಾರಂಭವಾದ ರಾಂಪಾ ದಂಗೆಯ ನೇತೃತ್ವ ವಹಿಸಿದ್ದರು.

ವಿಜಯನಗರ ಜಿಲ್ಲೆಯ ಪಂಡ್ರಂಗಿಯಲ್ಲಿರುವ ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮಸ್ಥಳ ಮತ್ತು ಚಿಂತಪಲ್ಲಿ ಪೊಲೀಸ್ ಠಾಣೆಯನ್ನು ಮರುಸ್ಥಾಪಿಸಲು ಸರ್ಕಾರ ಮುಂದಾಗಿದೆ. ಮೊಗಲ್ಲುನಲ್ಲಿ ಅಲ್ಲೂರಿ ಧ್ಯಾನ ಮಂದಿರವನ್ನು ಧ್ಯಾನ ಮುದ್ರೆಯಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ ಪ್ರತಿಮೆಯೊಂದಿಗೆ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಮ್ಯೂರಲ್ ಪೇಂಟಿಂಗ್‌ಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರನ ಜೀವನ ಕಥೆಯನ್ನು ಚಿತ್ರಿಸಲಿದೆ ಎನ್ನಲಾಗುತ್ತಿದೆ.

Share.
Exit mobile version