ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದ ಮಠವೊಂದರಲ್ಲಿ 77 ಅಡಿ ಎತ್ತರದ ಭಗವಾನ್ ರಾಮನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ದಕ್ಷಿಣ ಗೋವಾ ಜಿಲ್ಲೆಯ ಶ್ರೀ ಸಂಸ್ಥಾನ ಗೋಕರ್ಣ್ ಜೀವೋತ್ತಂ ಮಠದಲ್ಲಿ ಪ್ರಧಾನಿ ಮೋದಿ ಗುರುವಾರ ರಾಮನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಮಠದ ಪ್ರತಿನಿಧಿಯೊಬ್ಬರು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಮಧ್ಯಾಹ್ನ ೩.೪೫ ಕ್ಕೆ ಪ್ರಧಾನಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಮಠದ ಆವರಣದಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿದೆ ಎಂದು ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಡೆಂಪೊ ತಿಳಿಸಿದ್ದಾರೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಪ್ರಧಾನಿ ಮೋದಿ ಮಠದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಡೆಂಪೋ ಹೇಳಿದರು. ಗೋವಾ ರಾಜ್ಯಪಾಲ ಅಶೋಕ್ ಗಜಪತಿ ರಾಜು, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಮಠ ಸಂಪ್ರದಾಯದ ೫೫೦ ವರ್ಷಗಳ ನೆನಪಿಗಾಗಿ ನವೆಂಬರ್ ೨೭ ರಿಂದ ಡಿಸೆಂಬರ್ ೭ ರವರೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗೋವಾದ ಮಠದ ಆವರಣವನ್ನು 370 ವರ್ಷಗಳ ಹಿಂದೆ ಕೆನಕೋನಾ (ದಕ್ಷಿಣ ಗೋವಾ ಜಿಲ್ಲೆ) ನ ಪಾರ್ಟಗಲ್ ಗ್ರಾಮದಲ್ಲಿ ನಿರ್ಮಿಸಲಾಗಿದೆ ಎಂದು ಡೆಂಪೊ ಹೇಳಿದರು.
ಈ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದ್ದು, ಪ್ರತಿದಿನ 7,000 ರಿಂದ 10,000 ಜನರು ಮಠದ ಆವರಣಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.








