ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ. ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇನ್ನೇನಿದ್ದರೂ ಉದ್ಘಾಟನೆಯ ಬಳಿಕ ಸಂಚಾರವಷ್ಟೇ. ಹಾಗಾದ್ರೇ ಪಂಬನ್ ಸಮುದ್ರ ರೈಲು ಸೇತುವೆ ನಿರ್ಮಾಣ, ವಿಶೇಷತೆ ಏನು ಅಂತ ಮುಂದೆ ಓದಿ.
ರಾಮೇಶ್ವರಂ ದ್ವೀಪಕ್ಕೆ ಭಾರತೀಯ ರೈಲ್ವೆಯಿಂದ ಸಂಪರ್ಕ
ಒಂದು ಕಾಲದಲ್ಲಿ ಆ ಭೂ ಭಾಗ ಸುತ್ತಲೂ ಸಮುದ್ರದಿಂದ ಆವೃತ್ತವಾಗಿ ದ್ವೀಪವಾಗಿತ್ತು. ಆ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದು ರೈಲ್ವೆ ಸಾರಿಗೆ ಸಂಚಾರದ ಮೂಲಕ. ಈಗ ರಸ್ತೆ, ರೈಲು ಮಾರ್ಗದ ಮೂಲಕ ಜೊತೆಗೆ ಬೆಸೆದುಕೊಂಡಿರೋದೇ ರಾಮೇಶ್ವರಂ. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪಟ್ಟಣಕ್ಕೆ ರೈಲು ಸಾರಿಗೆ ಮೂಲಕ ಮತ್ತೊಮ್ಮೆ ಸಂಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ಸಿದ್ಧವಾಗಿದೆ. ಇದಕ್ಕಾಗಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
1914ರಲ್ಲಿ ನಿರ್ಮಿಸಿದ್ದ ಸೇತುವೆ ಹಾನಿ
1914ರಲ್ಲಿ ರಾಮೇಶ್ವರಂ ದ್ವೀಪಕ್ಕೆ ಮೀಟರ್ ಗೇಜ್ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಲಾಗಿತ್ತು. 1964ರಲ್ಲಿ ಉಂಟಾದಂತ ಚಂಡಮಾರುತಕ್ಕೆ ಸಿಕ್ಕು ರೈಲು ಸೇತುವೆ ಹಾನಿಯಾಗಿತ್ತು. ಆಗ ದುರಸ್ತಿಗೊಳಿಸಿ ರೈಲು ಮಾರ್ಗವನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗಿತ್ತು. ಹೀಗೆ ನಿರ್ಮಿಸಿದ್ದಂತ ಸೇತುವೆಗೆ 110 ವರ್ಷಗಳಾಗುತ್ತಿವೆ. ಇಷ್ಟು ಹಳೆಯ ಸೇತುವೆಯು ಅಲ್ಲಲ್ಲಿ ಹಾನಿಗೊಂಡ ಪರಿಣಾಮ ಹೊಸ ಸೇತುವೆಯನ್ನು ಅದರ ಪಕ್ಕದಲ್ಲೇ ನಿರ್ಮಿಸಲು ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿತು.
ಫೆಬ್ರವರಿ 2019ರಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ನೂತನ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿತು. ಆ ಮೂಲಕ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಯಿತು.
ಫೆಬ್ರವರಿ 2019ರಲ್ಲಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣ ಆರಂಭ
ಕೇಂದ್ರ ರೈಲ್ವೆ ಸಚಿವಾಲಯವು ಬರೋಬ್ಬರಿ 531 ಕೋಟಿ ವೆಚ್ಚದಲ್ಲಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನಂತ್ರ, ಫೆಬ್ರವರಿ 2019ರಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿತು. ಸಮುದ್ರದ ಆಳದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಬಳಸಿ ಕಂಬಗಳನ್ನು ನಿರ್ಮಾಣ ಮಾಡಿ ಸೇತುವೆಯನ್ನು ನಿರ್ಮಿಸಲಾಗಿದೆ. RVNLನ ಬಿ.ಕೆ ರೆಡ್ಡಿ ಕಂಪನಿಯು ರಾಮೇಶ್ವರಂ ಸಮುದ್ರ ತೀರದಲ್ಲಿ ವರ್ಟಿಕಲ್ ರೈಲು ಸೇತುವೆ ನಿರ್ಮಾಣವನ್ನು ಆರಂಭಿಸಿ, ನವೆಂಬರ್ 2024ರಲ್ಲಿ ಮುಕ್ತಾಯಗೊಳಿಸಿದೆ.
333 ಕಂಭಗಳ ಮೇಲೆ ರೈಲು ಸಂಚಾರ
333 ಕಂಭಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಮುದ್ರದಲ್ಲಿ ಹುದುಗಿಸಿ ವರ್ಟಿಕಲ್ ಸೇತುವೆಯನ್ನು ನಿರ್ಮಿಸಲಾಗಿದೆ. 2.10 ಕಿಲೋಮೀಟರ್ ದೂರದ ಈ ರೈಲು ಸೇತುವೆ ಮೇಲೆ ಸುಮಾರು 75 ರಿಂದ 80 ಕಿಲೋಮೀಟರ್ ವೇಗದ ಮಿತಿಯಲ್ಲಿ ರೈಲು ಸಂಚಾರಕ್ಕೂ ಅನುಮತಿ ನೀಡಲಾಗಿದೆ.
3,38,014 ಬ್ಯಾಗ್ ಸಿಮೆಂಟ್ ಬಳಕೆ
38 ಮೀಟರ್ ಆಳದವರೆಗೆ ಸಮುದ್ರದಲ್ಲಿ ಸೇತುವೆಯ ಕಂಭಗಳನ್ನು ನೆಟ್ಟು ಸುನಾಮಿ ಸೇರಿದಂತೆ ಇತರೆ ಪ್ರಕೃತಿ ವಿಕೋಪಗಳಂತ ಸಂದರ್ಭದಲ್ಲೂ ಹಾನಿಯಾಗದಂತೆ 4500 ಎಂಟಿ ಸಾಮರ್ಥ್ಯದ ಸ್ಟೇನ್ ಲೆಸ್ ಸ್ಟೀಲ್ ಬಳಸಿ ಕಂಭಗಳನ್ನು ನಿರ್ಮಿಸಲಾಗಿದೆ. 25,000 ಸಿಯುಎಂ ಕ್ವಾಲಿಟಿಯ ಸಿಮೆಂಟ್ ಅನ್ನು ಕಂಭಗಳ ನಿರ್ಮಾಣಕ್ಕೆ ಬಳಸಲಾಗಿದೆ. 333 ಪಿಲ್ಲೋಗಳನ್ನು ನಿರ್ಮಿಸಲು 3,38,014 ಬ್ಯಾಗ್ ಸಿಮೆಂಟ್ ಬಳಕೆ ಮಾಡಲಾಗಿದೆ.
ತುಕ್ಕು ಹಿಡಿಯದಂತೆ ಜಿಂಕ್ ದ್ರಾವಣ ಲೇಪನ
ಸಮುದ್ರದ ಕಡಲ ಅಲೆಗಳ ಕೊರೆತ, ವಾತಾವರಣದಲ್ಲಿನ ಬದಲಾವಣೆ ಸೇರಿದಂತೆ ಇತರೆ ಕಾರಣಗಳಿಂದ ಬಹು ಬೇಗ ತುಕ್ಕು ಹಿಡಿದು ಪಿಲ್ಲೋಗಳು ಹಾನಿಗೊಳಗಾಗುತ್ತವೆ. ಹೀಗಾಗಿ ತುಕ್ಕು ಹಿಡಿಯುವುದನ್ನು ತಡೆಯಲು ಜಿಂಕ್ ಮೆಟಲಿಜಿನ್, ಎಪಿಲುಕ್ಸ್ ಜಿಂಕ್ ರಿಚ್ ಪ್ರೀಮೆರ್, ಎರಡು ಕೋಟ್ ಪಲಿಸಿಲೋಕ್ಸಿನ್ ಪೆಯಂಟ್ಸ್ ಅನ್ನು ಪ್ರತಿ ಕಂಬಗಳಿಗೂ ಮಾಡಲಾಗಿದೆ. ಯಾವೆಲ್ಲ ಕಂಬಗಳಿಗೆ ತುಕ್ಕು ಹಿಡಿದಿದ್ಯೋ ಅಂತ ಕಾಲ ಕಾಲಕ್ಕೆ ಪರಿಶೀಲಿಸಿ ಮರು ಲೇಪನ ಮಾಡಿ, ತುಕ್ಕು ಹಿಡಿಯೋದನ್ನು ತಡೆಯೋ ಕೆಲಸವನ್ನು ರೈಲ್ವೆ ಇಲಾಖೆ ಮಾಡಲಿದೆ.
ಸಮುದ್ರ ಸೇತುವೆಯ ಪ್ರಮುಖ ಆಕರ್ಷಣೆ ವರ್ಟಿಕಲ್ ಲಿಫ್ಟಿಂಗ್
ಇನ್ನೂ ರಾಮೇಶ್ವರಂ ಬಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವಂತ ಸಮುದ್ರ ಸೇತುವೆಯ ಪ್ರಮುಖ ಆಕರ್ಷಣೆ ವರ್ಟಿಕಲ್ ಲಿಫ್ಟಿಂಗ್. 17 ಮೀಟರ್ ಎತ್ತರದವರೆಗೆ ಕೇವಲ 5 ನಿಮಿಷ 30 ಸೆಕೆಂಡುಗಳಲ್ಲಿ ಸೇತುವೆಯ ಭಾಗವನ್ನು ಮೇಲೆತ್ತಬಹುದಾಗಿದೆ. ಇದರಿಂದ ರಾಮೇಶ್ವರಂನಿಂದ ಸಮುದ್ರಕ್ಕೆ ದೊಡ್ಡ ದೊಡ್ಡ ಬೋಟ್ ಗಳು ಮೀನುಗಾರಿಕೆಗೆ ತೆರಳೋದಕ್ಕೆ ಅನುಕೂಲ ಕಲ್ಪಿಸಲಾಗಿದೆ.
ತಿಂಗಳಿಗೆ ಒಂದೆರಡು ಬಾರಿ ಮಾತ್ರವೇ ವರ್ಟಿಕಲ್ ಸೇತುವೆಯನ್ನು ಮೇಲೆತ್ತಲಾಗುತ್ತದೆ. ಬಂದರು ಇಲಾಖೆಯಿಂದ ವರ್ಟಿಕಲ್ ಸೇತುವೆ ಬಳಸಿ ಹೋಗುವಂತೆ ಬೋಟ್ ಗಳ ಮಾಹಿತಿಯನ್ನು ರೈಲ್ವೆ ಇಲಾಖೆಗೆ ನೀಡಿದ ನಂತ್ರ, ಈ ಸೇತುವೆ ಹಾದು ಹೋಗೋದಕ್ಕೆ ಮೇಲೆತ್ತಿ ಅವಕಾಶ ನೀಡಲಾಗುತ್ತದೆ. ಆ ಮೂಲಕ ರಾಮೇಶ್ವರಂನ ಮೀನುಗಾರರು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಅನುವಾಗಿದೆ.
ಅಂದಹಾಗೇ ಇದಕ್ಕೂ ಮೊದಲು ನಿರ್ಮಿಸಿದ್ದಂತ ಹಳೆಯ ಸೇತುವೆಯನ್ನು ಮಾನವ ಶಕ್ತಿಯನ್ನು ಬಳಸಿ ಸುಮಾರು ಅರ್ಧಗಂಟೆಯ ಸಮಯವನ್ನು ತೆಗೆದುಕೊಂಡು ಓಪನ್ ಮಾಡಬೇಕಿತ್ತು. ಆದರೇ ಹೊಸದಾಗಿ ನಿರ್ಮಿಸಿರುವಂತ ವರ್ಟಿಕಲ್ ಸೇತುವೆಯನ್ನು ಕೇವಲ 5 ನಿಮಿಷ 30 ಸೆಕೆಂಡ್ ಗಳಲ್ಲಿ ಬರೋಬ್ಬರಿ 17 ಮೀಟರ್ ಎತ್ತರದವರೆಗೆ ಮೇಲೆತ್ತಬಹುದಾಗಿದೆ.
ಒಮ್ಮೆ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಎತ್ತಿ ಇಳಿಸಲು 120 ಕೆವಿ ವಿದ್ಯುತ್ ಬೇಕು
ಸಂಪೂರ್ಣ ವಿದ್ಯುತ್ ಚಾಲಿತ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ಒಮ್ಮೆ ತೆರೆದು, ಮೀನುಗಾರಿಕೆಗೆ ತೆರಳುವಂತ ಬೋಟ್ ಗಳಿಗೆ ಅವಕಾಶ ಮಾಡಿಕೊಟ್ಟು, ಪುನಃ ರೈಲು ಸಂಚಾರಕ್ಕೆ ಕೆಳಗಿಳಿಸಿ ಅವಕಾಶ ನೀಡಲು 120 ಕೆವಿ ವಿದ್ಯುತ್ ಬೇಕು ಎಂಬುದು ಸೀನಿಯರ್ ಸೆಕ್ಷನ್ ಆಫೀಸರ್ ಮಾಹಿತಿ. ಹೀಗಾಗಿಯೇ ತಿಂಗಳಿಗೆ ಒಂದು ಎರಡು ಬಾರಿ ಇಲ್ಲವೇ ತುರ್ತು ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಬಾರಿ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ತೆರೆದು ಮುಚ್ಚಲಾಗುತ್ತದೆ ಎಂಬುದಾಗಿಯೂ ತಿಳಿಸಿದ್ದಾರೆ.
ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಉದ್ಘಾಟನೆಗೆ ಸಿದ್ಧ
ಫೆಬ್ರವರಿ 2019ರಲ್ಲಿ 531 ಕೋಟಿ ರೂಪಾಯಿಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯದಿಂದ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡಲಾಯಿತು. ನವೆಂಬರ್ 2024ರಲ್ಲಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಿದ್ದಾರೆ.
ಮಾಹಿತಿ ಹಂಚಿಕೊಂಡ ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ
ಭಾರತದ ನೆಲದಿಂದ ರಾಮೇಶ್ವರ ದ್ವೀಪಕ್ಕೆ ಸಂಪರ್ಕ ಕಲ್ಪಿಸುವಂತ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಬಗ್ಗೆ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕರ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಕನ್ನಡ ನ್ಯೂಸ್ ನೌ ಜೊತೆಗೆ ಮಾಹಿತಿ ಹಂಚಿಕೊಂಡರು. ಹಳೆಯ ಸೇತುವೆ ಶಿಥಿಲಗೊಂಡ ಕಾರಣದಿಂದಾಗಿ ರಾಮೇಶ್ವರಂ ದ್ವೀಪಕ್ಕೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ರಾಮೇಶ್ವರಕ್ಕೆ ತೆರಳಲು ಪ್ರಯಾಣಿಕರಿಗೆ ಅಡಚಣೆ ಉಂಟಾಗಿತ್ತು. ಈಗ ಹೊಸ ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರವೇ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರೈಲು ಸಂಚಾರದ ಪರೀಕ್ಷೆ ಪೂರ್ಣ, ಲೋಕಾರ್ಪಣೆಯ ಬಳಿಕ ಸಂಚಾರ ಸೇವೆ ಆರಂಭ
ಇನ್ನೂ ರಾಮೇಶ್ವರಂನ ಪಂಬಲನ್ ಸಮುದ್ರ ರೈಲು ಸೇತುವೆಯ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಈಗಾಗಲೇ ರೈಲ್ವೆ ಇಲಾಖೆಯಿಂದ ವರ್ಟಿಕಲ್ ಲಿಫ್ಟಿಂಗ್ ಸೇತುವೆಯ ಮೇಲೆ ರೈಲು ಸಂಚಾರದ ಪರೀಕ್ಷೆಯನ್ನು ನಡೆಸಲಾಗಿದೆ. ಜೊತೆಗೆ 75ರಿಂದ 80 ಕಿಲೋಮೀಟರ್ ವೇಗದಲ್ಲಿ ಈ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆಗೂಡಿ ನೂತನ ಪಂಬಲನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಲೋಕಾರ್ಪಣೆ ಗೊಳಿಸಲಿದ್ದಾರೆ. ಆ ಬಳಿಕ ರಾಮೇಶ್ವರಕ್ಕೆ ರೈಲು ಸಂಚಾರ ಪುನರಾರಂಭಗೊಳ್ಳಲಿದೆ.
ದಿನವೊಂದಕ್ಕೆ 12 ರೈಲುಗಳು ಸಂಚಾರ ನಡೆಸಲಿವೆ ಎಂಬುದಾಗಿ ರೈಲ್ವೆ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಈ ಸಂಖ್ಯೆ ವಿಶೇಷ ರೈಲುಗಳು ಸೇರಿದರೇ 18ಕ್ಕೆ ಏರುವ ಸಾಧ್ಯತೆ ಇದೆ. ಆ ಮೂಲಕ ರಾಮೇಶ್ವರಕ್ಕೆ ಭಾರತದ ಇತರೆ ಪ್ರದೇಶಗಳಿಂದ ರೈಲು ಸಂಚಾರದ ಮೂಲಕ ತಲುಪುವಂತ ಕಾರ್ಯ ಹಲವು ವರ್ಷಗಳ ಬಳಿಕ ಶುರುವಾಗಲಿದೆ.
ಸೋ ರಾಮೇಶ್ವರ ಬಳಿಯ ಪಂಬಲನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಶೀಘ್ರವೇ ಲೋಕಾರ್ಪಣೆಗೊಳ್ಳಲಿ. ಪ್ರಯಾಣಿಕರಿಗೆ ರೈಲು ಸಂಚಾರದ ಸೇವೆಯೊಂದಿಗೆ ರಾಮೇಶ್ವರಕ್ಕೆ ತಲುಪುವ ಕಾರ್ಯ ಪುನರಾರಂಭಗೊಳ್ಳಲಿ ಎಂಬುದಾಗಿ ನಿಮ್ಮ ಕನ್ನಡ ನ್ಯೂಸ್ ನೌ ಆಶಿಸುತ್ತಿದೆ.
ಪಂಬನ್ ವರ್ಟಿಕಲ್ ಸೇತುವೆ ನೋಡಲು ಹೋಗೋದು ಹೇಗೆ.?
ನೀವು ಬೆಂಗಳೂರಿನಿಂದ ವಿಮಾನ ಮಾರ್ಗದ ಮೂಲಕ ಮಧುರೈಗೆ ತೆರಳಿ, ಅಲ್ಲಿಂದ ರಾಮೇಶ್ವರಕ್ಕೆ ರಸ್ತೆ ಮಾರ್ಗದ ಮೂಲಕ ಸಂಚರಿಸಬಹುದು. ಇಲ್ಲವೇ ರೈಲಿನ ಮೂಲಕ ತೆರಳೋದಾದರೇ ಬೆಂಗಳೂರಿನಿಂದ ಮಧುರೈಗೆ ನೇರವಾಗಿ ರೈಲು ಸಂಚಾರದ ವ್ಯವಸ್ಥೆಯಿದೆ. ಮಧುರೈಗೆ ತೆರಳಿ ರಾಮೇಶ್ವರಕ್ಕೆ ಕಾರು, ಬಸ್ ಮೂಲಕ ತಲುಪಬಹುದಾಗಿದೆ.
ರಾಮೇಶ್ವರಕ್ಕೆ ತೆರಳುವ ಮಾರ್ಗ ಮಧ್ಯದಲ್ಲೇ ಪಂಬನ್ ಸಮುದ್ರ ಸೇತುವೆ ನೋಡಿಕೊಂಡು ಮುಂದೆ ಸಾಗಿದ್ರೆ ನಿಮಗೆ ಡಾ.ಎಪಿಜೆ ಅಬ್ದುಲ್ ಕಾಲಂ ಮೆಮೋರಿಯಲ್ ಹಾಲ್ ಸಿಗಲಿದೆ. ಅದನ್ನು ವೀಕ್ಷಿಸಿ ರಾಮೇಶ್ವರದಲ್ಲಿ ಡಾ.ಎಪಿಜೆ ಅಬ್ದುಲ್ ಕಾಲಂ ಮನೆಗೂ ಭೇಟಿ ನೀಡಬಹುದು. ಇದಲ್ಲದೇ ರಾಮೇಶ್ವರದಿಂದ ಭಾರತದ ಕೊನೆಯ ಭೂ ಭಾಗವಾಗಿರುವಂತ ಧನುಷ್ ಕೋಟಿಗೂ ಭೇಟಿ ನೀಡಿ ಬರಬಹುದಾಗಿದೆ.
ವಿಶೇಷ ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ನೋಂದಣಿ ಕುರಿತು ಇಲ್ಲಿದೆ ಮಾಹಿತಿ