ಬೆಂಗಳೂರು: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಓರ್ವ ಹೇಡಿ ಎಂಬುದು ಗೊತ್ತಾಗಿದೆ. ಜನಪ್ರಿಯ ನಾಯಕರಾದ ಅರವಿಂದ ಕೇಜ್ರಿವಾಲ್ ಅವರನ್ನು ನೇರವಾಗಿ ಎದುರಿಸಲಾಗದೆ ಪಿತೂರಿ ನಡೆಸಿ ಬಂಧನಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಹೇಡಿಗಳಷ್ಟೇ ಕುತಂತ್ರ, ಪಿತೂರಿ, ವಾಮ ಮಾರ್ಗಗಳನ್ನು ಅನುಸರಿಸುತ್ತಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಎಎಪಿ ಭಾನುವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಿತು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ ಎಂಬುದನ್ನು ಅರಿತಿರುವ ಮೋದಿ ಸರ್ಕಾರ ಹೇಗಾದರೂ ಮಾಡಿ ಮತ್ತೆ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ. ಚುನಾವಣಾ ಬಾಂಡ್ ಮೂಲಕ ಅತಿದೊಡ್ಡ ಹಗರಣ ನಡೆಸಿರುವ ನರೇಂದ್ರ ಮೋದಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಲಿ ಎಂದು ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧವೇ ಹೊಂದಿರದ ಕೇಜ್ರಿವಾಲ್ ಅವರನ್ನು ಪ್ರಮುಖ ಆರೋಪಿ ಶರತ್ ಚಂದ್ರ ರೆಡ್ಡಿ ಅವರ ಒಂದು ಹೇಳಿಕೆ ಆಧರಿಸಿ ಬಂಧಿಸಲಾಗಿದೆ. ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದರೆ, ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿದರೆ ಬಂಧಮುಕ್ತಗೊಳಿಸುವುದಾಗಿ ಪುಸಲಾಯಿಸಿ ಶರತ್ ಚಂದ್ರ ರೆಡ್ಡಿ ಅವರನ್ನು ಸಾಕ್ಷಿಧಾರನನ್ನಾಗಿಸಲಾಗಿದೆ. ಡೀಲ್ ಪ್ರಕಾರ ಶರತ್ ಚಂದ್ರ ರೆಡ್ಡಿ ಒಡೆತನದ ಕಂಪನಿ ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದೆ. ನಂತರ ಬೆನ್ನು ನೋವು ಎಂಬ ಯಕಃಶ್ಚಿತ್ ಕಾರಣಕ್ಕೆ ಪ್ರಮುಖ ಆರೋಪಿಯನ್ನೇ ಬಿಡುಗಡೆ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಏಕೆ ಬಂಧಿಸಿಲ್ಲ? ಇದರ ರೂವಾರಿ ನರೇಂದ್ರ ಮೋದಿ ಅವರನ್ನು ಬಂಧಿಸಬೇಕಲ್ಲವೇ? ಎಂದು ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಲೋಕಸಭಾ ಚುನಾವಣೆ ಮುಗಿಯವರೆಗೆ ಹೇಗಾದರೂ ಮಾಡಿ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಟ್ಟರೆ ಗೆಲ್ಲಬಹುದು ಎಂಬುದು ನರೇಂದ್ರ ಮೋದಿ ಅವರ ದುರುದ್ದೇಶವಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ, ಆಧಾರ, ಪುರಾವೆಗಳಿಲ್ಲದೆ ಸಂಜಯ್ ಸಿಂಗ್ ಅವರನ್ನು ಬಂಧನದಲ್ಲಿಟ್ಟಿರುವ ಬಗ್ಗೆ ನ್ಯಾಯಾಲಯ ಛೀಮಾರಿ ಹಾಕಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಅವರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅಕ್ರಮವಾಗಿ ಬಂಧಿಸಲಾಗಿದೆ. ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ನಿಷ್ಕ್ರಿಯಗೊಳಿಸಲು ಕಳೆದ 2 ವರ್ಷಗಳಿಂದ ಹುನ್ನಾರ ನಡೆದಿದೆ. ಪ್ರಕರಣದಲ್ಲಿ ಸಿಕ್ಕಿಸಿಹಾಕುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ. ಆದರೆ ಇದುವರೆಗೆ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ನಡೆದಿರದ ಅಕ್ರಮವನ್ನು ಎಷ್ಟು ಅಗೆದರೆ ಏನು ಬಂತು? ಇದೆಲ್ಲವೂ ಮೋದಿ ಸರ್ಕಾರದ ಕೃಪಾಪೋಷಿತ ಕಾರ್ಯಾಚರಣೆ ಎಂಬುದನ್ನು ವಿವರಿಸಬೇಕಿಲ್ಲ ಎಂದು ಪೃಥ್ವಿ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
‘UGC NET’ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ