ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಭಾರತದ ಮೊದಲ ಜಾಗತಿಕ ಶ್ರವಣ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ-ವೇವ್ಸ್ 2025 ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಆಚರಿಸಲಾಗುತ್ತಿರುವ ಮಹಾರಾಷ್ಟ್ರ ದಿನ ಮತ್ತು ಗುಜರಾತ್ ರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದರು. ಎಲ್ಲಾ ಅಂತರರಾಷ್ಟ್ರೀಯ ಗಣ್ಯರು, ರಾಯಭಾರಿಗಳು ಮತ್ತು ಸೃಜನಶೀಲ ಉದ್ಯಮದ ನಾಯಕರ ಉಪಸ್ಥಿತಿಯನ್ನು ಶ್ಲಾಘಿಸಿದ ಪ್ರಧಾನಿ, 100 ಕ್ಕೂ ಹೆಚ್ಚು ದೇಶಗಳ ಕಲಾವಿದರು, ನಾವೀನ್ಯಕಾರರು, ಹೂಡಿಕೆದಾರರು ಮತ್ತು ನೀತಿ ನಿರೂಪಕರು ಒಟ್ಟಾಗಿ ಪ್ರತಿಭೆ ಮತ್ತು ಸೃಜನಶೀಲತೆಯ ಜಾಗತಿಕ ಪೂರಕ ವ್ಯವಸ್ಥೆಗೆ ಅಡಿಪಾಯ ಹಾಕಿದ್ದಾರೆ ಎಂದು ಒತ್ತಿ ಹೇಳಿದರು. “ವೇವ್ಸ್ ಕೇವಲ ಒಂದು ಸಂಕ್ಷಿಪ್ತ ರೂಪವಲ್ಲ, ಸಂಸ್ಕೃತಿ, ಸೃಜನಶೀಲತೆ ಮತ್ತು ಜಾಗತಿಕ ಸಂಪರ್ಕವನ್ನು ಪ್ರತಿನಿಧಿಸುವ ಅಲೆಯಾಗಿದೆ” ಎಂದು ಅವರು ಹೇಳಿದರು.
ಶೃಂಗಸಭೆಯು ಚಲನಚಿತ್ರಗಳು, ಸಂಗೀತ, ಗೇಮಿಂಗ್, ಅನಿಮೇಷನ್ ಮತ್ತು ಕಥೆ ಹೇಳುವಿಕೆಯ ವಿಸ್ತಾರವಾದ ಜಗತ್ತನ್ನು ಪ್ರದರ್ಶಿಸುತ್ತದೆ, ಕಲಾವಿದರು ಮತ್ತು ಕಂಟೆಂಟ್ ಸೃಷ್ಟಿಕರ್ತರು ಸಂಪರ್ಕ ಸಾಧಿಸಲು ಮತ್ತು ಸಹಕರಿಸಲು ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರನ್ನು ಪ್ರಧಾನಿ ಅಭಿನಂದಿಸಿದರು ಮತ್ತು ಭಾರತ ಮತ್ತು ವಿದೇಶಗಳಿಂದ ಬಂದ ಗಣ್ಯ ಅತಿಥಿಗಳಿಗೆ ಆತ್ಮೀಯ ಸ್ವಾಗತವನ್ನು ಕೋರಿದರು.
ವೇವ್ಸ್ ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ಸಿನಿಮಾ ಇತಿಹಾಸದ ಬಗ್ಗೆ ಮಾತನಾಡಿದ ಮೋದಿ, ಮೇ 3, 1913 ರಂದು, ಪ್ರವರ್ತಕ ಚಲನಚಿತ್ರ ನಿರ್ಮಾತೃ ದಾದಾಸಾಹೇಬ್ ಫಾಲ್ಕೆ ನಿರ್ದೇಶಿಸಿದ ಭಾರತದ ಮೊದಲ ಚಲನಚಿತ್ರ ರಾಜಾ ಹರಿಶ್ಚಂದ್ರ ಬಿಡುಗಡೆಯಾಯಿತು ಎಂದು ಹೇಳಿದರು.
ಫಾಲ್ಕೆ ಅವರ ಜಯಂತಿಯನ್ನು ನಿನ್ನೆಯಷ್ಟೇ ಆಚರಿಸಲಾಯಿತು ಎಂದು ಅವರು ನೆನಪಿಸಿಕೊಂಡರು. ಕಳೆದ ಶತಮಾನದಲ್ಲಿ ಭಾರತೀಯ ಸಿನಿಮಾದ ಪ್ರಭಾವವನ್ನು ಅವರು ಒತ್ತಿ ಹೇಳಿದರು, ಇದು ಭಾರತದ ಸಾಂಸ್ಕೃತಿಕ ಸಾರವನ್ನು ಪ್ರಪಂಚದ ಮೂಲೆ ಮೂಲೆಗೆ ಯಶಸ್ವಿಯಾಗಿ ಕೊಂಡೊಯ್ದಿದೆ ಎಂದು ಹೇಳಿದರು.
ರಷ್ಯಾದಲ್ಲಿ ರಾಜಕಪೂರ್ ಅವರ ಜನಪ್ರಿಯತೆ, ಕೇನ್ಸ್ ನಲ್ಲಿ ಸತ್ಯಜಿತ್ ರೇ ಅವರ ಜಾಗತಿಕ ಮನ್ನಣೆ ಮತ್ತು ಆರ್ ಆರ್ ಆರ್ ನ ಆಸ್ಕರ್ ವಿಜೇತ ಯಶಸ್ಸನ್ನು ಅವರು ಎತ್ತಿ ತೋರಿಸಿದರು, ಭಾರತೀಯ ಚಲನಚಿತ್ರ ನಿರ್ಮಾತೃಗಳು ಜಾಗತಿಕ ನಿರೂಪಣೆಗಳನ್ನು ಹೇಗೆ ರೂಪಿಸುತ್ತಿದ್ದಾರೆ ಎಂಬುದನ್ನು ಒತ್ತಿ ಹೇಳಿದರು. ಗುರುದತ್ ಅವರ ಕಾವ್ಯಮಯ ಸಿನಿಮಾ, ಎ.ಆರ್. ರೆಹಮಾನ್ ಅವರ ಸಂಗೀತ ಪ್ರತಿಭೆ, ಋತ್ವಿಕ್ ಘಟಕ್ ಅವರ ಸಾಮಾಜಿಕ ಪ್ರತಿಬಿಂಬಗಳು ಮತ್ತು ಎಸ್.ಎಸ್. ರಾಜಮೌಳಿಯವರ ಮಹಾಕಾವ್ಯದ ಕಥೆ ಹೇಳುವಿಕೆಯನ್ನು ಸಹ ಅವರು ಶ್ಲಾಘಿಸಿದರು.
ಈ ಪ್ರತಿಯೊಬ್ಬ ಕಲಾವಿದರು ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಭಾರತೀಯ ಸಂಸ್ಕೃತಿಯನ್ನು ಜೀವಂತಗೊಳಿಸಿದ್ದಾರೆ ಎಂದು ಹೇಳಿದರು. ಭಾರತೀಯ ಸಿನಿಮಾ ದಿಗ್ಗಜರನ್ನು ಸ್ಮರಣಾರ್ಥ ಅಂಚೆ ಚೀಟಿಗಳ ಮೂಲಕ ಗೌರವಿಸಲಾಯಿತು. ಉದ್ಯಮಕ್ಕೆ ಅವರು ನೀಡಿದ ಕೊಡುಗೆಗಳಿಗೆ ಗೌರವ ಸಲ್ಲಿಸಲಾಯಿತು ಎಂದು ಮೋದಿ ಹೇಳಿದರು.
ಭಾರತದ ಸೃಜನಶೀಲ ಸಾಮರ್ಥ್ಯ ಮತ್ತು ಜಾಗತಿಕ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಕಳೆದ ಕೆಲವು ವರ್ಷಗಳಲ್ಲಿ, ಗೇಮಿಂಗ್, ಸಂಗೀತ, ಚಲನಚಿತ್ರ ನಿರ್ಮಾಣ ಮತ್ತು ನಟನೆಯ ವೃತ್ತಿಪರರೊಂದಿಗೆ ವಿಚಾರಗಳು ಮತ್ತು ಒಳನೋಟಗಳನ್ನು ಚರ್ಚಿಸಿದ್ದು, ಸೃಜನಶೀಲ ಉದ್ಯಮಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಂಡಿರುವುದಾಗಿ ಹೇಳಿದರು.
ಮಹಾತ್ಮ ಗಾಂಧಿಯವರ 150 ನೇ ಜಯಂತಿಯ ಸಂದರ್ಭದಲ್ಲಿ ಕೈಗೊಂಡ ವಿಶಿಷ್ಟ ಉಪಕ್ರಮವನ್ನು ಅವರು ಪ್ರಸ್ತಾಪಿಸಿದರು, ಅಲ್ಲಿ 150 ದೇಶಗಳ ಗಾಯಕರು ಸುಮಾರು 500-600 ವರ್ಷಗಳ ಹಿಂದೆ ನರಸಿಂಹ ಮೆಹ್ತಾ ಬರೆದ ‘ವೈಷ್ಣವ ಜನ ತೋ’ ಗೀತೆಯನ್ನು ಹಾಡಿದರು. ಈ ಜಾಗತಿಕ ಕಲಾತ್ಮಕ ಪ್ರಯತ್ನವು ಗಮನಾರ್ಹ ಪರಿಣಾಮವನ್ನು ಬೀರಿತು, ಜಗತ್ತನ್ನು ಸಾಮರಸ್ಯದಿಂದ ಒಟ್ಟುಗೂಡಿಸಿತು ಎಂದು ಅವರು ಹೇಳಿದರು. ಶೃಂಗಸಭೆಯಲ್ಲಿ ಹಾಜರಿರುವ ಹಲವಾರು ವ್ಯಕ್ತಿಗಳು ಗಾಂಧಿಯವರ ತತ್ವಗಳನ್ನು ಮುನ್ನಡೆಸುವ ಕಿರು ವೀಡಿಯೊ ಸಂದೇಶಗಳನ್ನು ರಚಿಸುವ ಮೂಲಕ ʼಗಾಂಧಿ ಒನ್ ಫಿಫ್ಟಿʼ ಉಪಕ್ರಮಕ್ಕೆ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಸಹಯೋಗದೊಂದಿಗೆ ಭಾರತದ ಸೃಜನಶೀಲ ಪ್ರಪಂಚದ ಸಾಮೂಹಿಕ ಶಕ್ತಿ ಈಗಾಗಲೇ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಮತ್ತು ಆ ದೃಷ್ಟಿಕೋನವು ಈಗ ವೇವ್ಸ್ ರೂಪದಲ್ಲಿ ಸಾಕಾರಗೊಂಡಿದೆ ಎಂದು ಅವರು ಹೇಳಿದರು.
ವೇವ್ಸ್ ಶೃಂಗಸಭೆಯ ಮೊದಲ ಆವೃತ್ತಿಯ ಅದ್ಭುತ ಯಶಸ್ಸನ್ನು ಮೋದಿ ಶ್ಲಾಘಿಸಿದರು, ಅದರ ಮೊದಲ ಕ್ಷಣದಿಂದಲೇ ಈ ಕಾರ್ಯಕ್ರಮವು ಜಾಗತಿಕ ಗಮನ ಸೆಳೆದಿದೆ ಮತ್ತು “ಉದ್ದೇಶದಿಂದ ಆರ್ಭಟಿಸುತ್ತಿದೆ” ಎಂದು ಹೇಳಿದರು. ಶೃಂಗಸಭೆಯ ಸಲಹಾ ಮಂಡಳಿಯ ಸಮರ್ಪಣೆ ಮತ್ತು ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ವೇವ್ಸ್ ಅನ್ನು ಸೃಜನಶೀಲ ಉದ್ಯಮದಲ್ಲಿ ಒಂದು ಹೆಗ್ಗುರುತು ಕಾರ್ಯಕ್ರಮವನ್ನಾಗಿ ಮಾಡುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು. 60 ದೇಶಗಳಲ್ಲಿ ಸುಮಾರು 100,000 ಸೃಜನಶೀಲ ವೃತ್ತಿಪರರ ಭಾಗವಹಿಸುವಿಕೆಯನ್ನು ಕಂಡ ದೊಡ್ಡ ಪ್ರಮಾಣದ ಕ್ರಿಯೇಟರ್ಸ್ ಚಾಲೆಂಜ್ ಮತ್ತು ಕ್ರಿಯೋಟೋಸ್ಪಿಯರ್ ಉಪಕ್ರಮವನ್ನು ಅವರು ಎತ್ತಿ ತೋರಿಸಿದರು. 32 ಸವಾಲುಗಳಲ್ಲಿ 800 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಅವರ ಪ್ರತಿಭೆಯನ್ನು ಗುರುತಿಸಲಾಗಿದೆ ಎಂದು ಹೇಳಿದ ಪ್ರಧಾನಿ, ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಅಂತಿಮ ಸ್ಪರ್ಧಿಗಳಿಗೆ ಈಗ ಜಾಗತಿಕ ಸೃಜನಶೀಲ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ವೇವ್ಸ್ ಶೃಂಗಸಭೆಯ ಸಂದರ್ಭದಲ್ಲಿ ಭಾರತ್ ಪೆವಿಲಿಯನ್ ನಲ್ಲಿ ಪ್ರದರ್ಶಿಸಲಾದ ಸೃಜನಶೀಲ ರಚನೆಗಳ ಬಗ್ಗೆ ಪ್ರಧಾನಿ ಉತ್ಸಾಹ ವ್ಯಕ್ತಪಡಿಸಿದರು. ಗಮನಾರ್ಹವಾದ ನಾವೀನ್ಯತೆಯನ್ನು ಸಾಧಿಸಲಾಗಿದೆ ಮತ್ತು ಈ ರಚನೆಗಳನ್ನು ನೇರವಾಗಿ ವೀಕ್ಷಿಸಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.
ವೇವ್ಸ್ ಬಜಾರ್ ಉಪಕ್ರಮವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು, ಹೊಸ ಕಂಟೆಂಟ್ ಸೃಷ್ಟಿಕರ್ತರನ್ನು ಪ್ರೋತ್ಸಾಹಿಸುವ ಮತ್ತು ಅವರನ್ನು ಉದಯೋನ್ಮುಖ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಸಾಮರ್ಥ್ಯವನ್ನು ಅವರು ಗಮನಿಸಿದರು. ಕಲಾ ಉದ್ಯಮದಲ್ಲಿ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ಪರಿಕಲ್ಪನೆಯನ್ನು ಅವರು ಶ್ಲಾಘಿಸಿದರು, ಅಂತಹ ಉಪಕ್ರಮಗಳು ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸುತ್ತವೆ ಮತ್ತು ಕಲಾವಿದರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತವೆ ಎಂದು ಹೇಳಿದರು.
ಸೃಜನಶೀಲತೆ ಮತ್ತು ಮಾನವ ಅನುಭವದ ನಡುವಿನ ಆಳವಾದ ಬೇರೂರಿರುವ ಸಂಪರ್ಕದ ಬಗ್ಗೆ ಮಾತನಾಡುತ್ತಾ, ಮಗುವಿನ ಪ್ರಯಾಣವು ತಾಯಿಯ ಲಾಲಿಯೊಂದಿಗೆ ಪ್ರಾರಂಭವಾಗುತ್ತದೆ, ಇದು ಮಗುವಿಗೆ ಧ್ವನಿ ಮತ್ತು ಸಂಗೀತದ ಮೊದಲ ಪರಿಚಯವಾಗಿರುತ್ತದೆ ಎಂದು ಹೇಳಿದ ಮೋದಿ, ತಾಯಿ ತನ್ನ ಮಗುವಿಗೆ ಕನಸುಗಳನ್ನು ಹೆಣೆಯುವಂತೆಯೇ, ಕಂಟೆಂಟ್ ಸೃಷ್ಟಿಕರ್ತರು ಒಂದು ಯುಗದ ಕನಸುಗಳಿಗೆ ಆಕಾರ ನೀಡುತ್ತಾರೆ ಎಂದು ಹೇಳಿದರು. ತಮ್ಮ ಕಲೆಯ ಮೂಲಕ ಪೀಳಿಗೆಗಳಿಗೆ ಸ್ಫೂರ್ತಿ ನೀಡುವ ಮತ್ತು ಪ್ರಭಾವ ಬೀರುವ ಅಂತಹ ದಾರ್ಶನಿಕ ವ್ಯಕ್ತಿಗಳನ್ನು ಒಟ್ಟುಗೂಡಿಸುವಲ್ಲಿ ವೇವ್ಸ್ ನ ಸಾರ ಅಡಗಿದೆ ಎಂದು ಅವರು ಒತ್ತಿ ಹೇಳಿದರು.
ಸಾಮೂಹಿಕ ಪ್ರಯತ್ನಗಳಲ್ಲಿ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಪ್ರಧಾನಿಯವರು, ಕಲಾವಿದರು, ಕಂಟೆಂಟ್ ಸೃಷ್ಟಿಕರ್ತರು ಮತ್ತು ಉದ್ಯಮ ನಾಯಕರ ಸಮರ್ಪಣೆ ಮುಂಬರುವ ವರ್ಷಗಳಲ್ಲಿ ವೇವ್ಸ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಶೃಂಗಸಭೆಯ ಮೊದಲ ಆವೃತ್ತಿಯನ್ನು ಯಶಸ್ವಿಗೊಳಿಸಲು ನೀಡಿದ ಬೆಂಬಲ ಮತ್ತು ಸಹಕಾರವನ್ನು ಮುಂದುವರಿಸಲು ತಮ್ಮ ಉದ್ಯಮ ಸಹವರ್ತಿಗಳನ್ನು ಒತ್ತಾಯಿಸಿದರು.
ಇನ್ನೂ ಅನೇಕ ರೋಮಾಂಚಕಾರಿ ವೇವ್ಸ್ ಆವೃತ್ತಿಗಳು ಬರಬೇಕಿದೆ ಎಂದು ಅವರು ಹೇಳಿದರು ಮತ್ತು ಭವಿಷ್ಯದಲ್ಲಿ ವೇವ್ಸ್ ಪ್ರಶಸ್ತಿಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು, ಇವು ಕಲೆ ಮತ್ತು ಸೃಜನಶೀಲತೆಯ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಗೌರವಗಳಾಗಿರುತ್ತವೆ ಎಂದು ಅವರು ಹೇಳಿದರು. ನಿರಂತರ ಬದ್ಧತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಪ್ರಪಂಚದಾದ್ಯಂತ ಜನರ ಹೃದಯಗಳನ್ನು ಗೆಲ್ಲುವುದು ಮತ್ತು ಸೃಜನಶೀಲತೆಯ ಮೂಲಕ ಪೀಳಿಗೆಗಳಿಗೆ ಸ್ಫೂರ್ತಿ ನೀಡುವುದು ಗುರಿಯಾಗಿದೆ ಎಂದು ಹೇಳಿದರು.
ಭಾರತದ ತ್ವರಿತ ಆರ್ಥಿಕ ಪ್ರಗತಿಯನ್ನು ಎತ್ತಿ ತೋರಿಸಿದ ಅವರು, ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಹೇಳಿದರು. ಜಾಗತಿಕ ಫಿನ್ಟೆಕ್ ಅಳವಡಿಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ, ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ ಮತ್ತು ವಿಶ್ವಾದ್ಯಂತ ಮೂರನೇ ಅತಿದೊಡ್ಡ ನವೋದ್ಯಮ ಪೂರಕ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪ್ರಯಾಣ ಇದೀಗಷ್ಟೇ ಪ್ರಾರಂಭವಾಗಿದೆ ಮತ್ತು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ ಎಂದು ಅವರು ಒತ್ತಿ ಹೇಳಿದರು.
ಭಾರತವು ಒಂದು ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆಗೆ ನೆಲೆಯಾಗಿರುವುದು ಮಾತ್ರವಲ್ಲ, ಒಂದು ಶತಕೋಟಿಗೂ ಹೆಚ್ಚಿನ ಕಥೆಗಳಿಗೂ ನೆಲೆಯಾಗಿದೆ” ಎಂದು ಅವರು ಹೇಳಿದರು. ದೇಶದ ಶ್ರೀಮಂತ ಕಲಾತ್ಮಕ ಇತಿಹಾಸವನ್ನು ಉಲ್ಲೇಖಿಸುತ್ತಾ, ಎರಡು ಸಾವಿರ ವರ್ಷಗಳ ಹಿಂದೆ ಭರತ ಮುನಿಯವರ ನಾಟ್ಯ ಶಾಸ್ತ್ರವು ಭಾವನೆಗಳು ಮತ್ತು ಮಾನವ ಅನುಭವಗಳನ್ನು ರೂಪಿಸುವಲ್ಲಿ ಕಲೆಯ ಶಕ್ತಿಯನ್ನು ಒತ್ತಿಹೇಳಿತು ಎಂದು ಅವರು ನೆನಪಿಸಿಕೊಂಡರು. ಶತಮಾನಗಳ ಹಿಂದೆ, ಕಾಳಿದಾಸನ ಅಭಿಜ್ಞಾನ-ಶಾಕುಂತಲಂ ಶಾಸ್ತ್ರೀಯ ನಾಟಕಕ್ಕೆ ಹೊಸ ದಿಕ್ಕನ್ನು ನೀಡಿತು ಎಂದು ಅವರು ಹೇಳಿದರು.
ಭಾರತದ ಆಳವಾದ ಸಾಂಸ್ಕೃತಿಕ ಬೇರುಗಳನ್ನು ಒತ್ತಿ ಹೇಳಿದ ಪ್ರಧಾನಿ, ಪ್ರತಿಯೊಂದು ಬೀದಿಗೂ ಒಂದು ಕಥೆಯಿದೆ, ಪ್ರತಿಯೊಂದು ಪರ್ವತಕ್ಕೂ ಒಂದು ಹಾಡಿದೆ ಮತ್ತು ಪ್ರತಿಯೊಂದು ನದಿಯೂ ಒಂದು ರಾಗವನ್ನು ಹಾಡುತ್ತದೆ ಎಂದು ಹೇಳಿದರು. ಭಾರತದ ಆರು ಲಕ್ಷ ಹಳ್ಳಿಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಜಾನಪದ ಸಂಪ್ರದಾಯಗಳು ಮತ್ತು ವಿಶಿಷ್ಟ ಕಥೆ ಹೇಳುವ ಶೈಲಿಯನ್ನು ಹೊಂದಿದೆ, ಅಲ್ಲಿ ಸಮುದಾಯಗಳು ಜಾನಪದ ಗೀತೆಗಳ ಮೂಲಕ ತಮ್ಮ ಇತಿಹಾಸವನ್ನು ಸಂರಕ್ಷಿಸುತ್ತಿವೆ ಎಂದು ಅವರು ಹೇಳಿದರು. ಅವರು ಭಾರತೀಯ ಸಂಗೀತದ ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸಿದರು ಮತ್ತು ಅದು ಭಜನೆಗಳು, ಗಜಲ್ ಗಳು, ಶಾಸ್ತ್ರೀಯ ಸಂಯೋಜನೆಗಳು ಅಥವಾ ಸಮಕಾಲೀನ ರಾಗಗಳಾಗಿರಬಹುದು, ಪ್ರತಿಯೊಂದು ರಾಗಕ್ಕೂ ಒಂದು ಕಥೆ ಇರುತ್ತದೆ ಮತ್ತು ಪ್ರತಿಯೊಂದು ಲಯಕ್ಕೂ ಒಂದು ಆತ್ಮವಿದೆ ಎಂದು ಹೇಳಿದರು.
ಭಾರತದ ಆಳವಾಗಿ ಬೇರೂರಿರುವ ಕಲಾತ್ಮಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಮೋದಿ ಒತ್ತಿ ಹೇಳಿದರು, ದೈವಿಕ ಧ್ವನಿಯಾದ ನಾದಬ್ರಹ್ಮದ ಪರಿಕಲ್ಪನೆಯನ್ನು ಎತ್ತಿ ತೋರಿಸಿದರು. ಭಾರತೀಯ ಪುರಾಣಗಳು ಯಾವಾಗಲೂ ಸಂಗೀತ ಮತ್ತು ನೃತ್ಯದ ಮೂಲಕ ದೈವತ್ವವನ್ನು ವ್ಯಕ್ತಪಡಿಸಿವೆ ಎಂದು ಅವರು ಹೇಳಿದರು, ಶಿವನ ಡಮರುಗವನ್ನು ಮೊದಲ ವಿಶ್ವ ಧ್ವನಿಯಾಗಿ, ಸರಸ್ವತಿಯ ವೀಣೆಯನ್ನು ಜ್ಞಾನದ ಲಯವಾಗಿ, ಶ್ರೀಕೃಷ್ಣನ ಕೊಳಲನ್ನು ಪ್ರೀತಿಯ ಶಾಶ್ವತ ಸಂದೇಶವಾಗಿ ಮತ್ತು ವಿಷ್ಣುವಿನ ಶಂಖವನ್ನು ಸಕಾರಾತ್ಮಕ ಶಕ್ತಿಯ ಆವಾಹನೆಯಾಗಿ ಉಲ್ಲೇಖಿಸಿದರು. ಶೃಂಗಸಭೆಯಲ್ಲಿನ ಮೋಡಿಮಾಡುವ ಸಾಂಸ್ಕೃತಿಕ ಪ್ರಸ್ತುತಿಯು ಈ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಭಾರತದಲ್ಲಿ ಸೃಷ್ಟಿಸಿ, ಪ್ರಪಂಚಕ್ಕಾಗಿ ಸೃಷ್ಟಿಸಿ ಎಂಬ ಭಾರತದ ದೃಷ್ಟಿಕೋನವನ್ನು ಪುನರುಚ್ಚರಿಸಿದ ಅವರು “ಇದು ಸೂಕ್ತವಾದ ಸಮಯ” ಎಂದು ಘೋಷಿಸಿದರು.
ದೇಶದ ಕಥೆ ಹೇಳುವ ಸಂಪ್ರದಾಯವು ಸಾವಿರಾರು ವರ್ಷಗಳ ಅಮೂಲ್ಯವಾದ ನಿಧಿಯನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. ಭಾರತದ ಕಥೆಗಳು ಕಾಲಾತೀತ, ಚಿಂತನಶೀಲ ಮತ್ತು ನಿಜವಾಗಿಯೂ ಜಾಗತಿಕವಾಗಿದ್ದು, ಸಾಂಸ್ಕೃತಿಕ ವಿಷಯಗಳನ್ನು ಮಾತ್ರವಲ್ಲದೆ ವಿಜ್ಞಾನ, ಕ್ರೀಡೆ, ಧೈರ್ಯ ಮತ್ತು ಶೌರ್ಯವನ್ನು ಸಹ ಒಳಗೊಂಡಿವೆ ಎಂದು ಅವರು ಎತ್ತಿ ತೋರಿಸಿದರು. ಭಾರತದ ಕಥೆ ಹೇಳುವಿಕೆಯು ವಿಜ್ಞಾನ ಮತ್ತು ಕಲ್ಪನೆಯನ್ನು ಹಾಗೂ ಶೌರ್ಯ ಮತ್ತು ನಾವೀನ್ಯತೆಯನ್ನು ಸಮ್ಮಿಳಿತಗೊಳಿಸಿ, ವಿಶಾಲ ಮತ್ತು ವೈವಿಧ್ಯಮಯ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಭಾರತದ ಅಸಾಧಾರಣ ಕಥೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ, ಹೊಸ ಮತ್ತು ಆಕರ್ಷಕ ಸ್ವರೂಪಗಳ ಮೂಲಕ ಭವಿಷ್ಯದ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ವೇವ್ಸ್ ವೇದಿಕೆ ವಹಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಜನರ ಪದ್ಮ ಪ್ರಶಸ್ತಿಗಳು ಮತ್ತು ವೇವ್ಸ್ ಶೃಂಗಸಭೆಯ ಹಿಂದಿನ ದೃಷ್ಟಿಕೋನದ ನಡುವೆ ಹೋಲಿಕೆಗಳನ್ನು ವಿವರಿಸಿದ ಪ್ರಧಾನಿ, ಎರಡೂ ಉಪಕ್ರಮಗಳು ಭಾರತದ ಮೂಲೆ ಮೂಲೆಯಿಂದ ಪ್ರತಿಭೆಗಳನ್ನು ಗುರುತಿಸುವ ಮತ್ತು ಉನ್ನತೀಕರಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದರು. ಸ್ವಾತಂತ್ರ್ಯದ ಕೆಲವು ವರ್ಷಗಳ ನಂತರ ಪದ್ಮ ಪ್ರಶಸ್ತಿಗಳು ಪ್ರಾರಂಭವಾದರೂ, ಭಾರತವು ಜನರ ಪದ್ಮ ಪ್ರಶಸ್ತಿಯನ್ನು ಅಳವಡಿಸಿಕೊಂಡಾಗ ಅವು ನಿಜವಾಗಿಯೂ ರೂಪಾಂತರಗೊಂಡವು, ದೂರದ ಪ್ರದೇಶಗಳಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಲಾಯಿತು. ಈ ಬದಲಾವಣೆಯು ಪ್ರಶಸ್ತಿಗಳನ್ನು ಸಮಾರಂಭದಿಂದ ರಾಷ್ಟ್ರೀಯ ಆಚರಣೆಯಾಗಿ ಪರಿವರ್ತಿಸಿತು ಎಂದು ಅವರು ಒತ್ತಿ ಹೇಳಿದರು.
ಅದೇ ರೀತಿ, ಚಲನಚಿತ್ರಗಳು, ಸಂಗೀತ, ಅನಿಮೇಷನ್ ಮತ್ತು ಗೇಮಿಂಗ್ ನಲ್ಲಿ ಭಾರತದ ಅಪಾರ ಸೃಜನಶೀಲ ಪ್ರತಿಭೆಗೆ ವೇವ್ಸ್ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಶದ ಪ್ರತಿಯೊಂದು ಭಾಗದ ಕಲಾವಿದರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ವೈವಿಧ್ಯಮಯ ವಿಚಾರಗಳು ಮತ್ತು ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳುವ ಭಾರತದ ಸಂಪ್ರದಾಯವನ್ನು ಒತ್ತಿಹೇಳಿದ ಮೋದಿ ಸಂಸ್ಕೃತ ನುಡಿಗಟ್ಟೊಂದನ್ನು ಉಲ್ಲೇಖಿಸುತ್ತಾ, ಭಾರತದ ನಾಗರಿಕತೆಯ ಮುಕ್ತತೆಯು ಪಾರ್ಸಿಗಳು ಮತ್ತು ಯಹೂದಿಗಳಂತಹ ಸಮುದಾಯಗಳನ್ನು ಸ್ವಾಗತಿಸಿದೆ, ಎಂಅವರು ದೇಶದಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅದರ ಸಾಂಸ್ಕೃತಿಕ ರಚನೆಯ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಒತ್ತಿ ಹೇಳಿದರು. ವಿವಿಧ ದೇಶಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು, ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ಯಶಸ್ಸು ಮತ್ತು ಕೊಡುಗೆಗಳನ್ನು ಹೊಂದಿದೆ ಎಂದು ಹೇಳಿದರು.
ಜಾಗತಿಕ ಕಲಾತ್ಮಕ ಸಾಧನೆಗಳನ್ನು ಗೌರವಿಸುವುದು ಮತ್ತು ಆಚರಿಸುವುದು, ಸೃಜನಶೀಲ ಸಹಯೋಗಕ್ಕೆ ದೇಶದ ಬದ್ಧತೆಯನ್ನು ಬಲಪಡಿಸುವುದು ಭಾರತದ ಶಕ್ತಿಯಾಗಿದೆ ಎಂದು ಅವರು ಹೇಳಿದರು. ವಿಭಿನ್ನ ಸಂಸ್ಕೃತಿಗಳು ಮತ್ತು ರಾಷ್ಟ್ರಗಳ ಸಾಧನೆಗಳನ್ನು ಪ್ರತಿಬಿಂಬಿಸುವ ಕಂಟೆಂಟ್ ರಚಿಸುವ ಮೂಲಕ, ವೇವ್ಸ್ ಜಾಗತಿಕ ಸಂಪರ್ಕ ಮತ್ತು ಕಲಾತ್ಮಕ ವಿನಿಮಯದ ದೃಷ್ಟಿಕೋನವನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಜಾಗತಿಕ ಕಂಟೆಂಟ್ ಸೃಷ್ಟಿಕರ್ತ ಸಮುದಾಯಕ್ಕೆ ಆಹ್ವಾನವನ್ನು ನೀಡಿದ ಪ್ರಧಾನಮಂತ್ರಿಯವರು, ಭಾರತದ ಕಥೆಗಳೊಂದಿಗೆ ತೊಡಗಿಸಿಕೊಳ್ಳುವುದರಿಂದ ಅವರ ಸ್ವಂತ ಸಂಸ್ಕೃತಿಗಳೊಂದಿಗೆ ಆಳವಾಗಿ ಪ್ರತಿಧ್ವನಿಸುವ ನಿರೂಪಣೆಗಳು ತೆರೆದುಕೊಳ್ಳುತ್ತವೆ ಎಂದರು. ಭಾರತದ ಶ್ರೀಮಂತ ಕಥೆ ಹೇಳುವ ಸಂಪ್ರದಾಯವು ಗಡಿಗಳನ್ನು ಮೀರಿದ ವಿಷಯಗಳು ಮತ್ತು ಭಾವನೆಗಳನ್ನು ಹೊಂದಿದ್ದು, ಸಹಜ ಮತ್ತು ಅರ್ಥಪೂರ್ಣ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಭಾರತದ ಕಥೆಗಳನ್ನು ಅನ್ವೇಷಿಸುವ ಅಂತರರಾಷ್ಟ್ರೀಯ ಕಲಾವಿದರು ಮತ್ತು ಕಂಟೆಂಟ್ ಸೃಷ್ಟಿಕರ್ತರು ರಾಷ್ಟ್ರದ ಪರಂಪರೆಯೊಂದಿಗೆ ಸಹಜ ಬಂಧದ ಅನುಭವ ಪಡೆಯುತ್ತಾರೆ ಎಂದು ಅವರು ಹೇಳಿದರು. ಈ ಸಾಂಸ್ಕೃತಿಕ ಸಮನ್ವಯವು ಭಾರತದ ಕ್ರಿಯೇಟ್ ಇನ್ ಇಂಡಿಯಾ ದೃಷ್ಟಿಕೋನವನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ ಮತ್ತು ಜಗತ್ತಿಗೆ ಲಭ್ಯವಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
“ಭಾರತದಲ್ಲಿ ಸೃಜನಶೀಲ ಆರ್ಥಿಕತೆಯ (ಕಿತ್ತಳೆ ಆರ್ಥಿಕತೆ) ಉದಯಕ್ಕೆ ಇದು ಸಕಾಲ. ಕಂಟೆಂಟ್, ಸೃಜನಶೀಲತೆ ಮತ್ತು ಸಂಸ್ಕೃತಿ – ಕಿತ್ತಳೆ ಆರ್ಥಿಕತೆಯ ಮೂರು ಸ್ತಂಭಗಳು ಎಂದು ಮೋದಿ ಹೇಳಿದರು.
ಭಾರತೀಯ ಚಲನಚಿತ್ರಗಳು ಈಗ 100ಕ್ಕೂ ಹೆಚ್ಚು ದೇಶಗಳ ಪ್ರೇಕ್ಷಕರನ್ನು ತಲುಪಿವೆ, ಜಾಗತಿಕ ವೀಕ್ಷಕರು ಭಾರತೀಯ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅಂತರರಾಷ್ಟ್ರೀಯ ಪ್ರೇಕ್ಷಕರು ಭಾರತೀಯ ಕಂಟೆಂಟ್ ಅನ್ನು ಉಪಶೀರ್ಷಿಕೆಗಳೊಂದಿಗೆ ನೋಡುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಅವರು ಎತ್ತಿ ತೋರಿಸಿದರು, ಇದು ಭಾರತದ ಕಥೆಗಳೊಂದಿಗೆ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ಸೂಚಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಒಟಿಟಿ ಉದ್ಯಮವು ಹತ್ತು ಪಟ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಮೋದಿ ಹೇಳಿದರು.
ಪರದೆಯ ಗಾತ್ರಗಳು ಕುಗ್ಗುತ್ತಿದ್ದರೂ, ವಿಷಯದ ವ್ಯಾಪ್ತಿ ಅನಂತವಾಗಿದೆ, ಸಣ್ಣ ಪರದೆಗಳು ಬೃಹತ್ ಸಂದೇಶಗಳನ್ನು ನೀಡುತ್ತಿವೆ ಎಂದು ಹೇಳಿದರು. ಭಾರತೀಯ ಪಾಕಪದ್ಧತಿಯು ಜಾಗತಿಕವಾಗಿ ನೆಚ್ಚಿನದಾಗುತ್ತಿದೆ ಎಂದು ಅವರು ಹೇಳಿದರು. ಭಾರತೀಯ ಸಂಗೀತವು ಶೀಘ್ರದಲ್ಲೇ ವಿಶ್ವಾದ್ಯಂತ ಇದೇ ರೀತಿಯ ಮನ್ನಣೆಯನ್ನು ಪಡೆಯುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಭಾರತದ ಸೃಜನಶೀಲ ಆರ್ಥಿಕತೆಯ ಅಗಾಧ ಸಾಮರ್ಥ್ಯವನ್ನು ಒತ್ತಿಹೇಳುತ್ತಾ, ಮುಂಬರುವ ವರ್ಷಗಳಲ್ಲಿ ದೇಶದ ಜಿಡಿಪಿಗೆ ಅದರ ಕೊಡುಗೆ ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ಹೇಳಿದರು. “ಭಾರತವು ಚಲನಚಿತ್ರ ನಿರ್ಮಾಣ, ಡಿಜಿಟಲ್ ಕಂಟೆಂಟ್, ಗೇಮಿಂಗ್, ಫ್ಯಾಷನ್ ಮತ್ತು ಸಂಗೀತಕ್ಕೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ” ಎಂದು ಅವರು ಹೇಳಿದರು.
ನೇರ ಸಂಗೀತ ಗೋಷ್ಠಿ ಉದ್ಯಮದಲ್ಲಿ ಭರವಸೆಯ ಅವಕಾಶಗಳು ಮತ್ತು ಜಾಗತಿಕ ಅನಿಮೇಷನ್ ಮಾರುಕಟ್ಟೆಯಲ್ಲಿನ ವಿಶಾಲ ಸಾಮರ್ಥ್ಯದ ಬಗ್ಗೆ ಅವರು ಮಾತನಾಡಿದರು. ಇದು ಪ್ರಸ್ತುತ 430 ಶತಕೋಟಿ ಡಾಲರ್ ಗಿಂತ ಹೆಚ್ಚಿದೆ ಮತ್ತು ಮುಂದಿನ ದಶಕದಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಇದು ಭಾರತದ ಅನಿಮೇಷನ್ ಮತ್ತು ಗ್ರಾಫಿಕ್ಸ್ ಉದ್ಯಮಕ್ಕೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು, ಹೆಚ್ಚಿನ ಅಂತರರಾಷ್ಟ್ರೀಯ ವ್ಯಾಪ್ತಿಗಾಗಿ ಈ ವಿಸ್ತರಣೆಯನ್ನು ಬಳಸಿಕೊಳ್ಳುವಂತೆ ಪಾಲುದಾರರಿಗೆ ಕರೆ ನೀಡಿದರು.
ಭಾರತದ ಯುವ ಸೃಷ್ಟಿಕರ್ತರು ದೇಶದ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಬೇಕೆಂದು ಅವರು ಕರೆ ನೀಡಿದರು. ಅವರ ಉತ್ಸಾಹ ಮತ್ತು ಕಠಿಣ ಪರಿಶ್ರಮವು ಸೃಜನಶೀಲತೆಯ ಹೊಸ ಅಲೆಯನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದ ಮೋದಿ, ಅವರು ಗುವಾಹಟಿಯ ಸಂಗೀತಗಾರರಾಗಿರಲಿ, ಕೊಚ್ಚಿಯ ಪಾಡ್ಕ್ಯಾಸ್ಟರ್ ಗಳಾಗಿರಲಿ, ಬೆಂಗಳೂರಿನ ಗೇಮ್ ವಿನ್ಯಾಸಕರಾಗಿರಲಿ ಅಥವಾ ಪಂಜಾಬಿನನ ಚಲನಚಿತ್ರ ನಿರ್ಮಾಪಕರಾಗಿರಲಿ, ಅವರ ಕೊಡುಗೆಗಳು ಭಾರತದ ಬೆಳೆಯುತ್ತಿರುವ ಸೃಜನಶೀಲ ವಲಯವನ್ನು ಉತ್ತೇಜಿಸುತ್ತಿವೆ ಎಂದು ಒತ್ತಿ ಹೇಳಿದರು.
ಸರ್ಕಾರವು ಸೃಜನಶೀಲ ವೃತ್ತಿಪರರ ಹಿಂದೆ ದೃಢವಾಗಿ ನಿಂತಿದೆ, ಸ್ಕಿಲ್ ಇಂಡಿಯಾ, ನವೋದ್ಯಮಕ್ಕೆ ಬೆಂಬಲ, ಎವಿಜಿಸಿ ಉದ್ಯಮಕ್ಕಾಗಿ ನೀತಿಗಳು ಮತ್ತು ವೇವ್ಸ್ ನಂತಹ ಜಾಗತಿಕ ವೇದಿಕೆಗಳ ಮೂಲಕ ಅವರನ್ನು ಬೆಂಬಲಿಸುತ್ತದೆ ಎಂದು ಅವರು ಭರವಸೆ ನೀಡಿದರು. ನಾವೀನ್ಯತೆ ಮತ್ತು ಕಲ್ಪನೆಗೆ ಮೌಲ್ಯಯುತವಾದ ವಾತಾವರಣವನ್ನು ನಿರ್ಮಿಸಲು, ಹೊಸ ಕನಸುಗಳನ್ನು ಉತ್ತೇಜಿಸಲು ಮತ್ತು ಆ ಕನಸುಗಳನ್ನು ಸಾಕಾರಗೊಳಿಸಲು ವ್ಯಕ್ತಿಗಳನ್ನು ಸಬಲೀಕರಣಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸೃಜನಶೀಲತೆಯು ಕೋಡಿಂಗ್ ಅನ್ನು ಸಂಧಿಸುವ, ಕಥೆ ಹೇಳುವಿಕೆಯೊಂದಿಗೆ ಸಾಫ್ಟ್‌ವೇರ್ ಮಿಳಿತವಾಗುವ ಮತ್ತು ವರ್ಧಿತ ರಿಯಾಲಿಟಿಯೊಂದಿಗೆ ಕಲೆಯು ವಿಲೀನಗೊಳ್ಳುವ ಪ್ರಮುಖ ವೇದಿಕೆಯಾಗಿ ವೇವ್ಸ್ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು, ದೊಡ್ಡ ಕನಸು ಕಾಣಲು ಮತ್ತು ತಮ್ಮ ದೃಷ್ಟಿಕೋನಗಳನ್ನು ಸಾಕಾರಗೊಳಿಸಲು ಪ್ರಯತ್ನಗಳನ್ನು ಮುಡಿಪಾಗಿಡಲು ಅವರು ಯುವ ಸೃಷ್ಟಿಕರ್ತರನ್ನು ಒತ್ತಾಯಿಸಿದರು.
ಭಾರತದ ಕಂಟೆಂಟ್ ರಚನೆಕಾರರ ಬಗ್ಗೆ ಪ್ರಧಾನಿ ತಮ್ಮ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದರು, ಅವರ ಮುಕ್ತವಾಗಿ ಹರಿಯುವ ಸೃಜನಶೀಲತೆಯು ಜಾಗತಿಕ ಸೃಜನಶೀಲ ಭೂದೃಶ್ಯವನ್ನು ಮರು ವ್ಯಾಖ್ಯಾನಿಸುತ್ತಿದೆ ಎಂದು ಹೇಳಿದರು.
ಭಾರತದ ಕಂಟೆಂಟ್ ಸೃಷ್ಟಿಕರ್ತರ ಯುವ ಚೈತನ್ಯವು ಯಾವುದೇ ಅಡೆತಡೆಗಳು, ಗಡಿಗಳು ಅಥವಾ ಹಿಂಜರಿಕೆಗಳನ್ನು ಹೊಂದಿಲ್ಲ, ಇದು ನಾವೀನ್ಯತೆಯು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು. ಯುವ ಸೃಷ್ಟಿಕರ್ತರು, ಗೇಮರ್ ಗಳು ಮತ್ತು ಡಿಜಿಟಲ್ ಕಲಾವಿದರೊಂದಿಗಿನ ತಮ್ಮ ವೈಯಕ್ತಿಕ ಸಂವಾದದ ಮೂಲಕ, ಭಾರತದ ಸೃಜನಶೀಲ ಪರಿಸರ ವ್ಯವಸ್ಥೆಯಿಂದ ಹೊರಹೊಮ್ಮುವ ಶಕ್ತಿ ಮತ್ತು ಪ್ರತಿಭೆಯನ್ನು ತಾವು ನೇರವಾಗಿ ಕಂಡಿರುವುದಾಗಿ ಅವರು ಹೇಳಿದರು. ಭಾರತದ ಬೃಹತ್ ಯುವ ಜನಸಂಖ್ಯೆಯು ರೀಲ್ ಗಳು, ಪಾಡ್ಕ್ಯಾಸ್ಟ್ ಗಳು ಮತ್ತು ಆಟಗಳಿಂದ ಅನಿಮೇಷನ್, ಸ್ಟ್ಯಾಂಡ್-ಅಪ್ ಮತ್ತು ಎಆರ್-ವಿಆರ್ ಸ್ವರೂಪಗಳವರೆಗೆ ಹೊಸ ಸೃಜನಶೀಲ ಆಯಾಮಗಳನ್ನು ನಡೆಸುತ್ತಿದೆ ಎಂದು ಅವರು ಶ್ಲಾಘಿಸಿದರು. ವೇವ್ಸ್, ಈ ಪೀಳಿಗೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೇದಿಕೆಯಾಗಿದೆ. ಇದು ಯುವ ಮನಸ್ಸುಗಳು ತಮ್ಮ ಶಕ್ತಿ ಮತ್ತು ದಕ್ಷತೆಯೊಂದಿಗೆ ಸೃಜನಶೀಲ ಕ್ರಾಂತಿಯನ್ನು ಮರುಕಲ್ಪಿಸಿಕೊಳ್ಳಲು ಮತ್ತು ಮರು ವ್ಯಾಖ್ಯಾನಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು.
ತಂತ್ರಜ್ಞಾನ ಆಧಾರಿತ 21ನೇ ಶತಮಾನದಲ್ಲಿ ಸೃಜನಶೀಲತೆಯ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳಿದ ಮೋದಿ, ತಂತ್ರಜ್ಞಾನವು ಮಾನವ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವುದರಿಂದ, ಭಾವನಾತ್ಮಕ ಸಂವೇದನೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಂರಕ್ಷಿಸಲು ಹೆಚ್ಚುವರಿ ಪ್ರಯತ್ನಗಳು ಅಗತ್ಯವಾಗಿವೆ ಎಂದು ಒತ್ತಿ ಹೇಳಿದರು. ಸೃಜನಶೀಲ ಜಗತ್ತು ಮಾನವ ಸಹಾನುಭೂತಿಯನ್ನು ಹೆಚ್ಚಿಸುವ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಗಾಢವಾಗಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ರೋಬೋಟ್ ಗಳನ್ನು ಸೃಷ್ಟಿಸುವುದು ಗುರಿಯಲ್ಲ, ಬದಲಾಗಿ ಹೆಚ್ಚಿನ ಸಂವೇದನೆ, ಭಾವನಾತ್ಮಕ ಆಳ ಮತ್ತು ಬೌದ್ಧಿಕ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿಗಳನ್ನು ಪೋಷಿಸುವುದು ಗುರಿಯಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಕಲೆ, ಸಂಗೀತ, ನೃತ್ಯ ಮತ್ತು ಕಥೆ ಹೇಳುವಿಕೆಯ ಮಹತ್ವವನ್ನು ಒತ್ತಿ ಹೇಳಿದ ಮೋದಿ, ಈ ಪ್ರಕಾರಗಳು ಸಾವಿರಾರು ವರ್ಷಗಳಿಂದ ಮಾನವ ಸಂವೇದನೆಗಳನ್ನು ಜೀವಂತವಾಗಿಟ್ಟಿವೆ ಎಂದು ಹೇಳಿದರು.
ಈ ಪರಂಪರೆಗಳನ್ನು ಬಲಪಡಿಸಲು ಮತ್ತು ಹೆಚ್ಚು ಸಹಾನುಭೂತಿಯ ಭವಿಷ್ಯವನ್ನು ನಿರ್ಮಿಸಲು ಅವರು ಸೃಜನಶೀಲರಿಗೆ ಕರ ನೀಡಿದರು. ಯುವ ಪೀಳಿಗೆಯನ್ನು ವಿಭಜಕ ಮತ್ತು ಹಾನಿಕಾರಕ ಸಿದ್ಧಾಂತಗಳಿಂದ ರಕ್ಷಿಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು, ಸಾಂಸ್ಕೃತಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಸಕಾರಾತ್ಮಕ ಮೌಲ್ಯಗಳನ್ನು ತುಂಬಲು ವೇವ್ಸ್ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು. ಈ ಜವಾಬ್ದಾರಿಯನ್ನು ನಿರ್ಲಕ್ಷಿಸುವುದರಿಂದ ಭವಿಷ್ಯದ ಪೀಳಿಗೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.
ಸೃಜನಶೀಲ ಜಗತ್ತಿನ ಮೇಲೆ ತಂತ್ರಜ್ಞಾನದ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಿ, ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಜಾಗತಿಕ ಸಮನ್ವಯದ ಮಹತ್ವವನ್ನು ಎತ್ತಿ ತೋರಿಸಿದರು. ವೇವ್ಸ್ ಭಾರತೀಯ ಸೃಷ್ಟಿಕರ್ತರನ್ನು ಜಾಗತಿಕ ಕಥೆಗಾರರೊಂದಿಗೆ, ಅನಿಮೇಟರ್ ಗಳನ್ನು ಜಾಗತಿಕ ದಾರ್ಶನಿಕರೊಂದಿಗೆ ಸಂಪರ್ಕಿಸಲು ಮತ್ತು ಗೇಮರ್ ಗಳನ್ನು ಜಾಗತಿಕ ಚಾಂಪಿಯನ್ ಗಳಾಗಿ ಪರಿವರ್ತಿಸಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಭಾರತವನ್ನು ತಮ್ಮ ಕಂಟೆಂಟ್ ಆಟದ ಮೈದಾನವಾಗಿ ಸ್ವೀಕರಿಸಲು ಮತ್ತು ದೇಶದ ವಿಶಾಲವಾದ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಅನ್ವೇಷಿಸಲು ಅವರು ಅಂತಾರಾಷ್ಟ್ರೀಯ ಹೂಡಿಕೆದಾರರು ಮತ್ತು ಸೃಷ್ಟಿಕರ್ತರಿಗೆ ಆಹ್ವಾನ ನೀಡಿದರು. ಜಾಗತಿಕ ಸೃಷ್ಟಿಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೊಡ್ಡ ಕನಸು ಕಾಣುವಂತೆ ಮತ್ತು ತಮ್ಮ ಕಥೆಯನ್ನು ಹೇಳುವಂತೆ ಒತ್ತಾಯಿಸಿದರು.
ಹೂಡಿಕೆದಾರರು ವೇದಿಕೆಗಳಲ್ಲಿ ಮಾತ್ರವಲ್ಲ, ಜನರಲ್ಲಿಯೂ ಹೂಡಿಕೆ ಮಾಡುವಂತೆ ಅವರು ಪ್ರೋತ್ಸಾಹಿಸಿದರು ಮತ್ತು ಭಾರತೀಯ ಯುವಜನರು ತಮ್ಮ ಒಂದು ಶತಕೋಟಿ ಹೇಳದ ಕಥೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದರು. ಉದ್ಘಾಟನಾ ವೇವ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.
ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಡಾ. ಎಲ್. ಮುರುಗನ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ವೇವ್ಸ್ 2025 ನಾಲ್ಕು ದಿನಗಳ ಶೃಂಗಸಭೆಯಾಗಿದ್ದು, “ಸೃಷ್ಟಿಕರ್ತರ ನಡುವಿನ ಸಂಪರ್ಕಸೇತು, ದೇಶಗಳ ನಡುವಿನ ಸಂಪರ್ಕಸೇತು” ಎಂಬ ಧ್ಯೇಯವಾಕ್ಯದೊಂದಿಗೆ, ಪ್ರಪಂಚದಾದ್ಯಂತದ ಕಂಟೆಂಟ್ ಸೃಷ್ಟಿಕರ್ತರು, ನವೋದ್ಯಮಗಳು, ಉದ್ಯಮ ನಾಯಕರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುವ ಮೂಲಕ ಭಾರತವನ್ನು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಸಜ್ಜಾಗಿದೆ.
ಉಜ್ವಲ ಭವಿಷ್ಯವನ್ನು ರೂಪಿಸಲು ಸೃಜನಶೀಲತೆ, ತಂತ್ರಜ್ಞಾನ ಮತ್ತು ಪ್ರತಿಭೆಯನ್ನು ಬಳಸಿಕೊಳ್ಳುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ವೇವ್ಸ್ ಚಲನಚಿತ್ರಗಳು, ಒಟಿಟಿ, ಗೇಮಿಂಗ್, ಕಾಮಿಕ್ಸ್, ಡಿಜಿಟಲ್ ಮಾಧ್ಯಮ, ಎಐ, ಎವಿಜಿಸಿ-ಎಕ್ಸ್ ಆರ್, ಪ್ರಸಾರ ಮತ್ತು ಉದಯೋನ್ಮುಖ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ, ಇದು ಭಾರತದ ಮಾಧ್ಯಮ ಮತ್ತು ಮನರಂಜನಾ ಪಾರಮ್ಯದ ಸಮಗ್ರ ಪ್ರದರ್ಶನವಾಗಿದೆ. ಜಾಗತಿಕ ಮನರಂಜನಾ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುವ ಮೂಲಕ 2029 ರ ವೇಳೆಗೆ 50 ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ತೆರೆಯುವ ಗುರಿಯನ್ನು ವೇವ್ಸ್ ಹೊಂದಿದೆ.
ವೇವ್ಸ್ 2025 ರಲ್ಲಿ, ಭಾರತವು ಮೊದಲ ಬಾರಿಗೆ ಜಾಗತಿಕ ಮಾಧ್ಯಮ ಸಂವಾದ (ಜಿಎಂಡಿ) ವನ್ನು ಆಯೋಜಿಸುತ್ತಿದೆ, ಇದರಲ್ಲಿ 25 ದೇಶಗಳ ಸಚಿವರು ಭಾಗವಹಿಸಲಿದ್ದಾರೆ, ಇದು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಭೂದೃಶ್ಯದೊಂದಿಗೆ ದೇಶದ ತೊಡಗಿಸಿಕೊಳ್ಳುವಿಕೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಶೃಂಗಸಭೆಯು 6,100 ಕ್ಕೂ ಹೆಚ್ಚು ಖರೀದಿದಾರರು, 5,200 ಮಾರಾಟಗಾರರು ಮತ್ತು 2,100 ಯೋಜನೆಗಳನ್ನು ಹೊಂದಿರುವ ಜಾಗತಿಕ ಇ-ಮಾರುಕಟ್ಟೆ ತಾಣವಾದ ವೇವ್ಸ್ ಬಜಾರ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ, ವ್ಯಾಪಕ ನೆಟ್ವರ್ಕಿಂಗ್ ಮತ್ತು ವ್ಯಾಪಾರ ಅವಕಾಶಗಳನ್ನು ಖಚಿತಪಡಿಸುತ್ತದೆ.
ಪ್ರಧಾನಮಂತ್ರಿ ಅವರು ಕ್ರಿಯೇಟೋಸ್ಪಿಯರ್ಗೆ ಭೇಟಿ ನೀಡಿ, ಸುಮಾರು ಒಂದು ವರ್ಷದ ಹಿಂದೆ ಪ್ರಾರಂಭಿಸಲಾದ 32 ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಗಳಿಂದ ಆಯ್ಕೆಯಾದ ಸೃಷ್ಟಿಕರ್ತರೊಂದಿಗೆ ಸಂವಾದ ನಡೆಸಿದರು, ಈ ಸವಾಲುಗಳು ಒಂದು ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ಗಳಿಸಿವೆ. ಅವರು ಭಾರತ್ ಪೆವಿಲಿಯನ್ ಗೆ ಸಹ ಭೇಟಿ ನೀಡಲಿದ್ದಾರೆ.
ವೇವ್ಸ್ 2025ರಲ್ಲಿ 90ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿದ್ದು, 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 1,000 ಸೃಷ್ಟಿಕರ್ತರು, 300ಕ್ಕೂ ಹೆಚ್ಚು ಕಂಪನಿಗಳು ಮತ್ತು 350ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಲಿವೆ. ಈ ಶೃಂಗಸಭೆಯು ಪ್ರಸಾರ, ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್ ಆರ್, ಚಲನಚಿತ್ರ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ 42 ಸಮಗ್ರ ಅಧಿವೇಶನಗಳು, 39 ಬ್ರೇಕ್ ಔಟ್ ಅಧಿವೇಶನಗಳು ಮತ್ತು 32 ಮಾಸ್ಟರ್ ಕ್ಲಾಸ್ ಗಳನ್ನು ಒಳಗೊಂಡಿರುತ್ತದೆ.
ಪ್ರಯಾಣಿಕರ ಗಮನಕ್ಕೆ: ಮಾಲ್ಗುಡಿ ಎಕ್ಸ್ ಪ್ರೆಸ್, ಪ್ಯಾಸೆಂಜರ್ ರೈಲು ವೇಳಾಪಟ್ಟಿ ಪರಿಷ್ಕರಣೆ