ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಮನೆಗೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕಾಗಿ 250 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಮಂಜೂರಾತಿಯಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ವಿಜಯನಗರ ಬಡಾವಣೆಯಲ್ಲಿ ಗುರುವಾರ ಯುವ ಸಬಲೀಕರಣ ಇಲಾಖೆಯಿಂದ ನವೀಕೃತಗೊಂಡ ಈಜುಕೊಳದ ಲೋಕಾರ್ಪಣೆ ಹಾಗೂ ಈಜು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಜನರಿಗೆ ಶುದ್ದ ಕುಡಿಯುವ ನೀರನ್ನು ಶರಾವತಿ ಹಿನ್ನೀರಿನಿಂದ ತರುವ ಯೋಜನೆ ಇನ್ನಷ್ಟು ಸಶಕ್ತಗೊಳಿಸಲಾಗುತ್ತಿದೆ ಎಂದು ಹೇಳಿದರು.
ವಿಜಯನಗರ ಬಡಾವಣೆ ಈಜುಕೊಳ 2008ರಲ್ಲಿ ನನ್ನ ಅವಧಿಯಲ್ಲಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿತ್ತು. ನಂತರ ಕಾಗೋಡು ತಿಮ್ಮಪ್ಪ ಅವರು 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಂತರ ಬಂದವರು ತರಾತುರಿಯಲ್ಲಿ ಈಜುಕೋಳ ಉದ್ಘಾಟಿಸಿದ್ದರು. ಆದರೆ ಇಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿರಲಿಲ್ಲ. ಈಜುಕೊಳ ಸಂಪೂರ್ಣ ಹಾಳಾಗಿದ್ದರಿಂದ ಮೂರು ವರ್ಷಗಳ ಕಾಲ ಮುಚ್ಚಿಹೋಗಿತ್ತು. ನಾನು ಶಾಸಕನಾಗಿ ಬಂದ ಮೇಲೆ ಮಕ್ಕಳಿಗೆ ಈಜು ತರಬೇತಿ ಅಗತ್ಯತೆ ಮನಗಂಡು 49 ಲಕ್ಷ ರೂ. ಮಂಜೂರು ಮಾಡಿಸಿ ಈಜುಕೊಳ ಪುನರ್ ನವೀಕರಣ ಮಾಡಿಸಿದ್ದೇನೆ. ಮಕ್ಕಳು ಬೇಸಿಗೆ ರಜೆ ಸಂದರ್ಭದಲ್ಲಿ ನದಿ ಕೆರೆ ಹೊಳೆಗಳಿಗೆ ಈಜಲು ಹೋಗಿ ಅಪಾಯ ತಂದಿಟ್ಟುಕೊಳ್ಳುತ್ತಾರೆ. ಪೋಷಕರು ಮಕ್ಕಳನ್ನು ಈಜುಕೊಳಕ್ಕೆ ಈಜು ಕಲಿಯಲು ಕಲಿಸಿ, ಮಕ್ಕಳ ಅಮೂಲ್ಯ ಪ್ರಾಣ ಉಳಿಸಿ ಎಂದು ಕರೆ ನೀಡಿದರು.
ತಾಲ್ಲೂಕನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. 190 ಕೋಟಿ ರೂ. ವೆಚ್ಚದಲ್ಲಿ ಜೋಗ ಜಲಪಾತ ಅಭಿವೃದ್ದಿ ಮಾಡಲಾಗುತ್ತಿದ್ದು 90 ಕೋಟಿ ರೂ. ಮಂಜೂರಾಗಿದೆ. ಸರ್ವಋತು ಜಲಪಾತದ ಜೊತೆಗೆ ರೋಪ್‍ವೇ, ಈಜುಕೊಳ, ರೈನ್ ಡ್ಯಾನ್ಸ್ ಇನ್ನಿತರೆ ಅಭಿವೃದ್ದಿ ಕೆಲಸಕ್ಕೆ ಯೋಜನೆ ರೂಪಿಸಿದೆ. ಸಿಂಗಾಪುರ ಮಾದರಿಯಲ್ಲಿ ಜೋಗ ಜಲಪಾತದ ಸಮೀಪ ಗ್ಲಾಸ್ ಹೌಸ್ ನಿರ್ಮಿಸಲು ಚಿಂತನೆ ನಡೆಸಿದೆ. ಸದ್ಯದಲ್ಲಿಯೆ ಸಿಂಗಾಪುರಕ್ಕ ಹೋಗಿ ಸ್ಥಳ ಪರಿಶೀಲನೆ ನಡೆಸಿಕೊಂಡು ಬರಲಾಗುತ್ತದೆ. ಒಳಚರಂಡಿ ವ್ಯವಸ್ಥೆ, ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸುವುದು, ಪ್ರತಿವಾರ್ಡ್‍ನಲ್ಲಿ ಪಕ್ಷಾತೀತವಾಗಿ ರಸ್ತೆ, ಪಾರ್ಕ್ ಅಭಿವೃದ್ದಿಗೆ ಒತ್ತು ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಮಧುಮಾಲತಿ, ನಾದೀರಾ, ಉಷಾ ಗುರುಮೂರ್ತಿ, ಉಮೇಶ್, ಜಾಕೀರ್, ಕುಸುಮ ಸುಬ್ಬಣ್ಣ, ಶಂಕರ ಅಳ್ವಿಕೋಡಿ, ಎಲ್.ಚಂದ್ರಪ್ಪ, ಹಮೀದ್, ಸರಸ್ವತಿ ನಾಗರಾಜ್, ರವಿಕುಮಾರ್, ಪ್ರಮುಖರಾದ ಎಂ.ಆರ್.ಹುಚ್ಚಪ್ಪ ರೇಖ್ಯಾನಾಯ್ಕರ್, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು. ಶ್ರೀಧರ ಅವಧಾನಿ ಪ್ರಾರ್ಥಿಸಿದರು. ಎಚ್.ಕೆ.ನಾಗಪ್ಪ ಸ್ವಾಗತಿಸಿದರು. ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.
ಬೆಂಗಳೂರಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ