ನವದೆಹಲಿ:ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಶೇಕಡಾ 20ರಷ್ಟು ಭಾಗ ಹಾದುಹೋಗುವ ‘ಹಾರ್ಮುಜ್ ಜಲಸಂಧಿ’ಯ ಭದ್ರತೆಯಿಂದ ಅಮೆರಿಕ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿಶ್ವದ 60ಕ್ಕೂ ಹೆಚ್ಚು ಪ್ರಮುಖ ರಾಷ್ಟ್ರಗಳು ಒಗ್ಗೂಡಿ ಪರ್ಯಾಯ ವ್ಯವಸ್ಥೆ ಅಥವಾ ‘ಪ್ಲಾನ್ ಬಿ’ (Plan B) ರೂಪಿಸಲು ಮುಂದಾಗಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಭವನೀಯ ನಿರ್ಧಾರವು ಜಾಗತಿಕ ಇಂಧನ ಭದ್ರತೆಗೆ ಸವಾಲೊಡ್ಡಿದೆ.
ಅಮೆರಿಕವು ಹಾರ್ಮುಜ್ ಜಲಸಂಧಿಯ ಭದ್ರತೆಗಾಗಿ ಪ್ರತಿ ವರ್ಷ ಕೋಟ್ಯಂತರ ಡಾಲರ್ ವ್ಯಯಿಸುತ್ತಿದೆ. ಆದರೆ, ಅಧ್ಯಕ್ಷ ಟ್ರಂಪ್ ಅವರು “ನಮ್ಮ ಹಿತಾಸಕ್ತಿ ಇಲ್ಲದ ಕಡೆ ನಾವು ಹಣ ಮತ್ತು ಸೈನಿಕರನ್ನು ವ್ಯಯಿಸುವುದಿಲ್ಲ” ಎಂಬ ನಿಲುವು ತಳೆದಿದ್ದಾರೆ ಎನ್ನಲಾಗಿದೆ.ಭಾರತವು ತನ್ನ ಕಚ್ಚಾ ತೈಲದ ಬಹುಪಾಲು ಪಾಲನ್ನು ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ಅಮೆರಿಕ ತನ್ನ ನೌಕಾಪಡೆಯನ್ನು ಇಲ್ಲಿಂದ ಹಿಂಪಡೆದರೆ, ಇರಾನ್ ಅಥವಾ ಇತರ ಶಕ್ತಿಗಳು ಈ ಮಾರ್ಗವನ್ನು ಬಂದ್ ಮಾಡುವ ಭೀತಿಯಿದೆ.
ಅಮೆರಿಕ ಹಿಂದೆ ಸರಿದರೆ, ಭಾರತ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳು ಸೇರಿ ಜಂಟಿ ನೌಕಾ ಪಡೆಯನ್ನು ರಚಿಸಿ ಈ ಮಾರ್ಗಕ್ಕೆ ರಕ್ಷಣೆ ನೀಡುವ ಕುರಿತು ಗಂಭೀರ ಚರ್ಚೆ ನಡೆಸುತ್ತಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರಲಿವೆ. ಇದು ಭಾರತದಂತಹ ದೇಶಗಳ ಅರ್ಥವ್ಯವಸ್ಥೆಯ ಮೇಲೆ ಭಾರಿ ಹೊರೆ ತರಬಹುದು.








