ಬೆಳಗಾವಿ : ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಸ್ವಲ್ಪ ಹೆಚ್ಚಿಸಿ, ಅದರಿಂದ ಬರುವ ಆದಾಯವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯ ಯಮನಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರಮಿಕ ತಾತ್ಕಾಲಿಕ ವಸತಿ ಸಮಚ್ಚಯ ಉದ್ಘಾಟನೆ ಹಾಗೂ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿದ ಸಚಿವರು, ಕೇವಲ 1 ರೂ. ಸೆಸ್ ಹೆಚ್ಚಳ ಮಾಡಿದರೂ ಸಾವಿರಾರು ಕೋಟಿ ರೂ. ಸಂಗ್ರಹವಾಗುತ್ತದೆ. ಇದರಿಂದ ತೈಲ ಬಳಸುವವರಿಗೆ ಹೊರೆ ಏನೂ ಆಗುವುದಿಲ್ಲ. ಹೀಗೆ ಬಂದ ಆದಾಯದಿಂದ ಕಾರ್ಮಿಕರ ಎಲ್ಲ ಬೇಡಿಕೆ ಈಡೇರಿಸಬಹುದು ಎಂದು ಹೇಳಿದ್ದಾರೆ.
ಸಿನಿ ಮಿಲ್ ಯೋಜನೆಯಡಿ ಸಿನಿಮಾ ಟಿಕೆಟ್ ಮೇಲೆ ಸೆಸ್ ಮೊತ್ತ ಸಂಗ್ರಹಿಸಿ ಗೊಂಬೆ ಆಟ ಆಡಿಸುವವರು, ನಾಟಕ ಕಲಾವಿದರು ಸೇರಿದಂತೆ ಸಿನಿಮಾ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಬಹುದು. ಟ್ರಾನ್ಸ್ ಪೋರ್ಟ್ ಬಿಲ್ ಮೂಲಕ ಸೆಸ್ ಸಂಗ್ರಹಿಸಿ ವಾಣಿಜ್ಯ ವಾಹನಗಳನ್ನು ಓಡಿಸುವ ಕಾರ್ಮಿಕರಿಗೆ ಅಪಘಾತ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.
ಸದ್ಯ ಕಾರ್ಮಿಕರ ಮಕ್ಕಳಿಗಾಗಿ ಮೂರು ವಸತಿ ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಇವುಗಳ ಪ್ರಗತಿ ಗಮನಿಸಿ ಮತ್ತಷ್ಟು ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು, ಐದು ಗ್ಯಾರಂಟಿಗಳಿಗೆ ವರ್ಷಕ್ಕೆ 60 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಐದು ವರ್ಷಕ್ಕೆ 3 ಲಕ್ಷ ಕೋಟಿ ಆಗುತ್ತದೆ. ಬಡವರ ಮನೆಗೆ ದುಡ್ಡು ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ ಎಂದರು