ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಇದೇ ಜುಲೈ.14ರಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲೇ ಸೇತುವೆಗೆ ಸಿಗಂದೂರು ಚೌಡೇಶ್ವರಿ ಅಂತ ಹೆಸರಿಡಿ ಎಂಬುದಾಗಿ ಒಂದಷ್ಟು ಜನರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರಿಡುವಂತೆ ಕೋರಿ ಹೈಕೋರ್ಟ್ ಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿಯ ಹಿನ್ನೀರಿಗೆ ನಿರ್ಮಿಸಿರುವಂತ ನೂತನ ಸೇತುವೆ ಜುಲೈ.14, 2025ರಂದು ಲೋಕಾರ್ಪಣೆಗೊಳ್ಳಲಿದೆ. ಇಂತಹ ಸೇತುವೆಗೆ ಯಡಿಯೂರಪ್ಪ ಹೆಸರಿಡುವಂತೆ ಶಿವಮೊಗ್ಗದ ಬಿದರಿ ಗ್ರಾಮದ ನಿವಾಸಿ ಕೆ.ಹರನಾಥ್ ರಾವ್ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರು, ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ.17ಕ್ಕೆ ಮುಂದೂಡಿದ್ದಾರೆ.
ಶಿವಮೊಗ್ಗದ ಬಿದರಿ ಗ್ರಾಮದ ಕೆ.ಹರನಾಥ್ ರಾವ್ ಸಲ್ಲಿಸಿದಂತ ಅರ್ಜಿಯಲ್ಲಿ ಏನಿದೆ.?
ನಾನು ಜುಲೈ.7ರಂದು ಕೇಂದ್ರ ಭೂಸಾರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದೇನೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನಿರ್ಮಿಸಿರುವಂತ ನೂತನ ಸೇತುವೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಸರು ನಾಮಕರಣ ಮಾಡುವಂತೆ ಕೋರಿರುವುದಾಗಿ ತಿಳಿಸಿದ್ದಾರೆ.
ನಾನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವಂತ ಮನವಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನ್ನ ಮನವಿಯನ್ನು ಪರಿಗಣಿಸಿರೋ ಬಗ್ಗೆಯಾಗಲೀ ಬೇರೆ ಯಾವುದೇ ಪತ್ರವೂ ತಮಗೆ ತಲುಪಿಲ್ಲ. ಹೀಗಾಗಿ ಸಾಗರದ ಶರವಾತಿ ನದಿ ಹಿನ್ನೀರಿನ ನೂತನ ಸೇತುವೆಗೆ ಬಿಎಸ್ ಯಡಿಯೂರಪ್ಪ ಹೆಸರಿಡುವಂತೆ ಸೂಚಿಸುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.