ದಕ್ಷಿಣ ಅಮೆರಿಕದ ಪೆರು ದೇಶದ ರಾಜಧಾನಿ ಲಿಮಾದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ‘ಅಲೆಜಾಂಡ್ರೊ ವಿಲ್ಲನುಯೆವಾ’ (Alejandro Villanueva) ಫುಟ್ಬಾಲ್ ಕ್ರೀಡಾಂಗಣದ ಗೋಡೆಯೊಂದು ದಿಢೀರನೆ ಕುಸಿದು ಬಿದ್ದ ಪರಿಣಾಮ, ಕನಿಷ್ಠ 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದ ಸಮಯದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಗ್ಯಾಲರಿಯ ಒಂದು ಭಾಗದ ಗೋಡೆ ಅತಿಯಾದ ಒತ್ತಡಕ್ಕೆ ಸಿಲುಕಿ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.ಗೋಡೆ ಕುಸಿತದ ರಭಸಕ್ಕೆ ಸಿಲುಕಿದ 60ಕ್ಕೂ ಹೆಚ್ಚು ಜನರಿಗೆ ಮೂಳೆ ಮುರಿತ ಮತ್ತು ತಲೆಗೆ ಪೆಟ್ಟು ಬಿದ್ದಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.ಕ್ರೀಡಾಂಗಣದ ಹಳೆಯ ಗೋಡೆಗಳ ನಿರ್ವಹಣೆಯಲ್ಲಿ ಲೋಪವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.








