ಬೆಂಗಳೂರು: ರಾಜ್ಯದ ಜನರ ತೆರಿಗೆ ಹಣವನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಜೇಬಿಗೆ ಹಾಕಲಾಗುತ್ತಿದೆ. ಪ್ರತಿ ವರ್ಷ 15 ರಿಂದ 20 ಕೋಟಿ ರೂ. ಲೂಟಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಇದನ್ನು ಖಂಡಿಸಿ ಅಧಿವೇಶನದಲ್ಲಿ ಹಾಗೂ ಹೊರಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದೆ. ಆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರ ಜೇಬಿಗೆ ಹಾಕಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರನ್ನು ನೇಮಿಸಿ, 25,000 ರೂ. ಸಂಬಳ ನೀಡಿ, ಅವರಿಗೆ ಆಪ್ತ ಸಹಾಯಕರನ್ನು ನೇಮಿಸಲಾಗುತ್ತಿದೆ. 1,100 ರೂ. ಸಿಟ್ಟಿಂಗ್ ಫೀಸ್ ನಿಗದಿಪಡಿಸಲಾಗಿದೆ. ರಾಜ್ಯದ ಅಧ್ಯಕ್ಷನಿಗೆ 40,000 ರೂ. ಸಂಬಳ, ಉಪಾಧ್ಯಕ್ಷನಿಗೆ 25,000 ರೂ. ಸಂಬಳ ನೀಡಲಾಗುತ್ತಿದೆ. ಪ್ರತಿ ವರ್ಷ 15-20 ಕೋಟಿ ರೂ. ಲೂಟಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದರು.
ಸರ್ಕಾರದ ಹಣ ಬಡವರಿಗೆ ತಲುಪಬೇಕು. ಅಂಗನವಾಡಿಯಲ್ಲಿ ಅಡುಗೆ ಮಾಡುವವರಿಗೆ 3,000 ರೂ. ಗೌರವಧನ, ಆಶಾ ಕಾರ್ಯಕರ್ತೆಯರಿಗೆ 7,000 ರೂ. ಗೌರವಧನ, ಅತಿಥಿ ಶಿಕ್ಷಕರಿಗೆ 12,000 ರೂ. ನೀಡಲಾಗುತ್ತಿದೆ. ಇದೇ ಹಣವನ್ನು ವಿಶ್ವವಿದ್ಯಾಲಯಗಳಿಗೆ ನೀಡಬಹುದಿತ್ತು ಅಥವಾ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ನೀಡಬಹುದಿತ್ತು. ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ ನೀಡುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಲಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾಯಿತ ಶಾಸಕರು ಇರುತ್ತಾರೆ. ಅವರ ಮೇಲೆ ಒಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ನೇಮಿಸಿ, ಆತನಿಂದ ನ್ಯಾಯಬೆಲೆ ಅಂಗಡಿಯಲ್ಲಿ ದರ ನಿಗದಿ ಮಾಡಿಸಲಾಗುತ್ತಿದೆ. ಇಲ್ಲಿಂದಲೇ ಅಕ್ರಮ ಆರಂಭವಾಗುತ್ತದೆ. ಸಂವಿಧಾನ ಉಳಿಸಿ, ಸರ್ಕಾರದ ಹಣ ರಕ್ಷಿಸಿ ಎಂದು ಆಗ್ರಹಿಸಿ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ಮಾಡಲಾಗುವುದು. ಜೊತೆಗೆ ಅಧಿವೇಶನದಲ್ಲೂ ಧರಣಿ ಮಾಡಲಾಗುವುದು ಎಂದು ತಿಳಿಸಿದರು.
ಸಮಿತಿ ನೇಮಕ ಮಾಡಿ ನ್ಯಾಯಬೆಲೆ ಅಂಗಡಿಗಳ ಸಭೆ ನಡೆಸಲಾಗಿದೆ. ಆಗಲೇ ಇದು ಅಕ್ರಮ ಎಂದು ಗೊತ್ತಾಗಿದೆ. ಕಾಂಗ್ರೆಸ್ ಶಾಸಕರಿಗೂ ಇದು ಇಷ್ಟವಾಗಿಲ್ಲ. ಟಿಕೆಟ್ ನೀಡಿಲ್ಲದವರಿಗೆ ಈ ಅವಕಾಶ ನೀಡಲಾಗಿದೆ. ಅಂಬೇಡ್ಕರ್ ವಸತಿ ಯೋಜನೆ, ಆಶ್ರಯ, ಬಗರ್‌ಹುಕುಂ ಸಾಗುವಳಿ ಯೋಜನೆ ಮೊದಲಾದ ಸಮಿತಿಗಳಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅದೇ ರೀತಿ ಇದನ್ನೂ ಮಾಡಬೇಕು. ಇದು ಸಂವಿಧಾನ ವಿರೋಧಿಯಾಗಿದೆ. ಶಾಸಕರ ಅಧಿಕಾರವನ್ನು ಮೊಟಕು ಮಾಡುವುದು ಸರಿಯಲ್ಲ ಎಂದು ಖಂಡಿಸಿದರು.
ಕೆನಡಾದ ಆಮದಿನ ಮೇಲಿನ ಸುಂಕವನ್ನು ಶೇ.50ಕ್ಕೆ ದ್ವಿಗುಣಗೊಳಿಸುವುದಾಗಿ ಟ್ರಂಪ್ ಘೋಷಣೆ | US President Donald Trump
ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್: ಬೆಂಕಿ ಇಲ್ಲದೆ ಹೊಗೆ ಆಡುವುದು ಹೇಗೆ?: ಬಿವೈ ವಿಜಯೇಂದ್ರ ಪ್ರಶ್ನೆ