ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಾಗರ ನಗರದ ಜೀವನಾಡಿ ಬಿ.ಎಚ್. ರಸ್ತೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಅಧ್ವಾನದ ಹಾದಿಯಾಗಿದೆ. ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯು, ಅವೈಜ್ಞಾನಿಕ ಮತ್ತು ವಿಳಂಬ ಧೋರಣೆಯಿಂದಾಗಿ ಸಾರ್ವಜನಿಕರ ಪಾಲಿಗೆ ನರಕದರ್ಶನ ಮಾಡಿಸುತ್ತಿದೆ. ಐದು ವರ್ಷಗಳ ದೀರ್ಘ ಕಾಯುವಿಕೆಯ ನಂತರವೂ ರಸ್ತೆ ಸುಗಮವಾಗುವ ಬದಲು ಸರಣಿ ಅಪಘಾತಗಳ ತಾಣವಾಗಿ ಮಾರ್ಪಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಸ್ಥಳ ಪರಿಶೀಲನೆಗೆ ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕಂಡ ಸಾರ್ವಜನಿಕರು ಮತ್ತು ರೈತ ಮುಖಂಡರು ತಮ್ಮ ಐದು ವರ್ಷಗಳ ನೋವನ್ನು ಪ್ರತಿಭಟನೆಯ ರೂಪದಲ್ಲಿ ಹೊರಹಾಕಿದರು.
ಒಂದು ವರ್ಷದ ಕೆಲಸಕ್ಕೆ ಐದು ವರ್ಷ! – ಸಾರ್ವಜನಿಕರ ಆಕ್ರೋಶ
“ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿಯನ್ನು ಐದು ವರ್ಷಗಳ ಕಾಲ ಎಳೆಯಲಾಗಿದೆ. ಇದು ಅಭಿವೃದ್ಧಿಯೋ ಅಥವಾ ಸಾರ್ವಜನಿಕರಿಗೆ ನೀಡುತ್ತಿರುವ ಶಿಕ್ಷೆಯೋ?” ಎಂದು ಮಲೆನಾಡು ರೈತ ಹೋರಾಟ ವೇದಿಕೆಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು.
ರಸ್ತೆ ಅಗಲೀಕರಣದಲ್ಲಿ ಅನುಸರಿಸಲಾಗಿರುವ ‘ದಂಧೆ’ ಮತ್ತು ‘ತಾರತಮ್ಯ’ದ ಬಗ್ಗೆ ಮಾತನಾಡಿದ ಅವರು, “ರಾಜಕೀಯ ಪ್ರಭಾವ ಇರುವವರ ಜಾಗ ಉಳಿಸಲು ರಸ್ತೆಯನ್ನು ಕಿರಿದುಗೊಳಿಸಲಾಗಿದೆ. ಇದರಿಂದಾಗಿ ರಸ್ತೆ ಎಲ್ಲೋ ಒಂದು ಕಡೆ ಅಗಲವಾಗಿದ್ದರೆ, ಇನ್ನೊಂದೆಡೆ ಸಣ್ಣದಾಗಿ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಸಂಸದರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಗುಡುಗಿದರು.
ಇಂಜಿನಿಯರಿಂಗ್ ವೈಫಲ್ಯವೋ? ವ್ಯವಸ್ಥೆಯ ಬೇಜವಾಬ್ದಾರಿಯೋ?
ನಿವೃತ್ತ ಅಭಿಯಂತರ ಶ್ರೀಪಾದ್ ಅವರು ತಾಂತ್ರಿಕ ಲೋಪಗಳನ್ನು ಎತ್ತಿ ತೋರಿಸುತ್ತಾ, ರಸ್ತೆ ನಿರ್ಮಾಣದಲ್ಲಿ ಯಾವುದೇ ಕನಿಷ್ಠ ನಿಯಮಗಳನ್ನು ಪಾಲಿಸಿಲ್ಲ ಎಂದು ವಿಷಾದಿಸಿದರು. ಎಲ್ಲೆಂದರಲ್ಲಿ ಅಳತೆ ಮಾಡಿ, ಸರಿಯಾಗಿ ಅಗಲೀಕರಣ ಮಾಡದೆ ಡಿವೈಡರ್ ಹಾಕಲಾಗಿದೆ. ಹಳೆ ಚರಂಡಿಗಳನ್ನು ಕಿತ್ತು ಹೊಸದಾಗಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದರು.
ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ. ಮಂಜಪ್ಪ ಅವರ ಮಾತಿನಲ್ಲಿ ಎಚ್ಚರಿಕೆಯ ಧ್ವನಿ ಇತ್ತು. ಉಪವಿಭಾಗೀಯ ಕೇಂದ್ರವಾಗಿರುವ ಸಾಗರದಲ್ಲಿ ಇಂತಹ ಕಳಪೆ ಕಾಮಗಾರಿ ಸಹಿಸಲು ಸಾಧ್ಯವಿಲ್ಲ. ಒಂದು ತಿಂಗಳ ಗಡುವನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ಸರಿಪಡಿಸದಿದ್ದರೆ ಹೋರಾಟದ ಹಾದಿ ಅನಿವಾರ್ಯ ಎಂದು ಎಚ್ಚರಿಸಿದರು.

ಖಾಕಿ ಪಡೆಯ ಕಳವಳ
ಕೇವಲ ಜನಸಾಮಾನ್ಯರಷ್ಟೇ ಅಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯೂ ಈ ಅವೈಜ್ಞಾನಿಕ ಕಾಮಗಾರಿಯಿಂದ ಬೇಸತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಾಗರ ಎಎಸ್ಪಿ ಡಾ. ಬೆನಕ ಪ್ರಸಾದ್ ಅವರು, ವಿದ್ಯುತ್ ಕಂಬಗಳನ್ನು ಹಾಕುವಾಗ ಮುನ್ನೆಚ್ಚರಿಕೆ ವಹಿಸಿಲ್ಲ, ಡಿವೈಡರ್ ನಿಯಮಗಳನ್ನು ಪಾಲಿಸಿಲ್ಲ ಎಂದು ಜನ ದೂರುತ್ತಿದ್ದಾರೆ. ಈ ಬಗ್ಗೆ ಪ್ರಾಧಿಕಾರದೊಂದಿಗೆ ಮಾತನಾಡಿದ್ದು, ಒಂದು ತಿಂಗಳ ಒಳಗಾಗಿ ಸಮಸ್ಯೆ ಸರಿಪಡಿಸೋದಕ್ಕೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಸಾಗರದ ಜನರಿಗೆ ಈಗ ಬೇಕಿರುವುದು ಭರವಸೆಗಳಲ್ಲ, ಸುಗಮ ಸಂಚಾರಕ್ಕೆ ಯೋಗ್ಯವಾದ ರಸ್ತೆ. ರಸ್ತೆಯ ಮಧ್ಯೆ ಹಠಾತ್ತನೆ ಎದುರಾಗುವ ಡಿವೈಡರ್‌ಗಳು, ಅರ್ಧಕ್ಕೆ ನಿಂತ ಕಾಮಗಾರಿಗಳು ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ. ಅಧಿಕಾರಿಗಳಿಗೆ ನೀಡಲಾಗಿರುವ ಒಂದು ತಿಂಗಳ ‘ಡೆಡ್‌ಲೈನ್’ ನಲ್ಲಿಯೇ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಮುಗಿಸುತ್ತಾರಾ ಸಂಬಂಧ ಪಟ್ಟ ಅಧಿಕಾರಿಗಳು ಎಂದು ಕಾದು ನೋಡಬೇಕಿದೆ.
ಈ ಪ್ರತಿಭಟನೆಯಲ್ಲಿ ರೈತ ಸಂಘ ದೇವು ಆಲಳ್ಳಿ, ರಾಮಪ್ಪ ಶಿರವಾಳ, ಜಿನೇಶ್ ಕುಮಾರ್, ಭದ್ರೇಶ್ ಬಾಳಗೋಡು, ನಾಗರಾಜ್ ಗುಡ್ಡೇಮನೆ, ಫ್ರಾಂಕಿ ಫರ್ನಾಂಡಿಸ್ ಸೇರಿದಂತೆ ಹಲವು ನಾಗರಿಕರು ಭಾಗವಹಿಸಿ ತಮ್ಮ ಸಂಕಷ್ಟವನ್ನು ತೋಡಿಕೊಂಡರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ವಿಧಾನಸಭೆಯಲ್ಲಿ ‘ಸಿಎಂ’ ಚರ್ಚೆಯ ಕಚಗುಳಿ: ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಡಿಕೆಶಿ ಹೆಸರಿನ ಬಗ್ಗೆ ಚಾಣಾಕ್ಷ ಮೌನ!








