ಶಿವಮೊಗ್ಗ: ಸಾಗರ ಜಿಲ್ಲೆ ಹೋರಾಟಕ್ಕೆ ತಾಲ್ಲೂಕಿನ ಜನರು ಬೀದಿಗೆ ಇಳಿದಿದ್ದಾರೆ. ಸಾಗರ ನಗರಸಭೆಯಿಂದ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದಂತ ಸಾಗರ ಜಿಲ್ಲೆ ಹೋರಾಟವು, ಸಾಗರ ಜಿಲ್ಲೆ ನಮ್ಮ ಹಕ್ಕು ಘೋಷಣೆಯ ಮೂಲಕ ಮಾರ್ಧನಿಸುವಂತೆ ಮಾಡಿತು. ಈ ಮೂಲಕ ಸಾಗರ ಜಿಲ್ಲೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಇಂದು ಸಾಗರ ಜಿಲ್ಲೆ ಹೋರಾಟದ ರಣಕಹಳೆ ಮೊಳಗಿತು. ಕೇಂದ್ರ ಸರ್ಕಾರದ ಜನಗಣತಿಯು 2026 ಎಪ್ರಿಲ್ 01ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕಿಂತ 3ತಿಂಗಳು ಮುಂಚಿತವಾಗಿ ಹೊಸ ಜಿಲ್ಲೆ, ತಾಲೂಕು ರಚನೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪಿತ ಬದಲಾವಣೆಗಳಿದ್ದರೆ, 2025ರ ಡಿಸೆಂಬರ್ 31ರ ಒಳಗಾಗಿ ಮುಗಿಸಿಕೊಳ್ಳುವ ರಾಜ್ಯಗಳಿಗೆ ಕೇಂದ್ರಸರ್ಕಾರ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂಬ ಹೋರಾಟಕ್ಕೆ ಮತ್ತೆ ಜೀವಕಳೆ ಬಂದಿದೆ. ಇಂದು ಸಾಗರದಲ್ಲಿ ನಾಗರೀಕರು, ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೀದಿಗಿಳಿದು ಮೆರವಣಿಗೆ ನಡೆಸಿದರು. ಆ ಬಳಿಕ ಸಾಗರ ನಗರಸಭೆಯ ರಂಗಮಂದಿರದಲ್ಲಿ ಸಭೆ ನಡೆಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದಂತ ಸಾಗರ ಜಿಲ್ಲಾ ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಅವರು, 70 ವರ್ಷಗಳ ಹಿಂದಿನಿಂದಲೇ ಸಾಗರ ಉಪವಿಭಾಗವಾಗಿ ಕೆಲಸಮಾಡುತ್ತಾ ಬಂದಿದೆ. 14 ವರ್ಷಗಳ ಹಿಂದೆ ಸಾಹಿತಿ ನಾ.ಡಿಸೋಜಾ ರವರ ನೇತೃತ್ವದಲ್ಲಿ ಸಾಗರ ಜಿಲ್ಲೆಯಾಗಬೇಕು ಎನ್ನುವ ಧ್ವನಿ ಆರಂಭವಾಯಿತು. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ಸಾಗರ ತಾಲೂಕು ಭೌಗೋಳಿಕವಾಗಿಯೂ ವಿಶೇಷತೆಯನ್ನು ಹೊಂದಿದೆ. ನಮ್ಮನ್ನಾಳುವ ಸರ್ಕಾರಗಳು ಮಲೆನಾಡನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಈ ಹಿಂದೆ ರಂಗಕರ್ಮಿ ಕೆವಿ ಸುಬ್ಬಣ್ಣ ಮಲೆನಾಡಿನ ಹೋರಾಟಗಳ ಸಂದರ್ಭದಲ್ಲಿ ಇದೇ ರೀತಿ ನಮ್ಮನ್ನು ಸರ್ಕಾರಗಳು ನಿರ್ಲಕ್ಷಿಸಿದರೆ, ನಾವು ಪ್ರತ್ಯೇಕ ರಾಜ್ಯವನ್ನು ಕೇಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರ ಎಂದರು.
ರಾಜ್ಯಕ್ಕೆ ಶೇಕಡಾ 51%ರಷ್ಟು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿ ನೀಡುತ್ತಿದ್ದೇವೆ. ಸಾಕಷ್ಟು ಯೋಜನೆಗಳಿಗೆ ಭೂಮಿ, ಬದುಕು ತ್ಯಾಗ ಮಾಡಿರುವ ನಮ್ಮ ತಾಲೂಕನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಸಾಗರ ತಾಲೂಕನ್ನು ಜಿಲ್ಲೆಯಾಗಿ ಪರಿವರ್ತಿಸಿದರೆ, ಸಾಕಷ್ಟು ಅಭಿವೃದ್ಧಿಯಾಗುತ್ತದೆ. ಇಂದು ನಮ್ಮ ಹೋರಾಟ ಆರಂಭವಾಗಿದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರಬರೆದು ಸುಮ್ಮನೆ ಕುಳಿತುಕೊಳ್ಳಬಾರದು. ಸಾಗರದ ಶಾಸಕರಿಗೆ ಮಂತ್ರಿ ದರ್ಜೆಯ ಸ್ಥಾನಮಾನ ಇದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮುಖ್ಯಮಂತ್ರಿಗಳನ್ನು ಅವರು ಭೇಟಿ ಮಾಡಬಹುದಾಗಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಸಾಗರ ಜಿಲ್ಲೆ ಮಾಡಿಸುವ ಆದೇಶ ಹೊರಡಿಸುವಂತಾಗಬೇಕು. ನಮ್ಮ ಹೋರಾಟವನ್ನು ಹಂತಹಂತವಾಗಿ ರೂಪಿಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಹಾಗೂ ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದಂತ ಬಿ.ಆರ್ ಜಯಂತ್ ಮಾತನಾಡಿ, ಮಲೆನಾಡಿನ ಸಾಗರವನ್ನು ಜಿಲ್ಲೆಯಾಗಿ ರೂಪಿಸಿದರೆ, ಅದು ಸಮಗ್ರ ಅಭಿವೃದ್ಧಿಯನ್ನು ಕಾಣುತ್ತದೆ. ಮಲೆನಾಡಿನ ಎಷ್ಟೋ ಸಮಸ್ಯೆಗಳನ್ನು ಪರಿಹಾರವಾಗಲಿದೆ. ಮಲೆನಾಡಿನ ಜಿಲ್ಲೆಗಳಿಗೆ ಮಲೆನಾಡು ಅಭಿವೃದ್ಧಿ ಮಂಡಳಿ ಮೂಲಕ ಕೇವಲ 52 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಾರೆ. ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ 1,000 ಕೋಟಿ ನೀಡುತ್ತಾರೆ. ಇನ್ನು ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ನೀಡಲಾಗುತ್ತಿದೆ. ಈ ತಾರತಮ್ಯ ಏಕೆ?.. ನಮ್ಮ ಮಲೆನಾಡಿನಲ್ಲಿ ಯಾವುದೇ ಸಂಪರ್ಕವಿಲ್ಲದ ಕಗ್ಗಾಡುಗಳಿವೆ. ಭೂಮಿ ಸಮಸ್ಯೆ ಇದೆ. ಇವೆಲ್ಲದಕ್ಕೂ ನಮ್ಮ ಸಾಗರ ಜಿಲ್ಲಾ ಕೇಂದ್ರವಾದರೆ, ಸರ್ಕಾರದ ಕಣ್ಣು ತೆರೆಸಬಹುದಾಗಿದೆ ಎಂದು ಹೇಳಿದರು.
ಹೆಗ್ಗೋಡಿನ ನೀನಾಸಂನ ಕೆವಿ ಅಕ್ಷರ ಮಾತನಾಡಿ, ಸರ್ಕಾರದ ಬಳಿ ಜನ ಹುಡುಕಿಕೊಂಡು ಹೋಗುವ ವ್ಯವಸ್ಥೆ ಇದ್ದರೆ, ಅದು ಒಳ್ಳೆಯ ಸರ್ಕಾರದ ಲಕ್ಷಣವಲ್ಲ. ಅದರ ಬದಲಿಗೆ ಸರ್ಕಾರವೇ ಜನರನ್ನು ಹುಡಿಕಿಕೊಂಡು ಅವರ ಬಳಿ ತೆರಳಿ ಸಹಕಾರ ನೀಡುವ ಕೆಲಸ ಮಾಡುವುದು ಉತ್ತಮ ಸರ್ಕಾರದ ಲಕ್ಷಣ. ಸಾಗರದಂತಹ ಊರು ಜಿಲ್ಲೆಯಾಗಿ ಘೋಷಣೆಯಾದರೆ, ಸಾಕಷ್ಟು ಸಮಸ್ಯೆಗಳಿಗೆ ಉತ್ತರ ದೊರೆಯಬಹುದಾಗಿದೆ ಎಂದು ತಿಳಿಸಿದರು.
ಸಾಗರ ನಗರಸಭಾ ಸದಸ್ಯ ಟಿ.ಡಿ ಮೇಘರಾಜ್ ಮಾತನಾಡಿ, ಇದು ಪಕ್ಷಾತೀತವಾದ ಹೋರಾಟವಾಗಿದೆ. ನಮ್ಮ ಹೆಮ್ಮೆಯ ಸಾಗರ ಜಿಲ್ಲಾಕೇಂದ್ರವಾಗಬೇಕು ಎಂಬುವುದು ಒಕ್ಕೊರಲಿನ ಒತ್ತಾಯವಾಗಿದೆ. ಕೇಂದ್ರಸರ್ಕಾರದ ಗಮನಕ್ಕೂ ನಮ್ಮ ಕೂಗು ಮುಟ್ಟಿಸೋಣ. ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಕ್ಷೇತ್ರದ ಶಾಸಕರು, ಸ್ಥಳೀಯ ಆಡಳಿತ, ಹೆಚ್ಚಿನ ಒತ್ತಾಯ ಮಾಡಬೇಕು ಎಂದರು.
ಯಾವ ತೀರ್ಮಾನಕ್ಕೂ ಬಂದಿಲ್ಲವೆಂದ ಕಾಗೋಡು
ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಜನಾಗ್ರಹಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿ ನಾವು ಯಾವ ತೀರ್ಮಾನಕ್ಕೂ ಬಂದಿಲ್ಲ. ಹೋರಾಟದ ಕುರಿತು ಈಗಲೇ ಯಾವ ಮಾತನ್ನು ಹೇಳಲಾರೆ. ನಮ್ಮ ಪಕ್ಷ ಯಾವ ತೀರ್ಮಾನ ಕೈಗೊಂಡಿದೆ ಎಂಬುದು ಕೂಡಾ ನನ್ನ ಗಮನದಲ್ಲಿಲ್ಲ. ನೀವು ಹೋರಾಟ ಮಾಡಿ. ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡುವುದು ಬಹಳ ಮುಖ್ಯ. ನಿಮ್ಮ ಹೋರಾಟದಿಂದ ಸಾಗರ ಜಿಲ್ಲೆಯಾಗಲಿ ಎಂದರು.
ಸಾಗರ ಜಿಲ್ಲೆ ಹೋರಾಟ ಜಾಥಾದ ವೇಳೆ ಮಾತನಾಡಿದಂತ ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ಅವರು, ಜನಸಂಖ್ಯೆ ಮತ್ತಿತರ ಸಂಪರ್ಕದ ವ್ಯವಸ್ಥೆ ದೃಷ್ಟಿಯಿಂದ ಸಾಗರ ಜಿಲ್ಲೆಯಾಗುವುದಕ್ಕೆ ಸೂಕ್ತವಾಗಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ತಾಲೂಕಿನ ಜನತೆ ಸಾಗರ ಜಿಲ್ಲೆಯಾಗಬೇಕೆನ್ನುವ ಕೂಗು ಹೋರಾಟವನ್ನು ನಡೆಸಿಕೊಂಡು ಬರುತ್ತಲೇ ಇದ್ದಾರೆ. ಅದಕ್ಕೀಗ ಒಳ್ಳೇಯ ಕಾಲ ಕೂಡಿ ಬಂದಿದೆ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಮುಖಂಡ ತುಕಾರಾಂ ಶಿರವಾಳ ಮಾತನಾಡಿ, ಸಾಗರ ತಾಲೂಕಿನಲ್ಲಿ ನಾಕು ತಾಲೂಕಿಗಳನ್ನು ಒಳಗೊಂಡ ಉಪವಿಭಾಗವಿದ್ದು, ಹಲವು ಉಪವಿಭಾಗದ ಕಚೇರಿಗಳು ಇಲ್ಲವೆ. ಶೈಕ್ಷಣಿಕ ಸಂಸ್ಥೆಗಳಿವೆ. ಕೆಳದಿಯ ಅರಸರು 265 ವರ್ಷಗಳ ಕಾಲ ಇಲ್ಲಿ ತಮ್ಮ ಸಾಮ್ರಾಜ್ಯವನ್ನು ಮುನ್ನಡೆಸಿದ್ದಾರೆ. ನಮ್ಮ ಹೋರಾಟ ಇಷ್ಟಕ್ಕೇ ನಿಲ್ಲಬಾರದು. ಇದರಲ್ಲಿ ನಿರಂತರತೆಯನ್ನು ಇಟ್ಟುಕೊಂಡು ಸಾಗೋಣ ಎಂದರು.
ಗ್ರಾಮಪಂಚಾಯತಿಗಳಲ್ಲಿ ನಿರ್ಣಯ
ಸಾಗರ ಜಿಲ್ಲಾ ಹೋರಾಟ ಸಮಿತಿಯ ಹೆಚ್.ಬಿ ರಾಘವೇಂದ್ರ ಮಾತನಾಡಿ, ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಹೋರಾಟಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪ್ರಧೇಶಗಲ್ಲಿಯೂ ಸಾಕಷ್ಟು ಸಭೆಗಳನ್ನು ನಡೆಸಿದ್ದೇವೆ. ಜನರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದಾರೆ. ನಾಗರೀಕರು ನೀಡಿದ ಸಲಹೆಯಂತೆ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ಹಾಗೂ ಸಹಕಾರ ಸಂಘಟನೆಗಳಲ್ಲಿ ಸಾಗರ ಜಿಲ್ಲೆಯನ್ನಾಗಿ ಘೋಷಿಸಬೇಕೆನ್ನುವ ನಿರ್ಣಯಮಾಡಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ಸಭೆ ಆಗ್ರಹಿಸುತ್ತದೆ ಎಂದು ತಿಳಿಸಿದರು.
ಸಾಗರ ಜಿಲ್ಲಾ ಹೋರಾಟ ಸಮಿತಿ ಏರ್ಪಡಿಸಿದ್ದ ಜನಾಗ್ರಹ ಸಭೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿಪ್ರದರ್ಶನ ಮಾಡಿದರು. ಸಾಗರದ ನಾಗರೀಕರು ಪ್ರತಿಭಟನಾ ಮೆರವಣಿಗೆಯಲ್ಲಿ ಜಾಗಟೆ ಬಾರಿಸುವ ಮೂಲಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಭೆಯಲ್ಲಿ ಕೆವಿ ಜಯರಾಂ, ನಗರ ಸಭಾಧ್ಯಕ್ಷೆ ಮೈತ್ರಿ ಪಾಟಿಲ್, ಅಬ್ದುಲ್ ಖಾದರ್ ಶಕಾಫಿ, ಫಾದರ್ ವಿನುತ್ ಬಲು ಕುಮಾರ್, ಸುಂದರ್‌ಸಿಂಗ್, ಡಾ ರಾಜನಂದಿನಿ ಕಾಗೋಡು, ಅನ್ವರ್, ಗಿರೀಶ್ ಕೋವಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕನ್ನಪ್ಪ, ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಕಲಸೆ ಚಂದ್ರಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಕೆ.ಆರ್, ಬಿ.ಗಿರಿಧರ ರಾವ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದೇವೆಂದ್ರಪ್ಪ ಯಲಕುಂದ್ಲಿ, ದೂಗೂರು ಪರಮೇಶ್ವರ, ಮಂಜುನಾಥ್ ಸಿ, ಮಂಜಪ್ಪ, ಮಹಮದ್ ಖಾಸಿಂ, ತಾರಾಮೂರ್ತಿ, ನಾಗೇಂದ್ರ ಕುಮಟಾ, ದಿನೇಶ್ ಡಿ, ಐ.ವಿ ಹೆಗಡೆ ಸೇರಿದಂತೆ ಇತರರಿದ್ದರು.
ಶಿವಮೊಗ್ಗ: ನಮ್ಮ ಸರ್ಕಾರ ರೈತರ ಪರ ಒಲವು ಇರುವಂತದ್ದು- ಶಾಸಕ ಗೋಪಾಲಕೃಷ್ಣ ಬೇಳೂರು
Good News ; ಪಿಂಚಣಿದಾರರಿಗೆ ಶುಭ ಸುದ್ದಿ ; ಅ. 1ರಿಂದ ‘NPS’ ನಿಯಮ ಬದಲಾವಣೆ, ಅನೇಕ ಪ್ರಯೋಜನ!