ಬೆಳಗಾವಿ: ಸೋಮವಾರದಿಂದ ಶನಿವಾರದೊಳಗೆ (ಡಿಸೆಂಬರ್ 22 ರಿಂದ 27) ಗೃಹಲಕ್ಷ್ಮೀ ಯೋಜನೆಯ 24ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಈಗಾಗಲೇ ಅನುಮತಿ ನೀಡಿದ್ದು, ಸೋಮವಾರದಿಂದ ಹಣ ಸಂದಾಯವಾಗಲಿದೆ ಎಂದರು.
ಸತ್ತವರ ಅಕೌಂಟ್‌ಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದ್ದು, ಸತ್ತವರ ಅಕೌಂಟ್‌ಗೆ ಹಣ ಸಂದಾಯ ಆಗುವುದು ಗೊತ್ತಾಗುವುದಿಲ್ಲ. ಇದಕ್ಕಾಗಿ ಈಗ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಿದ್ದು, ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡಲಿದ್ದಾರೆ. ಈ ಮೊತ್ತವನ್ನು ರಿಕವರಿ ಮಾಡುವ ಕುರಿತು ಬ್ಯಾಂಕ್‌ಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು.
ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ
ನಾಯಕತ್ವ ಬದಲಾವಣೆ ಆಗುತ್ತಾ ಅಥವಾ ಸಚಿವ ಸಂಪುಟದ ವಿಸ್ತರಣೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಎರಡೂ ವಿಚಾರಗಳ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಸತಿ ಶಾಲೆ ಮುಚ್ಚಿಸಲು ಕ್ರಮ
ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಕ್ರೌರ್ಯ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದೊಂದು ಅಮಾನವೀಯ ಘಟನೆ, ಸರಿಯಾಗಿರುವ ಮಕ್ಕಳಿಗೆ ಹೊಡೆದರೇ ಅಪರಾಧ ಅಂತಾ ಹೇಳಿ ಶಿಕ್ಷೆ ಕೊಡುತ್ತೇವೆ. ಅಂತಹದರಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಹಿಂಸೆ ಕೊಡುವುದನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರದಿಂದ ಅನುಮತಿ ಪಡೆಯದೇ ಶಾಲೆಯನ್ನು ಅನಧಿಕೃತವಾಗಿ ತೆರೆಯಲಾಗಿದೆ. ಘಟನೆ ನಡೆದ ತಕ್ಷಣವೇ ಮಕ್ಕಳ ರಕ್ಷಣಾ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದು, ತಕ್ಷಣವೇ ವಸತಿ ಶಾಲೆ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಮೊಮ್ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿದ ಸಚಿವರು
ಬೆಳಗಾವಿಯ ತಮ್ಮ ಗೃಹಕಚೇರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ತಮ್ಮ ಮೊಮ್ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದರು. ಸಚಿವರ ಪುತ್ರ ಮೃಣಾಲ್ ಹೆಬ್ಬಾಳಕರ್ ಅವರ ಪುತ್ರಿ ಐರಾ, ಪುತ್ರ ಅಥರ್ವ ಹಾಗೂ ಸಹೋದರ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಪುತ್ರ ಧೀರಜ್ ಹಟ್ಟಿಹೊಳಿಗೆ ಸಚಿವರು ಪಲ್ಸ್ ಪೋಲಿಯೊ ಲಸಿಕೆ ಹಾಕಿದರು.
ರಾಜಣ್ಣ ನನಗೂ ಆಪ್ತರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು: ಡಿಸಿಎಂ ಡಿ.ಕೆ ಶಿವಕುಮಾರ್
ಸೊರಬದ ಉಳವಿಯಲ್ಲಿ ನೂತನ KSRTC ಬಸ್ ನಿಲ್ದಾಣ, ಆಸ್ಪತ್ರೆ ಕ್ವಾಟ್ರಾಸ್ ನಿರ್ಮಾಣ: ಸಚಿವ ಮಧು ಬಂಗಾರಪ್ಪ








