ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಡೆದು 36 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಅಧ್ಯಕ್ಷರ ಆಯ್ಕೆಗಾಗಿ ನಾಳೆ ಚುನಾವಣೆ ನಿಗದಿಯಾಗಿದೆ. ತೀವ್ರ ಕುತೂಹಲ ಮೂಡಿಸಿರುವಂತ ಅಧ್ಯಕ್ಷರ ಆಯ್ಕೆಯ ಚುನಾವಣೆಗೂ ಮುನ್ನವೇ, ಕನ್ನಡ ನ್ಯೂಸ್ ನೌ ಗೆ ಯಾರಾಗಲಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಆ ಮಾಹಿತಿಯಂತೆ ಸಾಗರದ ಮಾರಿಗುಡಿ ಸಮಿತಿಯ ಅಧ್ಯಕ್ಷರಾಗಿ ಪವಿತ್ರ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ ಆನಂದ್ ಆಯ್ಕೆಯಾಗೋದು ಫಿಕ್ಸ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಐತಿಹಾಸಿಕ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಅಧ್ಯಕ್ಷರು ಸೇರಿದಂತೆ ಇತರೆ ಪದಾಧಿಕಾರಿಗಳ ಆಯ್ಕೆ ನಾಳೆ ನಡೆಯಲಿದೆ. ಇಂದು ತೀವ್ರ ಕುತೂಹಲ ಕೆರಳಿಸಿದ್ದಂತ ಅಧ್ಯಕ್ಷರ ಹುದ್ದೆಯ ಆಕಾಂಕ್ಷೆಯಿಂದ ಹಿರಿಯ ಮುಖಂಡ ಟಿ.ವಿ ಪಾಂಡುರಂಗ ಹಿಂದೆ ಸರಿದಿದ್ದಾರೆ. ಸ್ವತಹ ಶಾಸಕ ಗೋಪಾಲಕೃಷ್ಣ ಬೇಳೂರು ಅವರೇ ಟಿ.ವಿ ಪಾಂಡುರಂಗ ಅವರಿಗೆ ಗಣಪತಿ ದೇವಸ್ಥಾನದ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಮಾರಿಗುಡಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ ಎಂದರು. ಶಾಸಕರ ಬಳಿಕ ಟಿ.ವಿ ಪಾಂಡುರಂಗ ಅವರು ತಾನು ಮಾರಿಗುಡಿ ಸಮಿತಿಯ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆ ರೇಸಿನಲ್ಲಿಯೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿ, ಹಿಂದೆ ಸರಿದಿದ್ದನ್ನು ಖಚಿತ ಪಡಿಸಿದ್ದರು.
ಹಾಲಿ ಸಮಿತಿಗೆ ಭಾರೀ ಹಿನ್ನಡೆ, ಜೊತೆಗೂಡಿದ ಸಮಿತಿಯ ಹೊಸ ದಿಗ್ಗಜರ ದಂಡು
ಹಾಲಿ ಮಾರಿಗುಡಿ ಸಮಿತಿಯ 20 ವರ್ಷಗಳ ಆಡಳಿತದಿಂದ ಸಾಗರದ ಜನತೆ ಬೇಸತ್ತಿದ್ದರೋ ಅಥವಾ ಹೊಸ ಟೀಂ ಬರಲಿ, ಹಳೆ ಟೀಂ ಹೋಗಲಿ ಎನ್ನುವಂತೆ ಮಾರಿಕಾಂಬಾ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್ ತಂಡದ 15 ಮಂದಿಯನ್ನು, ಮಾರಿಗುಡಿ ವ್ಯವಸ್ಥಾಪನ ಸಮಿತಿಯ ಪವಿತ್ರಾ ನಾಗರಾಜ್ ತಂಡದ ಐವರಿಗೆ ವಿಜಯದ ಮುದ್ರೆಯನ್ನು ಚುನಾವಣೆಯಲ್ಲಿ ಸದಸ್ಯರು ಒತ್ತಿದ್ದರು.
ಹಿತರಕ್ಷಣಾ ಸಮಿತಿಯಿಂದ ಮಾರಿಗುಡಿ ಸಮಿತಿಯ ಅಧ್ಯಕ್ಷ ಪಟ್ಟಕ್ಕೆ ಎಂ.ಡಿ ಆನಂದ್ ಹೆಸರು ಘೋಷಣೆ ಮಾಡಲಾಗಿತ್ತು. ಇತ್ತ ವ್ಯವಸ್ಥಾಪನಾ ಸಮಿತಿಯಿಂದ ಕಡಿಮೆ ಸ್ಥಾನ ಗೆದ್ದರೂ, ಮತ್ತೊಂದು ಸಮಿತಿಯೊಂದಿಗೆ ಜೊತೆಗೂಡಿ ಮಾರಿಕಾಂಬ ದೇವಿಯ ಸೇವೆಗೆ ಮುಂದಡಿ ಇಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅಂತಿಮವಾಗಿ ಹಾಲಿ ಸಮಿತಿಗೆ ಭಾರೀ ಹಿನ್ನಡೆ ಎನ್ನುವಂತೆ ಹೊಸ ಸಮಿತಿಯ ದಿಗ್ಗಜರು ಒಂದಾಗಿದ್ದಾರೆ. ಆ ಮೂಲಕ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಗದ್ದುಗೆಯನ್ನು ಹೊಸ ಸಮಿತಿಯವರು ಏರೋದು ಖಚಿತಗೊಂಡಿದೆ.
ಪವಿತ್ರಾ ನಾಗರಾಜ್ ಗೆ ಒಲಿದ ಮಾರಿಗುಡಿ ಸಮಿತಿಯ ಅಧ್ಯಕ್ಷ ಪಟ್ಟ
ಎಂ.ಡಿ ಆನಂದ್ ಹಾಗೂ ಡಿಶ್ ಗುರು ತಂಡದವರು ಒಂದಾಗಿದ್ದಾರೆ. ಹೀಗಾಗಿ ಮಾರಿಗುಡಿ ಅಧ್ಯಕ್ಷರ ಹುದ್ದೆ ಸೇರಿದಂತೆ ಇತರೆ ಸ್ಥಾನವನ್ನು ಈ ಹೊಸ ತಂಡದ ಪಾಲಾಗೋದು ನಾಳೆ ಖಚಿತವಾಗಿದೆ. ಬಹುಮತಕ್ಕೆ ಬೇಕಿದ್ದಂತ 19 ಸದಸ್ಯರಿಗಿಂತ ಹೆಚ್ಚಿನ ಸದಸ್ಯರನ್ನು ಎರಡು ಸಮಿತಿಯವರು ಒಟ್ಟಾಗಿಸಿಕೊಂಡಿದ್ದಾರೆ. ಹೀಗಾಗಿ ಪವಿತ್ರಾ ನಾಗರಾಜ್ ಮಾರಿಗುಡಿ ಅಧ್ಯಕ್ಷರ ಪಟ್ಟ ಒಲಿಯೋದು ಗ್ಯಾರಂಟಿಯಾಗಿದೆ.
ಕಳೆದ 2001ರಲ್ಲಿಯೇ ಸಹ ಕಾರ್ಯದರ್ಶಿಯಾಗಿ ಪವಿತ್ರಾ ನಾಗರಾಜ್ ಮಾರಿಕಾಂಬೆಯನ್ನು ಸೇವೆ ಗೈದಿದ್ದಾರೆ. ಅಂದು ನಿಗದಿ ಪಡಿಸಿದ್ದಂತ ಒಂದು ಜಾತ್ರೆಯ ನಂತ್ರ ಬೇರೆಯವರಿಗೆ ಬಿಟ್ಟು ಕೊಡಬೇಕು ಎನ್ನುವ ನಿಯಮಕ್ಕೆ ಒಪ್ಪಿ, ತಮ್ಮ ಹುದ್ದೆಯಿಂದ ಹೊರ ನಡೆದಿದ್ದರು. ಅಂದು ಮಾರಿಗುಡಿ ಅಧ್ಯಕ್ಷರಾಗಿದ್ದವರು ಓಮನ್ ಸಿಂಗ್. ಉಪಾಧ್ಯಕ್ಷರಾಗಿದ್ದವರು ಇದೀಗ ಹಾಲಿ ಅಧ್ಯಕ್ಷರಾಗಿದ್ದ ಕೆ.ಎನ್ ನಾಗೇಂದ್ರ ಅವರು. ಓಮನ್ ಸಿಂಗ್ ಸಾವಿನ ಬಳಿಕ 20 ವರ್ಷಗಳಿಂದ ಅಧ್ಯಕ್ಷರಾಗಿ ಕೆ.ಎನ್ ನಾಗೇಂದ್ರ ಮುಂದುವರೆದು ಕೊಂಡು ಬಂದಿದ್ದರು.
ಹಾಲಿ ಹಳೆಯ ತಂಡದ ಭ್ರಷ್ಟಾಚಾರ, ಅವ್ಯವಹಾರಕ್ಕೆ ಬೇಸತ್ತು ಮಾರಿಕಾಂಬಾ ವ್ಯವಸ್ಥಾಪನ ಸಮಿತಿಯನ್ನು ಕಟ್ಟಿ, ಡಿಶ್ ಗುರು, ಕುರಿ ಮಂಜಣ್ಣ ಸೇರಿದಂತೆ ಇತರರೊಂದಿಗೆ ಹೋರಾಟಕ್ಕೆ ಇಳಿದವರು ಪವಿತ್ರಾ ನಾಗರಾಜ್. ನೀವು ಖರ್ಚು ವೆಚ್ಚದ ವಿವರವನ್ನೇ ಕೊಡಬೇಡಿ. ಚುನಾವಣೆ ಘೋಷಣೆ ಮಾಡಿ ಮೊದಲು ಎಂಬುದಾಗಿ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣೆಗೆ ಒತ್ತಡ ಹಾಕಿದ್ದರು.
ನಿರಂತರವಾಗಿ 7 ರಿಂದ 8 ವರ್ಷಗಳಿಂದ ಮಾರಿಗುಡಿ ಸಮಿತಿಯ ವ್ಯವಹಾರ ಪಾರದರ್ಶಕವಾಗಿರಬೇಕು ಎನ್ನುವ ಕಾರಣಕ್ಕೆ ಹೋರಾಟಕ್ಕಿಳಿದ ಪವಿತ್ರಾ ನಾಗರಾಜ್ ಅಂಡ್ ಟೀಂ, ಕಾನೂನು ಹಾಗೂ ನೈತಿಕ ಹೋರಾಟದ ಮೂಲಕ ಹೈಕೋರ್ಟ್ ವರೆಗೂ ಹಾಲಿ ಸಮಿತಿಯವರು ಪ್ರಕರಣ ಕೊಂಡೊಯ್ಯುವಂತೆ ಮಾಡಿದರೂ ಚುನಾವಣೆಗೆ ಆದೇಶ ಮಾಡಿಸಿ, ಗೆದ್ದಿದ್ದು ಇತಿಹಾಸವೇ ಸರಿ.
ತಳ ಸಮುದಾಯದ ಎಂ.ಡಿ ಆನಂದ್ ಅವರಿಗೆ ಮಾರಿಗುಡಿ ಪ್ರಧಾನ ಕಾರ್ಯದರ್ಶಿ ಸ್ಥಾನ ಫಿಕ್ಸ್
ಮಾರಿಕಾಂಬಾ ಹಿತರಕ್ಷಣಾ ಸಮಿತಿಯಲ್ಲಿ ಮುಂಚೂಣಿ ನಾಯಕರಾಗಿದ್ದವರು ಎಂ.ಡಿ ಆನಂದ್. ಆ ಸಮಿತಿಯ ತಂಡವನ್ನು ಕಟ್ಟಿಕೊಂಡು ಚುನಾವಣೆಗೆ ಇಳಿದು ಬರೋಬ್ಬರಿ 15 ಸ್ಥಾನಗಳನ್ನು ಗೆದ್ದುಕೊಂಡರು. ತಳ ಮಟ್ಟದಿಂದ ಕೆಲಸ ಮಾಡಿದ್ದೇ ಈ ತಂಡದ ಗೆಲುವಿನ ಸೀಕ್ರೇಟ್ ಎಂಬುದು ಸಮಿತಿಯ ಸದಸ್ಯರ ಮಾತು. ಇಂತಹ ಹಿತರಕ್ಷಣಾ ಸಮಿತಿಯಿಂದ ಮಾರಿಗುಡಿಯ ಅಧ್ಯಕ್ಷರ ಸ್ಥಾನಕ್ಕೆ ಎಂ.ಡಿ ಆನಂದ್ ಅವರ ಹೆಸರನ್ನು ಫೈನಲ್ ಮಾಡಲಾಗಿತ್ತು. ಆದರೇ ವೈಪರಿತ್ಯಗಳ ನಡುವೆ ಈಗ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತೃಪ್ತಿ ಪಟ್ಟಿಕೊಳ್ಳುವಂತಾಗಿದೆ.
ಎಂಟು ಸಮಾಜಗಳ ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಂಡಿರುವ ಎಂ.ಡಿ. ಆನಂದ್, ಸಮಾಜದ ವಿವಿಧ ಸ್ತರಗಳ ಜನರನ್ನು ಪ್ರತಿನಿಧಿಸುತ್ತಾರೆ. ಒಂದು ವೇಳೆ ಇವರು ಪ್ರಧಾನ ಕಾರ್ಯದರ್ಶಿಯಾದಲ್ಲಿ, ಅದು ಮಾರಿಕಾಂಬಾ ದೇವಿ ನ್ಯಾಸದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯಾಗಲಿದೆ. ಶೋಷಿತ ಮತ್ತು ಹಿಂದುಳಿದ ವರ್ಗಗಳ ನಾಯಕನೊಬ್ಬ ಇಂತಹ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯ ಉನ್ನತ ಸ್ಥಾನ ಅಲಂಕರಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಮಾರಿಕಾಂಬಾ ದೇವಿಯ ಭಕ್ತರ ಹಿತ ಕಾಪಾಡಲು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾವು ಶ್ರಮಿಸಿದ್ದೇವೆ. ನ್ಯಾಸ ಪ್ರತಿಷ್ಠಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಆಶಯ ನಮ್ಮದು ಎಂಬ ವಿಶ್ವಾಸದಲ್ಲಿ ಎಂ.ಡಿ ಆನಂದ್ ಇದ್ದಾರೆ. ಅವರು ನಾಳೆ ಬಹುತೇಕವಾಗಿ ಪವಿತ್ರಾ ನಾಗರಾಜ್ ಅವರ ತಂಡದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಾರಿಗುಡಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರುವುದು ಖಚಿತವಾಗಿದೆ.
ಕಳೆದ 13 ವರ್ಷಗಳಿಂದ ದೇವಿಯ ಭಕ್ತರ ಧ್ವನಿಯಾಗಿ ಹೋರಾಡುತ್ತಾ ಬಂದಿರುವ ಎಂ.ಡಿ ಆನಂದ್ ಅವರು, ಕೇವಲ ನಾಲ್ಕು ಸ್ಥಾನಗಳ ಕೊರತೆಯಿಂದ ಸ್ಪಷ್ಟ ಬಹುಮತದಿಂದ ವಂಚಿತವಾಗಿದ್ದರೂ, ಅತಿ ದೊಡ್ಡ ತಂಡವಾಗಿ ಹೊರಹೊಮ್ಮಿರುವ ಸಮಿತಿಯಿಂದ ಪ್ರಧಾನ ಕಾರ್ಯದರ್ಶಿ ಹುದ್ದೆ ಏರೋದು ಫಿಕ್ಸ್ ಆಗಿದೆ.
ಪವಿತ್ರಾ ನಾಗರಾಜ್ ತಂಡಕ್ಕೆ ಎರಡು ಸ್ಥಾನ, ಎಂ.ಡಿ ಆನಂದ್ ಟೀಂಗೆ ನಾಲ್ಕು ಸ್ಥಾನಗಳು ಹಂಚಿಕೆ
ಅಂದಹಾಗೇ ಪವಿತ್ರಾ ನಾಗರಾಜ್ ತಂಡಕ್ಕೆ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದಲ್ಲಿ ಎರಡು ಸ್ಥಾನ ಹಾಗೂ ಎಂ.ಡಿ ಆನಂದ್ ಅಂಡ್ ತಂಡಕ್ಕೆ ನಾಲ್ಕು ಸ್ಥಾನಗಳು ಫೈನಲ್ ಆಗಿವೆ ಎಂಬುದು ಉನ್ನತ ಮೂಲಗಳ ಮಾಹಿತಿ. ಸಾಗರದ ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾಗಿ ಪವಿತ್ರಾ ನಾಗರಾಜ್ ಅವರು ಹುದ್ದೆ ಅಲಂಕರಿಸಿದರೇ, ಅವರ ತಂಡದಿಂದ ಮತ್ತೊಬ್ಬರು ಕಾರ್ಯದರ್ಶಿಯಾಗಲಿದ್ದಾರೆ.
ಇನ್ನೂ ಎಂಡಿ ಆನಂದ್ ಅಂಡ್ ತಂಡಕ್ಕೆ ನಾಲ್ಕು ಸ್ಥಾನಗಳು ಪಾಲಾಗಲಿವೆ. ಎಂ.ಡಿ ಆನಂದ್ ಪ್ರಧಾನ ಕಾರ್ಯದರ್ಶಿಯಾದರೇ, ಉಪಾಧ್ಯಕ್ಷರು, ಖಜಾಂಚಿ ಸೇರಿದಂತೆ ಇತರೆ ಹುದ್ದೆಗಳನ್ನು ಅಲಂಕರಿಸೋದು ಗ್ಯಾರಂಟಿ ಎನ್ನಲಾಗುತ್ತಿದೆ. ಆ ಮೂಲಕ ಹೊಸ ಸದಸ್ಯರ ತಂಡವು ಸಾಗರದ ಮಾರಿಗುಡಿಯ ಗದ್ದುಗೆಯನ್ನು ನಾಳೆ ಏರೋದು ಅಂತಿಮ.
ಶಾಸಕರ ಮೂಲಕ ಹುದ್ದೆ ಲಾಭಿಗೆ ಇಳಿದ ಹಾಲಿ ತಂಡ
ನಾಳೆ ಪವಿತ್ರಾ ನಾಗರಾಜ್ ಹಾಗೂ ಎಂ.ಡಿ ಆನಂದ್ ತಂಡವು ಮಾರಿಗುಡಿ ಗದ್ದುಗೆ ಏರೋದು ಖಚಿತಗೊಳ್ಳುತ್ತಿದ್ದಂತೆ, ಹಾಲಿ ತಂಡದವರಿಂದಲೂ ಹುದ್ದೆಯ ಲಾಭಿ ಶುರುವಾಗಿದೆ. ಶಾಸಕರ ಮೂಲಕ ಮಾರಿಗುಡಿ ಸಮಿತಿಯ ಹುದ್ದೆಯನ್ನು ಪಡೆಯೋ ಅಂತಿಮ ಕಸರತ್ತಿನಲ್ಲೂ ತೊಡಗಿದ್ದಾರೆ ಎಂಬುದಾಗಿ ಉನ್ನತ ಮೂಲಗಳ ಮಾಹಿತಿಯಿಂದ ಕನ್ನಡ ನ್ಯೂಸ್ ನೌ ಗೆ ಲಭ್ಯವಾಗಿದೆ.
ಇದೆಲ್ಲದರ ನಡುವೆ ಗೆದ್ದಂತ ಹೊಸ ಸದಸ್ಯರನ್ನು ಜೊತೆಗೂಡಿಸಿಕೊಂಡು ಹಾಲಿ ಮಾರಿಗುಡಿ ಸದಸ್ಯರ ಟೀಂ ಅಧಿಕಾರಕ್ಕೇರೋದಕ್ಕೂ ತೆರೆ ಮರೆಯಲ್ಲಿ ಪ್ರಯತ್ನ ನಡೆಸಿದ್ದಾಗಿ ಆರೋಪಗಳು ಕೇಳಿ ಬಂದಿದೆ. ಲಕ್ಷ ಲಕ್ಷ ಆಮಿಷವನ್ನು ಒಡ್ಡಿ, ನಮಗೆ ಸಾಥ್ ಕೊಡಿ, ನಾವೇ ಮಾರಿಗುಡಿ ಸಮಿತಿಯ ಗದ್ದುಗೆ ಏರೋಣ ಎಂಬ ಲಾಭಿಯನ್ನೂ ನಡೆಸಿರೋದಾಗಿ ಹೇಳಲಾಗುತ್ತಿದೆ. ಆದರೇ ಅದಕ್ಕೆ ಹೊಸ ಎರಡು ತಂಡಗಳು ಒಪ್ಪಿಲ್ಲ. ಹೀಗಾಗಿಯೇ ನಾಳೆ ಹೊಸ ತಂಡವೇ ಮಾರಿಗುಡಿ ಸಮಿತಿಯ ಪಟ್ಟಕ್ಕೇರೋದು ಬಹುತೇಕ ಫೈಲನ್ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ನಾಳೆ ಸಾಗರದ ಮಾರಿಕಾಂಬ ನ್ಯಾಸ ಪ್ರತಿಷ್ಠಾನಕ್ಕೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಹಿತರಕ್ಷಣಾ ಸಮಿತಿ, ವ್ಯವಸ್ಥಾಪನಾ ಸಮಿತಿಯವರು ಜೊತೆಗೂಡಿ ಗದ್ದುಗೆ ಏರೋದು ಬಹುತೇಕ ಖಚಿತವಾಗಿದೆ. ಅಧ್ಯಕ್ಷರಾಗಿ ಪವಿತ್ರಾ ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ ಆನಂದ್ ಪಟ್ಟವಾಗೋದು ಫಿಕ್ಸ್ ಆಗಿದೆ. ಅಂತಿಮವಾಗಿ ಏನೆಲ್ಲಾ ಬದಲಾವಣೆಗಳು, ಚಮತ್ಕಾರ ನಡೆಯಲಿದೆ ಎಂಬುದನ್ನು ನಾಳೆಯವರೆಗೆ ಕಾದು ನೋಡಬೇಕಿದೆ.







