ಬೆಂಗಳೂರು : “ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಅಗತ್ಯವಿಲ್ಲ. ಹಳ್ಳಿಯಿಂದ ದೆಹಲಿವರೆಗೂ ಕಾಂಗ್ರೆಸ್ ಪಕ್ಷ ನಮ್ಮ ಮುಖ್ಯಮಂತ್ರಿಗಳ ಪರವಾಗಿ ನಿಲ್ಲಲಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತು ಹೇಳುತ್ತಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸ್ಪೀಕರ್ ಕೋಳಿವಾಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೆಪಿಸಿಸಿ ಅಧ್ಯಕ್ಷ ನಾನು, ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷರು ರೆಹಮಾನ್ ಖಾನ್. ಇಲ್ಲಿ ನಾನೇ ಹೇಳುತ್ತಿದ್ದೇನೆಲ್ಲ. ಅವರ ರಾಜೀನಾಮೆ ಪ್ರಶ್ನೆಯೇ ಉದ್ಭವ ಆಗುವುದಿಲ್ಲ ಅಂತ ಎಂದು ಹೇಳಿದರು.
ನಮ್ಮ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನವರು ರಾಜಕೀಯವಾಗಿ ಷಡ್ಯಂತ್ರ ರೂಪಿಸುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿರುವುದನ್ನು ಸಹಿಸಲು ವಿರೋಧ ಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿ ನಮ್ಮ ಸರ್ಕಾರ ಇರುವುದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆ ಬಗ್ಗೆ ಕೇಳಿದಾಗ, “ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪ ಮಾಡುತ್ತಿದ್ದು, ಈ ವಿಚಾರದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಸರ್ಕಾರದ ಸಚಿವರುಗಳು ಅನೇಕ ಪ್ರಕರಣಗಳ ತನಿಖೆ ಎದುರಿಸುತ್ತಿದ್ದು, ಮೊದಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಲಿ. ನಂತರ ಈ ಬಗ್ಗೆ ಚರ್ಚೆ ಮಾಡಲಿ” ಎಂದು ತಿಳಿಸಿದರು.
ಶಿವಮೊಗ್ಗ: ಕಾವೇರಿ-2.0 ತಂತ್ರಾಂಶದೊಂದಿಗೆ ‘ಇ-ಆಸ್ತಿ ಖಾತಾ ತಂತ್ರಾಂಶ’ ವ್ಯವಸ್ಥೆ ಜಾರಿ