ಬೆಂಗಳೂರು: ಊಟ ಪ್ರಿಯರಿಗೆ ಸುವರ್ಣಾವಕಾಶ ಎನ್ನುವಂತೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ತಿನ್ನುವಂತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಟಗರು, ಕುರಿ ಪಟ್ಲಿ, ಕೋಳಿ, ಟಿವಿ ಸೇರಿದಂತೆ ಇತರೆ ಬಹುಮಾನ ಕೂಡ ಸಿಗಲಿದೆ.
ಈ ಬಗ್ಗೆ ಆಯೋಜಕರು, ವಕೀಲರಾದಂತ ಅನಿಲ್ ರೆಡ್ಡಿ ಮಾಹಿತಿಯನ್ನು ಹಂಚಿಕೊಂಡಿದ್ದು, ಕರ್ನಾಟಕ ಸುವರ್ಣ ಸಂಭ್ರಮ -50ರ ಪ್ರಯುಕ್ತ ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
125 ಜನರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ
ರಾಜ್ಯಾಧ್ಯಂತ ಸ್ಪರ್ಧಿಗಳು ಇದರಲ್ಲಿ ಭಾಗಿಯಾಗಬಹುದಾಗಿದೆ. ಈ ಸ್ಪರ್ಧೆಯಲ್ಲಿ 125 ಸ್ಪರ್ಧಾಳುಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಮೊದಲು ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶವಿದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗಿಯಾಗಬಹುದಾಗಿದೆ. ಸ್ಪರ್ಧಾರ್ಥಿಗಳಿಗೆ 45 ನಿಮಿಷಗಳ ಕಾಲಮಿತಿಯನ್ನು ರಾಗಿಮುದ್ದೆ, ನಾಟಿ ಕೋಳಿ ಸಾರು ಉಣ್ಣಲು ನಿಗದಿ ಪಡಿಸಲಾಗಿದೆ ಎಂದಿದ್ದಾರೆ.
ಇನ್ನೂ ಮಧ್ಯಪಾನ ಮಾಡಿದವರಿಗೆ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶವಿಲ್ಲ. ವ್ಯವಸ್ಥಾಪಕರ ತೀರ್ಮಾನವೇ ಅಂತಿಮ. ನಿಮ್ಮ ಆರೋಗ್ಯಕ್ಕೆ ನೀವೇ ಸಂಪೂರ್ಣ ಜವಾಬ್ಧಾರರು ಎಂಬುದಾಗಿ ನಿಬಂಧನೆಗಳಲ್ಲಿ ತಿಳಿಸಲಾಗಿದೆ.
ಏನೆಲ್ಲ ಬಹುಮಾನ ಕೊಡ್ತಾರೆ ಗೊತ್ತಾ?
ಪುರುಷರ ವಿಭಾಗದಲ್ಲಿ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ ಟಗರನ್ನು ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ ಕುರಿ ಪಟ್ಲಿ, ತೃತೀಯ ಬಹುಮಾನವಾಗಿ 2 ನಾಟಿ ಕೋಳಿ ನೀಡಲಾಗುವುದು ಎಂದು ಆಯೋಜಕರಾದಂತ ಅನಿಲ್ ರೆಡ್ಡಿ ತಿಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಗೆದ್ದಂತವರಿಗೆ ಮೊದಲ ಬಹುಮಾನವಾಗಿ 32 ಇಂಚಿನ ಟಿವಿ, ದ್ವಿತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್, ತೃತೀಯ ಬಹುಮಾನವಾಗಿ ಕಿಚನ್ ಸೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.
ನಾಳೆ ಈ ಸ್ಥಳದಲ್ಲಿ ಸ್ಪರ್ಧೆ ಆಯೋಜನೆ
ದಿನಾಂಕ 10-11-2024ರ ನಾಳೆ ಮಧ್ಯಾಹ್ನ 12 ಗಂಟೆಯಿಂದ 12.45ರ ಸಮಯದಲ್ಲಿ ಸ್ಪರ್ಧೆ ನಡೆಯಲಿದೆ. ಬೆಂಗಳೂರಿನ 24ನೇ ಮುಖ್ಯರಸ್ತೆ, ಪರಂಗಿಪಾಳ್ಯ ಹತ್ತಿರ, ಹೆಚ್ ಎಸ್ ಆರ್ ಬಡವಾಣೆ ಸೆಕ್ಟರ್-1ರಲ್ಲಿ ಆಯೋಜಿಸಲಾಗಿದೆ.
ಸಚಿವ ರಾಮಲಿಂಗಾರೆಡ್ಡಿ ಸೇರಿ ಇತರೆ ಗಣ್ಯರು ಭಾಗಿ
ನಾಳೆ ನಡೆಯುವಂತ ರಾಗಿಮುದ್ದೆ, ನಾಟಿ ಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ವಿಜೇತರಾದಂತವರಿಗೆ ಬಹುಮಾನವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿತರಿಸಲಿದ್ದಾರೆ. ಮಾಜಿ ಸಂಸದ ವಿಎಸ್ ಉಗ್ರಪ್ಪ, ಕುಪೇಂದ್ರ ರೆಡ್ಡಿ ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮುಖಂಡ ವಾಸುದೇವ ರೆಡ್ಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಮಾಪತಿ ಶ್ರೀನಿವಾಸ ಗೌಡ, ಸ್ಯಾಂಡಲ್ ವುಡ್ ನಿರ್ಮಾಪಕ ಕೆ.ಮಂಜು ಕೂಡ ಭಾಗಿಯಾಗಲಿದ್ದಾರೆ ಅಂತ ಅನಿಲ್ ರೆಡ್ಡಿ ತಿಳಿಸಿದ್ದಾರೆ.
ನೋಂದಣಿ ಹೇಗೆ.?
ಆಸಕ್ತರು ಕಾರ್ಯಕ್ರಮದ ಆಯೋಜಕರಾದಂತ ಅನಿಲ್ ರೆಡ್ಡಿ – 9916506837 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗುವುದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಾಯಿಸಿಕೊಂಡ ಬಳಿಕ ನಾಳೆ ನಾಟಿ ಕೋಳಿ, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಗ್ಯಾರಂಟಿ ಬಗ್ಗೆ ಸುಳ್ಳು ಜಾಹೀರಾತು: ‘ಬಿಜೆಪಿ ನಾಯಕ’ರಿಗೆ ಈ ಆಫರ್ ಕೊಟ್ಟ ‘ಡಿಸಿಎಂ ಡಿ.ಕೆ ಶಿವಕುಮಾರ್’
BIG NEWS : ಪಾಕಿಸ್ತಾನದ ‘ರೈಲ್ವೇ ನಿಲ್ದಾಣ’ದ ಬಾಂಬ್ ಸ್ಪೋಟದಲ್ಲಿ 24 ಮಂದಿ ಸಾವು : ಇಲ್ಲಿದೆ ಭಯಾನಕ ವಿಡಿಯೋ !