ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುವ ಲಸಿಕೆಗಳನ್ನು ತಪ್ಪದೇ ಪೋಷಕರು ಹಾಕಿಸಲು ತಿಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಹೇಳಿದರು.
ಸೋಮವಾರ, ಜಿಪಂ ನ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಸಿಕೆಗಳ ಕುರಿತು ತಪ್ಪು ನಂಬಿಕೆ ಹೊಂದಿದ ಪಾಲಕರಿಗೆ ಸರಿಯಾದ ಮಾಹಿತಿ ನೀಡಿ ಲಸಿಕೆ ಹಾಕಿಸುವಂತೆ ಲಸಿಕೆಗಳ ಕುರಿತು ಮಾಹಿತಿ ನೀಡಬೇಕು. ಜಾಗತಿಕ ಲಸಿಕಾ ಸಪ್ತಾಹದ ಅಂಗವಾಗಿ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಆಯೋಜಿಸುವ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಲಸಿಕೆ ಹಾಕಿಸಲು ಅರಿವು ಮೂಡಿಸುವುದರ ಮೂಲಕ ಜಿಲ್ಲೆಯಾದ್ಯಂತ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಬಾಲ್ಯ ಚೈತನ್ಯ ಮಕ್ಕಳ ಆರೈಕೆ: ಬೇಸಿಗೆಯಲ್ಲಿ ಲಭ್ಯವಾಗುವ ಸರಕಾರಿ ಹಾಸ್ಟೆಲ್‌ಗಳಲ್ಲಿ ಈ ಹಿಂದಿನಂತೆ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ವೈದ್ಯರಿಂದ ಚಿಕಿತ್ಸೆ ಹಾಗೂ ಐಸಿಡಿಎಸ್‌ನಿಂದ ಊಟ ವಸತಿಯೊಂದಿಗೆ 14 ದಿನಗಳ ಕಾಲ ತಾಯಿಯೊಂದಿಗೆ ಮಗುವನ್ನು ಆರೈಕೆಗೆ ಸಿದ್ದತೆ ಮಾಡಲು ಸೂಚಿಸಿದರು. ಸೀಳು ತುಟಿ, ತಿರುಚಿದ ಪಾದಗಳ ಶಸ್ತ್ರಚಿಕಿತ್ಸೆಯನ್ನು ಬಿಎಮ್‌ಸಿಆರ್‌ಸಿ ಯಲ್ಲಿ ಸಹ ಮಾಡಿಸುವಂತೆ ಸೂಚಿಸಿದರು.
ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನ: ಹೆರಿಗೆ ನಂತರದಲ್ಲಿ ಜನನದ ಮಧ್ಯ ಅಂತರಕ್ಕಾಗಿ ಪಿಪಿಐಯುಸಿಡಿ ತಕ್ಷಣವೇ ಅಳವಡಿಕೆಗೆ ಒತ್ತು ನೀಡಲು ತಿಳಿಸಿದರು. ಅಲ್ಲದೆ ಪುರುಷರಿಗೆ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಬಗ್ಗೆ ಹೆಚ್ಚಿನ ಜಾಗೃತಿ ನೀಡಿ ಶಸ್ತ್ರಚಿಕಿತ್ಸೆ ಮಾಡಿಸಲು ತಿಳಿಸಿದರು.
ಅಗ್ನಿ ಸುರಕ್ಷತೆ ಸಪ್ತಾಹ ಎಲ್ಲ ಆಸ್ಪತ್ರೆಗಳಲ್ಲಿ ಆಚರಣೆಗೆ ಸೂಚನೆ: ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳು, ಬಾಣಂತಿಯರು ಸೇರಿದಂತೆ ರೋಗಿಗಳ ಸುರಕ್ಷತೆ ಎಲ್ಲ ಅಗ್ನಿ ಸುರಕ್ಷಾ ಪರಿಕರಗಳನ್ನು ಪರಿಶೀಲಿಸಲು ಸೂಚಿಸಿದರು. ಪ್ರತಿ ಮಂಗಳವಾರ ಆಯುಷ್ಮಾನ ಆರೋಗ್ಯ ಶಿಬಿರಗಳನ್ನು ತಪ್ಪದೆ ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇತರೆ ಪರೀಕ್ಷೆ ಹಾಗೂ ಅಗತ್ಯ ಚಿಕಿತ್ಸೆ ನೀಡಲು ಸೂಚಿಸಿದರು.
ಕ್ಷಯರೋಗ: ಕ್ಷಯರೋಗ ಪತ್ತೆಗೆ ಇರುವ 23 ಟ್ರುನಾಟ್ ಹಾಗೂ 5 ಸಿಬಿನಾಟ್ ಕೇಂದ್ರಗಳಲ್ಲಿ ಹೆಚ್ಚಿನ ಪರೀಕ್ಷೆ ಕೈಗೊಳ್ಳಲು ತಿಳಿಸಿದರು. ಅಸಾಂಕ್ರಾಮಿಕ ರೋಗ ತಡೆ: ಹಾವು ಕಡಿತ, ನಾಯಿ ಕಡಿತ ಲಸಿಕೆಯನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇಡಲು ಸೂಚನೆ ನೀಡಿದರು.
ಡೆಂಗ್ಯು ರೋಗ ನಿಯಂತ್ರಣ: ಡೆಂಗ್ಯು ರೋಗ ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಜಾಗೃತಿ ನೀಡಲು ಹಾಗೂ ಮಲೇರಿಯಾ, ಜೆಇ ಪ್ರಕರಣಗಳ ನಿಯಂತ್ರಣಕ್ಕೆ ಸೂಚಿಸಿದರು. ರಕ್ತದಾನ: ಪ್ರಸ್ತುತ ವರ್ಷ ದಾಖಲೆ ಪ್ರಮಾಣದಲ್ಲಿ 20278 ಯುನಿಟ್ ರಕ್ತ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಕ್ತ ಕೊರತೆಯಾಗದಂತೆ ತಿಳಿಸಿದರು.
ಕುಷ್ಠರೋಗ: ನರ ಮತ್ತು ಚರ್ಮದ ಖಾಯಿಲೆಯಾಗಿರುವ ಕುಷ್ಠರೋಗವನ್ನು ಹೆಚ್ಚು ಜಾಗೃತಿ ನೀಡಿ ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸೂಚಿಸಿದರು. ಅಂಗಾಂಗ ದಾನ ನೋಂದಣಿ: 8379 ಜನರ ನೋಂದಣಿಯೊಂದಿಗೆ ಬಳ್ಳಾರಿ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಎರಡನೆ ಜಿಲ್ಲೆಯ ಸ್ಥಾನದಿಂದ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸಾರೆಡ್ಡಿ, ಬಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ.ಇಂದುಮತಿ, ಎಸ್‌ಎಮ್‌ಓ ಡಾ.ಆರ್.ಎಸ್ ಶ್ರೀಧರ್, ಆರ್‌ಸಿಹೆಚ್‌ಓ ಡಾ.ಹನುಮಂತಪ್ಪ, ಡಿಎಮ್‌ಓ ಡಾ.ಆರ್ ಅಬ್ದುಲ್ಲಾ, ಡಿಎಸ್‌ಓ ಡಾ.ಮರಿಯಂಬಿ ವಿ.ಕೆ., ಡಿಎಫ್‌ಡಬ್ಲ್ಯುಓ ಡಾ.ಪೂರ್ಣಿಮಾ ಕಟ್ಟಿಮನಿ, ಡಿಟಿಓ ಡಾ.ಇಂದ್ರಾಣಿ.ವಿ., ಡಿಎಲ್‌ಓ ಡಾ.ವಿರೇಂದ್ರಕುಮಾರ್, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಅರುಣ್‌ಕುಮಾರ್, ಡಾ.ಭರತ್‌ಕುಮಾರ್, ಡಾ.ಸುನೀಲ್, ಡಾ.ಮಂಜುನಾಥ ಜವಳಿ, ಡಿಹೆಚ್‌ಇಓ ಈಶ್ವರ ಹೆಚ್ ದಾಸಪ್ಪನವರ, ಡಾ.ಸುರೇಶ ಕುಮಾರ್, ಡಾ.ಜಬೀನ್ ತಾಜ್, ಡಿಎನ್‌ಓ ಗಿರೀಶ್, ಡಿಪಿಎಮ್ ವೆಂಕೋಬ್ ನಾಯ್ಕ್, ಡಿಎಓ ಬಸವರಾಜ್, ಫಾರ್ಮಸಿ ಅಧಿಕಾರಿ ತಮನ್ನಾ, ಆರ್‌ಕೆಎಸ್‌ಕೆ ಸಲಹೆಗಾರ ಮನೋಹರ್ ಉಪಸ್ಥಿತರಿದ್ದರು.